ಅಬಲರ ಏಳ್ಗೆಯೇ ನಿಜವಾದ ಧರ್ಮ: ಬಸವೇಶ್ವರಿ ಮಾತಾಜಿ

ಅಬಲರ ಏಳ್ಗೆಯೇ ನಿಜವಾದ ಧರ್ಮ: ಬಸವೇಶ್ವರಿ ಮಾತಾಜಿ The upliftment of the downtrodden is true Dharma: Basaveshwari Mataji

ಅಬಲರ ಏಳ್ಗೆಯೇ ನಿಜವಾದ ಧರ್ಮ: ಬಸವೇಶ್ವರಿ ಮಾತಾಜಿ 


ವಿಜಯಪುರ 11 : ಧರ್ಮವೆಂದರೆ ಜಾತಿ, ಮತ, ಆಚರಣೆ ಮತ್ತು ಭಕ್ತಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವುದು, ಪ್ರೀತಿ, ದಯೆ, ಕರುಣೆ ಹಾಗೂ ಪ್ರಾಮಾಣಿಕತೆಯಿಂದ ಬದುಕುವುದೇ ನಿಜವಾದ ಧರ್ಮ ಎಂದು ಕಾರವಾರ ಜಿಲ್ಲೆಯ ಅತ್ತಿವೇರಿ ಬಸವದಾಮದ ಪೂಜ್ಯ ಶ್ರೀ ಬಸವೇಶ್ವರಿ ಮಾತಾಜಿ ಹೇಳಿದರು.  

ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ಬಸವೇಶ್ವರ, ಅಲ್ಲಮ, ಇಕ್ಬಾಲ್, ಡಾ. ಬಿ.ಆರ್‌. ಅಂಬೇಡ್ಕರ್ ಹಾಗೂ ಸ್ವಾಮಿ ವಿವೇಕಾನಂದ ಪೀಠಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಚಿಂತನೆಗಳು ಜ್ಞಾನ, ಸಮಾನತೆ ಮತ್ತು ಮಾನವೀಯತೆಯ ಸಮಾಜ ನಿರ್ಮಾಣಕ್ಕೆ ದಾರೀದೀಪವಾಗಿವೆ ಎಂದರು.  

ಹುಟ್ಟಿನ ಆಧಾರದ ಮೇಲೆ ಮನುಷ್ಯರನ್ನು ಮೇಲು-ಕೀಳು ಎಂದು ವಿಭಜಿಸುವ ವ್ಯವಸ್ಥೆಯನ್ನು ಬಸವಣ್ಣನವರು ಪ್ರಶ್ನಿಸಿದರು. ಶಿಕ್ಷಣ, ಧಾರ್ಮಿಕ ಹಕ್ಕು ಮತ್ತು ಸಾಮಾಜಿಕ ಗೌರವ ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂಬ ಆಶಯವನ್ನು ಅವರು ಪ್ರತಿಪಾದಿಸಿದ್ದರು. ಇಷ್ಟಲಿಂಗ ಧಾರಣೆಯ ಮೂಲಕ ದೇವರನ್ನು ಕಾಣಲು ಮಧ್ಯವರ್ತಿಯ ಅಗತ್ಯವಿಲ್ಲ; ಪ್ರತಿಯೊಬ್ಬರಿಗೂ ದೇವರನ್ನು ಸ್ಮರಿಸುವ ಹಾಗೂ ತನ್ನೊಳಗಿನ ದೈವತ್ವವನ್ನು ಅರಿಯುವ ಹಕ್ಕಿದೆ ಎಂಬ ಸಂದೇಶ ನೀಡಿದರು.  

ಬಲಿ, ಮೂಢನಂಬಿಕೆ ಮತ್ತು ಅನಗತ್ಯ ಆಚರಣೆಗಳಿಗಿಂತ ಶುದ್ಧ ನಡತೆ, ಪ್ರಾಮಾಣಿಕ ಕಾಯಕ, ದಯೆ, ಕರುಣೆ ಹಾಗೂ ಮಾನವೀಯತೆಯೇ ದೇವರನ್ನು ಒಲಿಸುವ ಮಾರ್ಗವಾಗಿದೆ. ಕಾಯಕ ಮತ್ತು ದಾಸೋಹದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಇಂದಿಗೂ ಜಾತಿ-ಮತದ ಭೇದ, ಅಸಮಾನತೆ ಮತ್ತು ಮೂಢನಂಬಿಕೆಗಳು ಸಂಪೂರ್ಣವಾಗಿ ದೂರವಾಗಿಲ್ಲ. ಆದ್ದರಿಂದ ಬಸವಣ್ಣನವರ ವಿಚಾರಧಾರೆಯನ್ನು ಜಯಂತಿ ಹಾಗೂ ಆಚರಣೆಗಳಿಗೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾತಾಜಿ ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಮೇತ್ರಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ವಿದ್ಯಾವತಿ ಬೆನ್ನೂರಮಠ ನಿರೂಪಿಸಿದರು. ಡಾ. ಸಮಿವುದ್ದಿನ್ ವಂದಿಸಿದರು. ಕು. ಇಫ್ರಾ ಯಕ್ಕುಂಡಿ ಕುರಾನ್ ಪಠಣ, ಕು. ವಿದ್ಯಾ ಕೊಕಟನೂರ ಹಾಗೂ ಕು. ಪೃಥ್ವಿ ಸೊರಡಿ ಭಗವದ್ಗೀತೆ, ಕು. ರುಕ್ಸಾನಾ ಮುಜಾವರ ಬಸವಣ್ಣನವರ ವಚನ ವಾಚಿಸಿದರು.  

ಸಿಕ್ಯಾಬ್ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಾಧ್ಯಾಪಕರು, ಶಿಕ್ಷಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.