ದೇವಸ್ಥಾನಗಳು ಧರ್ಮ ಸಂಸ್ಕೃತಿಯ ಪ್ರತೀಕ : ಶ್ರೀ ರಂಭಾಪುರಿ ಜಗದ್ಗುರುಗಳು

ಹರಪನಹಳ್ಳಿ ಅಕ್ಟೋಬರ್-27: ಭೌತಿಕ ಸಂಪನ್ಮೂಲಗಳಿಂದ ಮಾನವನಿಗೆ ಸಂತೃಪ್ತಿ ಸಮಾಧಾನ ತರದು. ಅದರೊಂದಿಗೆ ಆಧ್ಯಾತ್ಮಿಕದ ಹಸಿವು ಮುಖ್ಯ. ದೇವಸ್ಥಾನಗಳು ಧರ್ಮ ಸಂಸ್ಕೃತಿಯ ಕೇಂದ್ರಗಳಾಗಿ ಶಾಂತಿ ನೆಮ್ಮದಿಯನ್ನು ಕೊಡುವ ಸ್ಥಾನಗಳಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ನಗರದ ಹರಪುರಿ ಸಾರಿ ಬಯಲು ಶ್ರೀ ವೀರಭದ್ರೇಶ್ವರ ಸ್ವಾಮಿಯ ನೂತನ ರಥದ ಪ್ರಾಣ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ವೀರಶೈವ ಧರ್ಮ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಸದಾ ರಕ್ಷಿಸಿಕೊಂಡು ಬಂದಿದೆ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸುತ್ತಾ ಬಂದಿದೆ. ವೈಚಾರಿಕತೆ ಮತ್ತು ಆಧುನಿಕತೆಯ ಹೆಸರಿನಲ್ಲಿ  ಧಾರ್ಮಿಕ ಸಂಪ್ರದಾಯ ಪರಂಪರೆಗಳು ಕಲುಷಿತಗೊಳ್ಳಬಾರದು. ಜ್ಯೋತಿ ಬೆಳಗುತ್ತಿದೆ ಆದರೆ ಉರಿಯುತ್ತಿಲ್ಲ. ಮನುಷ್ಯ ಇಂದು ಉರಿಯುತ್ತಿದ್ದಾನೆ ಆದರೆ ಬೆಳಗುತ್ತಿಲ್ಲ. ಬೆಳಗುವುದಕ್ಕೂ ಮತ್ತು ಉರಿಯುವುದಕ್ಕೂ ಬಹಳಷ್ಟು ಅಂತರವಿದೆ. ಒಂದು ಬದುಕಿನ ವಿಕಾಸದ ಸಂಕೇತವಾದರೆ ಇನ್ನೊಂದು ವಿನಾಶದ ಸಂಕೇತವಾಗಿದೆ. ಪ್ರಾಚೀನ ಇತಿಹಾಸವುಳ್ಳ ಹರಪುರಿ ಸಾರಿ ಬಯಲು ಶ್ರೀ ವೀರಭದ್ರೇಶ್ವರ ದೇವಸ್ಥಾನ ಭಕ್ತ ಸಂಕುಲದ ನಂಬಿಗೆ ಶ್ರದ್ಧಾ ಕೇಂದ್ರವಾಗಿದೆ. ಭವ್ಯ ಭದ್ರ ನೂತನ ರಥ ನಿರ್ಮಿಸಿ ಇಂದು ಪ್ರಾಣ ಪ್ರತಿಷ್ಠಾಪನೆ ಮಾಡಿ ಲೋಕಾರ್ಪಣೆಗೊಳ್ಳುತ್ತಿರುವುದು ತಮ್ಮೆಲ್ಲರ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ. ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆ ಶ್ರೀ ವೀರಭದ್ರಸ್ವಾಮಿಯ ಅವತಾರದ ಮೂಲ ಉದ್ದೇಶವಾಗಿದೆ. ಸಮಾಜದಲ್ಲಿ ಬೆಳೆಯುತ್ತಿರುವ ದುಷ್ಟ ಶಕ್ತಿಗಳನ್ನು ನಾಶಗೊಳಿಸಿ ಸತ್ಯ ಸಂಸ್ಕೃತಿ ಎತ್ತಿ ಹಿಡಿಯಲು ಶ್ರೀ ವೀರಭದ್ರಸ್ವಾಮಿ ಸಕಲರಿಗೂ ಸ್ಫೂರ್ತಿಯ ಸೆಲೆಯಾಗಲೆಂದು ಶುಭ ಹಾರೈಸಿದರು. 

ನೇತೃತ್ವ ವಹಿಸಿದ ಕಣ್ವಕುಪ್ಪಿ ಗವಿಮಠದ ಡಾ|| ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯನ ಬದುಕು ಬಲಗೊಳ್ಳಬೇಕಲ್ಲದೇ ದುರ್ಬಲಗೊಳ್ಳಬಾರದು. ದೇವರ ಲೀಲೆ ಯಾರಿಂದಲೂ ಅರಿಯಲು ಸಾಧ್ಯವಿಲ್ಲ. ಅರಿತು ಬಾಳಿದರೆ ಬಾಳು ಬೆಳಗುವುದು. ಮರೆತರೆ ಅವನತಿ ಬಿಟ್ಟಿದ್ದಲ್ಲ ಎಂದರು. ಅಧ್ಯಕ್ಷತೆ ವಹಿಸಿದ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಡಿಯ ಬಂದವನಿಗೂ ನೀರು ಎರೆದವರಿಗೂ ಮರ ನೆರಳು ನೀಡಿ ಹಣ್ಣು ಕೊಡುತ್ತದೆ. ಅದರಂತೆ ದೇವರು ನಮ್ಮೆಲ್ಲರಿಗೂ ಸಮಾನವಾದ ಅವಕಾಶಗಳನ್ನು ಕೊಟ್ಟಿದ್ದಾನೆ. ನಂಬಿಕೆ ಮತ್ತು ಶ್ರದ್ಧೆಯಿಂದ ನಡೆದು ಜೀವನದಲ್ಲಿ ನೆಮ್ಮದಿ ಪಡೆಯಬೇಕು. ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಗೋತ್ರಪುರುಷನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿ ನಮ್ಮೂರಿನಲ್ಲಿ ನೆಲೆಗೊಂಡಿರುವುದು ನಮ್ಮೆಲ್ಲರ ಸುಕೃತವೆಂದರು. ಗುರುಪಾದದೇವರ ಮಠದ ಗುರುಪಾದಯ್ಯ ಸ್ವಾಮಿಗಳು ಮತ್ತು ತೆಗ್ಗಿನಮಠದ ಶಿವಕುಮಾರಸ್ವಾಮಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಥ ನಿರ್ಮಾಣಕ್ಕಾಗಿ ವಿಶೇಷವಾಗಿ ಶ್ರಮಿಸಿದ ಪೂಜಾರ ವೀರಮಲ್ಲಪ್ಪ, ಪಾಟೀಲ ಬೆಟ್ಟನಗೌಡ, ಪಾಟೀಲ ಪ್ರವೀಣ್, ಪೂಜಾರ ಷಣ್ಮುಖಪ್ಪ, ಗಂಗಪ್ಪ ಮತ್ತು ಸಂಗಡಿಗರನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿ ಗುರು ರಕ್ಷೆ ನೀಡಿದರು.