ಇಂದು ವೈದ್ಯ-ರೋಗಿಗಳ ಮಧ್ಯೆ ಅವಿನಾಭಾವ ಸಂಬಂಧವಿಲ್ಲ: ಮಡಕೆ

ಲೋಕದರ್ಶನ ವರದಿ

ಶೇಡಬಾಳ 04: ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆತನಕ್ಕೆ ಫ್ಯಾಮಿಲಿ ಡಾಕ್ಟರ್ ಅಂತ ಒಬ್ಬರು ಇರುತ್ತಿದ್ದರು. ವೈದ್ಯರು ಹಾಗೂ ರೋಗಿಗಳ ಮಧ್ಯೆ ಅವಿನಾಭಾವ ಸಂಬಂಧವಿರುತ್ತಿತ್ತು. ಆದರೆ ಇಂದು ವೈದ್ಯಕೀಯ ವೃತ್ತಿ ವ್ಯಾಪಾರಿಕರಣಗೊಳ್ಳುತ್ತಿರುವುದರಿಂದ  ಹಣಕಾಸಿನ ವ್ಯವಹಾರಕ್ಕೆ ಮಾತ್ರ ಸೀಮಿತಗೊಂಡಿದೆ. ಇದರಿಂದಾಗಿ ವೈದ್ಯರು ಹಾಗೂ ರೋಗಿಗಳ ಮಧ್ಯೆ ಅವಿನಾಭಾವ ಸಂಬಂಧ ಇಲ್ಲದಂತಾಗಿದೆ ಎಂದು ಸಾಂಗಲಿಯ ಖ್ಯಾತ ಹೃದಯರೋಗ ತಜ್ಞ ಡಾ. ಅನಿಲ ಮಡಕೆ ಹೇಳಿದರು.

ಅವರು ಸಾಂಗಲಿ ಜಿಲ್ಲೆಯ ಕುಂಡಲ ಗ್ರಾಮದಲ್ಲಿ ರಣಸಂಗ್ರಾಮ ಸೋಶಿಯಲ್ ಫೌಂಡೇಶನ ವತಿಯಿಂದ ವೈದ್ಯರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕೊರೋನಾ ಸಮಯದಲ್ಲಿ ಸೇವೆ ಸಲ್ಲಿಸಿದ ವೈದ್ಯರನ್ನು ಸತ್ಕರಿಸಿ ಮಾತನಾಡುತ್ತಿದ್ದರು. 

ಕುಂಡಲ ಹಾಗೂ ಪಲುಸ ಪರಿಸರದಲ್ಲಿನ ವೈದ್ಯರು, ದೀಪಕ ಲಾಡ ಮಿತ್ರ ಮಂಡಳಿ, ರಣಸಂಗ್ರಾಮ ಸೋಶಿಯಲ್ ಫೌಂಡೇಶನ ಇವರು ಕೊರೋನಾ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಸೇವೆ ಸಲ್ಲಿಸಿರುವುದು ಪ್ರಶಂಸನೀಯವಾಗಿದೆ. ಇಂದಿನ ದಿನಗಳಲ್ಲಿ ಅನಾರೋಗ್ಯ ಪ್ರತಿಯೊಬ್ಬರನ್ನು ಕಾಡುತ್ತಿದೆ. ಶ್ವಾಸಕೋಶ ತೊಂದರೆ, ಹೃದಯಾಘಾತ, ರಕ್ತದೊತ್ತಡ, ಮೆದುಳಿನಲ್ಲಿ ರಕ್ತಸ್ರಾವ, ಸಂಧಿವಾತ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದಾನೆ.

ಮುನ್ನೆಚ್ಚರಿಕೆಯಾಗಿ ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರ ಸೇವನೆ, ವ್ಯಾಯಾಮ, ಒತ್ತಡವಿಲ್ಲದ ಜೀವನ ಈ ಮೂರು ಸೂತ್ರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಆರೋಗ್ಯಯುತ ಜೀವನ ಸಾಗಿಸಲು ಸಾಧ್ಯವೆಂದು ಡಾ. ಅನಿಲ ಮಡಕೆ ಹೇಳಿದರು.

ತಾಸಗಾಂವ ಡಿವಾಯ್ಎಸ್ಪಿ ಸಚೀನ ತೊರಬುಲೆ, ಅಭಿಮನ್ಯು ಪಾಟೀಲ, ಡಾ. ಅಮೋಲ ಪವಾರ, ಡಾ. ರಾಜನ್ ಕಾಮತ ಸೇರಿದಂತೆ ಕುಡಲ ಹಾಗೂ ಪಲುಸ ತಾಲೂಕಿನ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಇದ್ದರು.