ವರವಿ ಮೌನೇಶ್ವರ ಜಾತ್ರೆ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ

ವರವಿ ಮೌನೇಶ್ವರ ಜಾತ್ರೆ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ  The Varavi Mouneshwara Jatra stands as a testament to Hindu-Muslim communal harmony


ಗದಗ, ಸೆ.5: ಜಿಲ್ಲೆಯ ವರವಿ ಕ್ಷೇತ್ರದ ಮೌನೇಶ್ವರ ದೇವಸ್ಥಾನವು ಧಾರ್ಮಿಕ ನಂಬಿಕೆ, ಪಾರಂಪರಿಕ ಆಚರಣೆ ಹಾಗೂ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪ್ರಸಿದ್ಧವಾಗಿದ್ದು, ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ಹಾಗೂ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ವಿಶೇಷ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ ಎಂದು ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ತಿಳಿಸಿದರು.  

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮಹತ್ವದ ಕುರಿತು ವಿವರಿಸಿದರು. ಸ್ವಯಂಭೂ ಲಿಂಗ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮೌನೇಶ್ವರರ ಕಾಲು ಗೂಟಿಗೆ ತಾಕಿದ ಕಲ್ಲು ಸ್ವಯಂಭೂ ಶಿವಲಿಂಗವಾಗಿ, ಮೌನೇಶ್ವರರು ತಮ್ಮ ಸಂಪೂರ್ಣ ಶಕ್ತಿಯನ್ನು ಅದರಲ್ಲಿ ಸಮಾವೇಶಗೊಳಿಸಿದ್ದಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಕ್ಷೇತ್ರ ಅತ್ಯಂತ ಪ್ರಭಾವಶಾಲಿ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ ಎಂದರು.  

ಮೌನೇಶ್ವರರು ಹಿಂದೂಗಳಿಗೆ ಪರಮಾತ್ಮನಾಗಿ, ಮುಸ್ಲಿಂ ಬಾಂಧವರಿಗೆ ‘ಮೌನುದ್ದೀನ್ ಬಾದಶಾ’ ಅಥವಾ ಫಕೀರರಾಗಿ ಪೂಜಿಸಲ್ಪಡುತ್ತಾರೆ. ವರವಿ ಕ್ಷೇತ್ರದಲ್ಲಿ ಉಭಯ ಧರ್ಮೀಯರು ಸಾಮರಸ್ಯದಿಂದ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆಯಾಗಿದೆ ಎಂದು ಹೇಳಿದರು.  

ಆದಿಲ್ಶಾಹಿ ಆಡಳಿತದ ಸಂದರ್ಭದಲ್ಲಿ ವಿಜಯಪುರದ ಬಾದಶಾಹನಿಗೆ ಮೌನೇಶ್ವರರು ಕನಸಿನಲ್ಲಿ ಆಜ್ಞಾಪಿಸಿದ ಬಳಿಕ ಅವರ ದೂತರು ಇಲ್ಲಿಗೆ ಬಂದು ದೇವಸ್ಥಾನ ನಿರ್ಮಿಸಿದರು ಎಂಬ ಐತಿಹ್ಯವೂ ಇದೆ ಎಂದು ತಿಳಿಸಿದರು.