ಕ್ವಿಟ್ ಇಂಡಿಯಾ ಚಳವಳಿ ದೇಶದ ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿತ್ತು: ಹೊಸಮಠ ಶ್ರೀ

ಕ್ವಿಟ್ ಇಂಡಿಯಾ ಚಳವಳಿ ದೇಶದ ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿತ್ತು: ಹೊಸಮಠ ಶ್ರೀ  The Quit India Movement ignited the fire of struggle among the people of the country: Hosamatha Sri

ಲೋಕದರ್ಶನ ವರದಿ 

ಹಾವೇರಿ 10: ಜಾತಿ, ಧರ್ಮ, ವಯಸ್ಸಿನ ಹಂಗು ತೊರೆದು ಕ್ವಿಟ್ ಇಂಡಿಯಾ ಚಳವಳಿಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಧುಮುಕಿದ್ದರಿಂದ ಹೋರಾಟದ ಕಿಚ್ಚು ಹೆಚ್ಚಾಯಿತು. ದೇಶದಾದ್ಯಂತ ಹೊಸ ನಾಯಕರನ್ನು ಸೃಷ್ಟಿಸಿದ ಈ ಚಳವಳಿಯ ಪರಿಣಾಮವಾಗಿ ಕೊನೆಗೂ ಬ್ರಿಟಿಷ್ ಸರ್ಕಾರ ಭಾರತದಿಂದ ಕಾಲ್ಕಿತ್ತಿತು ಎಂದು ಹೊಸಮಠದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮೀಜಿ ಹೇಳಿದರು.  

ನಗರದ ಹೊಸಮಠದ ಆವರಣದಲ್ಲಿ ಬಸವ ಕೇಂದ್ರ, ಶ್ರೀ ಹೊಸಮಠ ಹಾವೇರಿ ಹಾಗೂ ಅರಳಿಕಟ್ಟಿ ಪ್ರಕಾಶನ ಹಾವೇರಿ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಕ್ವಿಟ್ ಇಂಡಿಯಾ ದಿನಾಚರಣೆ ಹಾಗೂ ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ನಡೆದ ‘ಸಾರ್ಥಕ ಸಂವಾದ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.  

ಕ್ವಿಟ್ ಇಂಡಿಯಾ ಚಳವಳಿ ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಬೀದಿಗಿಳಿದು ಹೋರಾಡುವ ಶಕ್ತಿ ತುಂಬಿತ್ತು. ಮೊದಲ ಹಂತದ ನಾಯಕರು ಜೈಲು ಸೇರುತ್ತಿದ್ದಂತೆ ಎರಡನೇ ಹಂತದ ನಾಯಕರು ಹೋರಾಟವನ್ನು ಮುನ್ನಡೆಸಿದರು. ಇದು ಭಾರತದ ಇತಿಹಾಸದಲ್ಲೇ ಮಹತ್ವದ ಕ್ರಾಂತಿಯಾಗಿದ್ದು, ಈ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರೂ ದೇಶದ ಗಮನ ಸೆಳೆದಿದ್ದರು ಎಂಬುದು ಹೆಮ್ಮೆಯ ಸಂಗತಿ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೇಮಾನಂದ ಲಕ್ಕಣ್ಣವರ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ‘ದೇಶ ನನ್ನದು, ಎಲ್ಲರೂ ನಮ್ಮವರು’ ಎಂಬ ಭಾವನೆ ಜನರಲ್ಲಿ ಬಲವಾಗಿತ್ತು. ಆದರೆ ಸಮಕಾಲೀನ ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವಾರ್ಥಿಗಳಾಗುತ್ತಿರುವುದು ವಿಷಾದನೀಯ. ಐತಿಹಾಸಿಕ ಪ್ರಜ್ಞೆಯೊಂದಿಗೆ ಪ್ರಾಮಾಣಿಕ ಬದ್ಧತೆಯನ್ನು ರೂಢಿಸಿಕೊಳ್ಳಬೇಕು. ವೈಚಾರಿಕ ಪ್ರಜ್ಞೆಯ ಹಾದಿಯಲ್ಲಿ ಸಾಗುವಾಗ ನಮ್ಮತನವನ್ನು ಬಿಟ್ಟುಕೊಡಬಾರದು. ಹೊಸ ಸಮಾಜ ನಿರ್ಮಾಣಕ್ಕೆ ಗಟ್ಟಿತನ ಅಗತ್ಯ ಎಂದು ಹೇಳಿದರು.  

ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ ಮಾತನಾಡಿ, ಮಹಾತ್ಮ ಗಾಂಧೀಜಿಯವರ ‘ಮಾಡು ಇಲ್ಲವೇ ಮಡಿ’ ಕರೆ ಇಡೀ ದೇಶದ ಜನರ ಆತ್ಮದ ಕೂಗಾಯಿತು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆ ಭಾರತೀಯರಲ್ಲಿ ರೋಮಾಂಚನ ಮೂಡಿಸಿತ್ತು. ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರ ಹಲವು ಪ್ರಯತ್ನಗಳನ್ನು ನಡೆಸಿದರೂ ದೇಶಭಕ್ತರ ಹೋರಾಟದ ಮುಂದೆ ಸೋಲೊಪ್ಪಿಕೊಳ್ಳಬೇಕಾಯಿತು ಎಂದರು.  

ಸಂಶೋಧಕ ಪ್ರಮೋದ ನಲವಾಗಲ್ ಮಾತನಾಡಿ, ಹಾವೇರಿ ನಗರದ ದ್ಯಾಮವ್ವನ ಕಟ್ಟೆಯಿಂದ ಆರಂಭವಾದ ಧ್ವಜಾರೋಹಣ ಚಳವಳಿ ಅಂದಿನ ಮುನ್ಸಿಪಾಲಿಟಿ ಮೇಲೆಯೂ ಧ್ವಜ ಹಾರಿಸುವ ಹಂತಕ್ಕೆ ಬೆಳೆಯಿತು. ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಷ್ಟ್ರಧ್ವಜಾರೋಹಣ ನಡೆದ ಸಂದರ್ಭವೂ ಹಾವೇರಿಯ ಹೋರಾಟದ ಇತಿಹಾಸದಲ್ಲಿ ಮಹತ್ವ ಪಡೆದಿದೆ. ರಾಣೆಬೆನ್ನೂರಿನ ಸ್ಥಳೀಯ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲು ಠರಾವು ಪಾಸ್ ಮಾಡಲಾಗಿದ್ದು, ಇದು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಕಿಚ್ಚಿಗೆ ಸಾಕ್ಷಿಯಾಗಿದೆ ಎಂದರು.  

ಸ್ವಾತಂತ್ರ್ಯ ಹೋರಾಟಗಾರರಾದ ರಮಾನಂದ ಮನ್ನಂಗಿ ಅವರ ಪುತ್ರಿ ಗಿರಿಜಮ್ಮ ಮನ್ನಂಗಿ, ಗುಡ್ಡಪ್ಪ ಮೈಲಾರ ಅವರ ಪುತ್ರಿ ಅನಸೂಯಾ ಮೈಲಾರ, ವಕೀಲ ಎಂ.ಎಫ್‌. ಕುಸಗೂರ, ಮುಖಂಡ ಸಂಜಯಗಾಂಧಿ ಸಂಜೀವಣ್ಣನವರ, ಉಪನ್ಯಾಸಕ ಸಿದ್ದೇಶ್ವರ ಹುಣಸಿಕಟ್ಟಿಮಠ ಮಾತನಾಡಿದರು.  

ಚನ್ನಬಸಪ್ಪ ಮೆಳ್ಳಳ್ಳಿ, ಚಂಪಾ ಹುಣಸಿಕಟ್ಟಿ, ಕಾಂತೇಶರೆಡ್ಡಿ ಗೋಡಿಹಾಳ, ಸುಭಾಷ್ ಮಡಿವಾಳರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಿಂಗಪ್ಪ ಆರೇರ್ ನಿರೂಪಿಸಿದರು. ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿದರು. ಸುರೇಶ ಕತ್ತೆಬೆನ್ನೂರು ವಂದಿಸಿದರು.