ಪ್ರವಚನದ ಮೂಲಕ ದೀಪ್ತಿಯ ಬೆಳಕನ್ನು ಚೆಲ್ಲಿಸಿದ ಶ್ರೇಷ್ಠ ದಾರ್ಶನಿಕ

The great visionary who shed light through discourse..

ಪ್ರವಚನದ ಮೂಲಕ ದೀಪ್ತಿಯ ಬೆಳಕನ್ನು ಚೆಲ್ಲಿಸಿದ ಶ್ರೇಷ್ಠ ದಾರ್ಶನಿಕ... 

ವಿಜಯಪುರ 05: ಶ್ರೀ ಸಿದ್ದೇಶ್ವರ ಶ್ರೀಗಳು ಸರಳ ಜೀವನದ ಸಾಕಾರಮೂರ್ತಿಗಳಾಗಿದ್ದು, ಮೃದು ಸ್ವಭಾವ ಮತ್ತು ಅಂತಃಕರಣ-ಮಾತೃ ಹೃದಯವಂತಿಕೆಯನ್ನು ಹೊಂದಿದ್ದರು. ಅವರು ವಿರಳ ವಿಷಯಗಳನ್ನು ಸರಳ ಭಾಷೆಯಲ್ಲಿ ಹೃದಯಕ್ಕೆ ಮುಟ್ಟುವಂತೆ, ತಮ್ಮ ಆಫ್ತಭಾವದ ಪ್ರವಚನ ಮೂಲಕ ದೀಪ್ತಿಯ ಬೆಳಕನ್ನು ಇಡೀ ಜಗತ್ತಿಗೆ ನೀಡಿ, ನುಡಿದಂತೆ ನಡೆದ ಶತಮಾನ ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದರು. ಅಧ್ಯಾತ್ಮದ ಶಿಖರವೇ ಆಗಿದ್ದ ಅವರು ಜನರ ಜೀವನದಲ್ಲಿ ಕವಿದ ಕತ್ತಲೆಯನ್ನು ಸರಿಸಿವ, ಬೆಳಕಿನ ದೀಪವನ್ನು ಹಚ್ಚಿದವರು. ಅವರೊಬ್ಬ ವ್ಯಕ್ತಿಯಲ್ಲ, ದಾರ್ಶನಿಕ ಶಕ್ತಿ ಮತ್ತು ದೈವರೂಪದ ಮಹಾಚೇತನರಾಗಿದ್ದರು ಎಂದು ಪ್ರೊ. ಎಂ.ಎಸ್‌.ಖೊದ್ನಾಪುರ ಅಭಿಪ್ರಾಯಪಟ್ಟರು.  

ಅವರು ನಗರದ ಅಥಣಿ ರಸ್ತೆಯ ಅಲ್‌-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಎನ್‌.ಜಿ.ಓ ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ದಿನಾಂಕ: 03-01-2025 ರಂದು ಜರುಗಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಗುರುನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಅವರು ಮಾತನಾಡುತ್ತಾ, ಶ್ರೀಗಳ ಆಧ್ಯಾತ್ಮಿಕ ವೈಚಾರಿಕತೆಯ ವಿಚಾರಗಳು ಸಾಗರದಷ್ಟು ವಿಶಾಲ ಮತ್ತು ಆಕಾಶದಷ್ಟು ಎತ್ತರವಾಗಿದ್ದು, ಶಾಂತಿ, ಧ್ಯಾನ, ಜ್ಞಾನ, ಯೋಗ ಮತ್ತು ಅಧ್ಯಾತ್ಮಗಳ ಮೂಲಕ ವ್ಯಕ್ತಿಯ ಜೀವನದ ಸಾರ್ಥಕತೆ ಮತ್ತು ಪರಿಪೂರ್ಣತೆಯ ಬಗ್ಗೆ ಹೂ-ಬಳ್ಳಿ, ಗಿಡ-ಮರ, ಸೂರ್ಯ-ಚಂದ್ರ ಮತ್ತು ಪ್ರಕೃತಿಯ ಬಗ್ಗೆ ಉದಾಹರಿಸುತ್ತಿದ್ದರು. ಮರೆಯಲಾಗದ ಮಾಣಿಕ್ಯನಂತಿದ್ದ ಶ್ರೀಗಳ ಆದರ್ಶಪ್ರಾಯ ಬದುಕು, ಪ್ರವಚನದ ನೀತಿ-ಬೋಧನೆ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಬಸವಾದಿ ಪ್ರಮಥರಂತೆ ಸದಾ ಸಮಾಜಕ್ಕೆ ಒಳಿತನ್ನು ಬಯಸುವ ಮತ್ತು ಇಡೀ ಮಾನವ ಕುಲಕ್ಕೆ ತ್ಯಾಗ, ಪರೋಪಕಾರ, ಸಮನತೆ, ಸಮಭಾವ, ಸಚ್ಚಾರಿತ್ರ್ಯ, ಸನ್ನಡತೆ, ಸಮಷ್ಠಿಭಾವಗಳ ಮೂಲಕ ಭರತಖಂಡದ ಜನಮಾನಸದಲ್ಲಿ ಅಚ್ಚಳಿಯದೇ ಮನದಲ್ಲಿ ಉಳಿದ ಮಹಾನ ಚೇತನರಾಗಿದ್ದರು. ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿದ್ದ ಶ್ರೀಗಳು ಬದುಕಿ-ಬಾಳಿದ ಕಾಲದಲ್ಲಿ ನಾವೆಲ್ಲರೂ ಇದ್ದೇವೆ ಎಂದರೆ ಧನ್ಯರು ಮತ್ತು ಪುನೀತರಾಗಿದ್ದೇವೆ ಎಂದು ಹೇಳಿದರು.  

ಈ ಗುರುನಮನ ಕಾರ್ಯಕ್ರಮದಲ್ಲಿ ವಿಶ್ವ ಕಂಡ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ನಂತರ, ಸುತ್ತಮುತ್ತಲಿನ ಬಡಾವಣೆಗಳ ಸುಮಾರು ನೂರಾರು ಜನ ತಾಯಂದಿರು, ಮಕ್ಕಳು, ಹಿರಿಯರು ಶ್ರೀಗಳ ಭಾವಚಿತ್ರಕ್ಕೆ ಭಕ್ತಿ-ಭಾವದ ಮೂಲಕ ಪುಷ್ಪಾರ್ಚನೆಯ ಮೂಲಕ ಗುರು ನಮನ ಸಲ್ಲಿಸಿದರು. 

ಈ ಸಮಾರಂಭದಲ್ಲಿ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಬಲವಂತ ಬಳೂಲಗಿಡದ, ಎಸ್‌.ಎಸ್‌.ತೆನಹಳ್ಳಿ, ಮಲ್ಲನಗೌಡ ಪಾಟೀಲ, ಬಾಬು ಕೋಲಕಾರ, ನಾನಾಸಾಬ ಕೂಟನೂರ, ಆರ್‌.ಬಿ.ಕುಮಟಗಿ, ಶಶಿ ಉತ್ನಾಳ, ಆಚಾರ್ಯ ಆರ್‌.ಎಸ್‌.ಹಿರೇಮಠ, ರಮೇಶ ಕೋಷ್ಠಿ, ಗಂಗಾಧರ ಚಾಬುಕಸವಾರ, ವೆಂಕಟೇಶ ಹೊಸಮನಿ, ಪ್ರೊ. ಎಂ.ಆರ್‌.ಜೋಶಿ, ಎಸ್‌.ಆರ್‌. ಪತ್ತಾರ ಇನ್ನಿತರರು ಹಾಗೂ ಅಕ್ಕನ ಬಳಗ ಮಹಿಳಾ ಸದಸ್ಯರು ಭಾಗವಹಿಸಿದ್ದರು. ಶಿಕ್ಷಕಿ ಮಂಜುಳಾ ಜೋಶಿ ಪ್ರಾರ್ಥನಾಗೀತೆ ಪ್ರಚುರಪಡಿಸಿದರು. ಪ್ರೊ. ಆರ್‌.ಬಿ.ಕುಮಟಗಿ ಸ್ವಾಗತಿಸಿದರು. ಸಂತೋಷ ಪಾಟೀಲ ವಂದಿಸಿದರು.