ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಸಂಚು ನಡೆಯುತ್ತಿದೆ: ಪ್ರಧಾನಿ ನರೇಂದ್ರ ಮೋದಿ

ಚಿಕ್ಕಬಳ್ಳಾಪುರ 20: ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ದೊಡ್ಡ ದೊಡ್ಡ ನಾಯಕರು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಂಚು ನಡೆಯುತ್ತಿದೆ. ಆದರೆ, ನನಗೆ ದೇಶದ ತಾಯಂದಿರ ಆಶೀರ್ವಾದ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ಇಂದು ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಕಸಿತ ಭಾರತಕ್ಕಾಗಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ. ಕರ್ನಾಟಕದ ಅಭಿವೃದ್ಧಿಗೆ ಕೇಂದ್ರದ ಎನ್‌ಡಿಎ ಸರ್ಕಾರ ಬದ್ಧವಾಗಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಿಸಾನ್ ಸಮ್ಮಾನ್‌ ಹಣದ ಜತೆಗೆ 2,000 ರೂ. ಸೇರಿಸಿ 4,000 ರೂಪಾಯಿಯನ್ನು ರೈತರಿಗೆ ನೀಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಸ್ಥಗಿತಗೊಳಿಸಲಾಯಿತು. ಇದರಿಂದಲೇ ಕಾಂಗ್ರೆಸ್ ರೈತ ವಿರೋಧಿ ಎಂಬುದು ಗೊತ್ತಾಗುತ್ತದೆ. ರೈತ ವಿರೋಧಿ ಕಾಂಗ್ರೆಸ್​​ಗೆ ಇಲ್ಲಿನ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ನೀಡಿದ ಪ್ರಧಾನಿ ಮೋದಿ, ನಾವು ಉಚಿತವಾಗಿ ಪಡಿತರ ನೀಡುತ್ತಿದ್ದೇವೆ, ಇದು ಮೋದಿ ಗ್ಯಾರಂಟಿ ಮತ್ತು ಮುಂದಿನ 5 ವರ್ಷವೂ ಉಚಿತವಾಗಿ ಪಡಿತರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಉಚಿತವಾಗಿ ಬಡವರಿಗೆ ವೈದ್ಯಕೀಯ ಚಿಕಿತ್ಸೆ ಸಿಗಬಹುದು ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ನಾವು ಅದನ್ನು ಸಾಕಾರಗೊಳಿಸಿದ್ದೇವೆ. ಮೋದಿ ಸರ್ಕಾರದ ಅತಿದೊಡ್ಡ ಫಲಾನುಭವಿಗಳು ಎಸ್​ಸಿ, ಎಸ್​ಟಿ ಜನಾಂಗ ಹಾಗೂ ಬಡವರಾಗಿದ್ದಾರೆ.

ಕಳೆದ 10 ವರ್ಷಗಳಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದ 25 ಕೋಟಿ ಮಂದಿಯನ್ನು ಬಡತನ ರೇಖೆಯಿಂದ ಮೇಲೆ ತಂದಿದ್ದೇವೆ ಎಂದರು.