ಮಕ್ಕಳ ಬೆಳವಣಿಗೆಗೆ ರಂಗಭೂಮಿ ಪೂರಕವಾಗಲಿದೆ: ಕೆ.ಸಣ್ಣ ಕರಿಯಪ್ಪ

ಸಿರುಗುಪ್ಪ. ಜ.12. ಇಂದಿನ ಮಕ್ಕಳು ಮೊಬೈಲ್, ಟಿವಿಗಳಿಗೆ ಮಾರು ಹೋಗಿದ್ದಾರೆ. ಹಾಗಾಗಿ ಅವರನ್ನು ಸರಿದಾರಿಗೆ ತರುವಲ್ಲಿ ಸ್ವಾಮಿ ವಿವೇಕಾನಂದ ಮತ್ತು ರಂಗಕರ್ಮಿ ಶಿವಶಂಕರ್ ನಾಯ್ಡುರಂತವರ ಅದರ್ಶಗಳನ್ನು ರಂಗಭೂಮಿ ಮೂಲಕ ಮಕ್ಕಳಿಗೆ ತಿಳಿಸಿ ಅವರ ಬೆಳವಣಿಗೆಯನ್ನು ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ಸರ್ಕಾರವು ಸಹ ಪ್ರತಿ ಶಾಲೆಯಲ್ಲಿ ರಂಗಶಿಕ್ಷಕರ ನೇಮಕಾತಿಗೆ ಮುಂದಾದರೆ ಶೈಕ್ಷಣಿಕ ಪ್ರಗತಿಯು ಸಹ ಸಾಧ್ಯವೆಂದು ಶಾಲೆಯ ಮುಖ್ಯೋಪಾಧ್ಯಾಯ ಕೆ.ಸಣ್ಣ ಕರಿಯಪ್ಪ ನುಡಿದರು. 

ತಾಲೂಕಿನ ಭೈರಗಾಮದಿನ್ನೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ) ಸಂಸ್ಥೆಯು ಯುವ ರತ್ನ ಸ್ವಾಮಿ ವಿವೇಕಾನಂದ ಮತ್ತು ಕಾರಂತ ರತ್ನ ಶಿವಶಂಕರ್ ನಾಯ್ಡು ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ 'ಶಾಲೆಯಿಂದ ರಂಗದೆಡೆಗೆ' ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತಾನಾಡಿದರು. 

ನಂತರ ಅತಿಥಿ ಶಿಕ್ಷಕ ಆರ್‌.ಪಿ.ಈಶಪ್ಪ ಮಾತಾನಾಡಿ ನಾಡಿನ ಮೂಲೆಮೂಲೆಯಲ್ಲೂ ಶಂಕರ್ ನಾಯ್ಡುರವರ ಶಿಷ್ಯರಿದ್ದಾರೆ. ಅವರಲ್ಲಿ ನಾನೂ ಒಬ್ಬ. ಮಕ್ಕಳಿಗೆ ಓಪಚಾರಿಕ ಶಿಕ್ಷಣದ ಜೊತೆಗೆ ಪಠ್ಯೇತರ ರಂಗಶಿಕ್ಷಣ ನೀಡಿದರೆ ಕಲಿಕೆ ಸುಗಮವಾಗುತ್ತದೆ. ಒಂದು ವಾರದ ಪಾಠಕ್ಕಿಂತ ಒಂದು ಗಂಟೆಯ ನಾಟಕವೇ ಶ್ರೇಷ್ಠ ಎಂಬುದನ್ನು ಸರ್ಕಾರ ಇನ್ನಾದರೂ ಮನಗಾಣಬೇಕಿದೆ.2003ರ ನಂತರ ನಾಡಿನಲ್ಲಿ ರಂಗಶಿಕ್ಷಕರ ನೇಮಕವಾಗಿಲ್ಲ. ಈ ಅವಧಿಯಲ್ಲಾದರೂ ರಂಗಶಿಕ್ಷಕರ ನೇಮಕಾತಿಯಾಗಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. 

ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ರಚನೆ ಮತ್ತು ಆರ್‌.ಪಿ.ಈಶಪ್ಪ ನಿರ್ದೇಶನ 'ಧ್ಯಾನ ಸಿದ್ಧ' ನಾಟಕವು ಶಾಲಾ ಮಕ್ಕಳಿಂದ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಅತಿಥಿ ಶಿಕ್ಷಕರಾದ ಎನ್‌.ದೇವಿರಮ್ಮ, ಕೆ.ಪುರುಷೋತ್ತಮ ಹಾಗೂ ನರಸಿಂಹ ಮತ್ತಿತರರು ಭಾಗವಹಿಸಿದ್ದರು.  

ನಾಟಕದಲ್ಲಿ ಸ್ವಾಮಿ ವಿವೇಕಾನಂದನಾಗಿ ಲೇಖನ.ಆರ್‌.ಪಿ, ವಿಶ್ವನಾಥ ದತ್ತನಾಗಿ ವೀರೇಶ್, ಭುವನೇಶ್ವರಿಯಾಗಿ ಅಶ್ವಿನಿ, ರಾಮಕೃಷ್ಣ ಪರಮಹಂಸನಾಗಿ ಪಿ.ವಿನಯ್, ರೌಡಿಗಳಾಗಿ ಮಣಿಕಂಠ, ಮನೋಜ್ ಮನೋಜ್ಞವಾಗಿ ಅಭಿನಯಿಸಿದರು.