ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಹೇಳಿ : ಸಚಿವ ಜಾರಕಿಹೊಳಿ

ಚಿಕ್ಕೋಡಿ ಲೋಕಸಭಾ ಚುನಾವಣಾ ನಿಮಿತ್ತ ಸಂಕೇಶ್ವರದಲ್ಲಿ ಕಾಂಗ್ರೆಸ್ ಕಾರ‌್ಯಕರ್ತರ ಸಭೆಯಲ್ಲಿ ಕಾರ‌್ಯಕರ್ತರಿಗೆ ಕರೆ 

ಸಂಕೇಶ್ವರ 21: ರಾಜ್ಯ ಇತಿಹಾಸದಲ್ಲಿ ಇಂಥ ಗ್ಯಾರಂಟಿ ಯೋಜನೆಗಳನ್ನ ಯಾರೂ ಕೊಟ್ಟಿಲ್ಲ. ಸಿದ್ದರಾಮಯ್ಯ, ಡಿಕೆಶಿ ಸರಕಾರದ ಸಾಧನೆಗಳನ್ನ ಜನರಿಗೆ ಹೇಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆ ಪೂರ್ವ ನೀಡಿದ ಭರವಸೆಗಳನ್ನು ಜಾರಿಗೆ ತರುವ ಮೂಲಕ ಜನತೆಗೆ ನೀಡಿದ ಭರವಸೆಗಳನ್ನ ಈಡೇರಿಸಿ ರಾಜ್ಯದ ಜನತೆಯ ಸಹಾಯಕ್ಕೆ ನಿಂತಿದ್ದೇವೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕೇವಲ ಪಾಕಿಸ್ತಾನ, ರಾಮ ಮಂದಿರ ಮತ್ತು ಸರ್ಜಿಕಲ್ ಸ್ಟ್ರೈಕ್ ಇವುಗಳ ಹೆಸರಿನ ಮೇಲೆ ಪ್ರಚಾರ ಗಿಟ್ಟಿಸಿಕೊಂಡಿದೆ ಎಂದು ಬಿಜೆಪಿ ವಿರುದ್ದ ಸಚಿವ ಸತೀಶ ಜಾರಕಿಹೊಳಿ ಹರಿಹಾಯ್ದರು.  

ಗುರುವಾರ ಸಂಕೇಶ್ವರದ ನೇಸರಿ ಗಾರ್ಡನ್‌ದಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣಾ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು, ಬರುವ ಮೇ. 7 ತಾರೀಖು ಲೋಕಸಭೆ ಚುನಾವಣೆ ಇದೆ. ಪೂರ್ವ ಸಿದ್ದತೆ ಬಗ್ಗೆ ಕಾರ‌್ಯಕರ್ತರು ಯಾವ ರೀತಿ ಸನ್ನದರಾಗಬೇಕು ಎನ್ನುವದನ್ನು ಅರಿಯಬೇಕು. ಕಾಂಗ್ರೆಸ ಸರಕಾರ 5 ಗ್ಯಾರೇಂಟಿ ಯೋಜನೆಗಳಿಂದ ಸಾಕಷ್ಟು ಜನ ಲಾಭ ಪಡೆಯುವ ಬಗ್ಗೆ ಜನರಿಗೆ ತಿಳಿಹೇಳಬೇಕು. ಮುಂಗಡಪತ್ರದಲ್ಲಿ 60 ಸಾವಿರ ಕೋಟಿ ಈ ಯೋಜನೆಗಳಿಗಾಗಿ ಮೀಸಲು ಇಡಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಮನಮೋಹನ ಸಿಂಗ್ ಪ್ರಧಾನಿ ಇದ್ದಾಗ 70 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಮೋದಿ ಸರಕಾರ ಬಡವರ ಪರ ಇಲ್ಲ. ದೀನ ದಲಿತರ ಬಡವರ ಪರ ಸರಕಾರ ಇಲ್ಲ ಎನ್ನುವದು ಸಾಭೀತಾಗಿದೆ. ಬಡವರ ಬಗ್ಗೆ ಮೋದಿ ಅವರಿಗೆ ಕಾಳಜಿ ಇಲ್ಲ ಎಂದರು.  

ಅದೇ ರೀತಿ 30 ವರ್ಷಗಳಿಂದ ಭದ್ರಕೋಟಿಯಾಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಬಿಜೆಪಿ ವಶಕ್ಕೆ ಇದ್ದು, ಇದನ್ನು ಭೇಧಿಸುವ ಕಾರ‌್ಯ ಕಾರ‌್ಯಕರ್ತರು ಮಾಡಬೇಕು ಎಂದು ನುಡಿದರು. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪರ ಒಲವು ಇದ್ದು, ಮತದಾರರು ಕಾಂಗ್ರೆಸ್‌ಗೆ ಹೆಚ್ಚಿನ ಮತ ಚಲಾಯಿಸುವುದರ ಮೂಲಕ ಗೆಲುವಿಗೆ ಸಹಕರಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಯಾರೆ ಆದರು, ಎಲ್ಲರೂ ಕಾಂಗ್ರೆಸ್ ಗೆಲುವಿಗೆ ಸನ್ನದ್ದರಾಗಬೇಕು, ಚುನಾವಣೆಯಲ್ಲಿ ಕಾರ್ಯಕರ್ತರ ಪಾತ್ರ ಬಹಳ ಮುಖ್ಯ ಎಂದರು. 

ಇದೇ ವೇಳೆ ಬುಡಾ ನೂತನ ಅಧ್ಯಕ್ಷ ಲಕ್ಷ್ಮಣ ಚಿಂಗಳೆ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಸಮರ​‍್ಕವಾಗಿ ಅನುಷ್ಠಾನಗೊಳಿಸಲಾಗಿದ್ದು, ಬಡ ಜನರ ಪರ ಯೋಜನೆ ರೂಪಿಸಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷದ ಪರ ರಾಜ್ಯದಲ್ಲಿ ಗಾಳಿ ಬಿಸುತ್ತಿದ್ದು, ಸಚಿವ ಸತೀಶ ಜಾರಕಿಹೋಳಿ ಅವರ ಸಾಮಾಜಿಕ ನ್ಯಾಯ ಪರ ಕಾರ್ಯ ನಿರ್ವಹಿಸಿದ್ದಾರೆ.ಈ ಬಾರಿ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸೋಣ ಎಂದು ನುಡಿದರು.  

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ ಅವರು ಮಾತನಾಡಿ, ಬಿಜೆಪಿ ಪಕ್ಷವು ಕಳೆದ ಹತ್ತು ವರ್ಷದಿಂದ ಕೆಂದ್ರದಲ್ಲಿ ಅಧಿಕಾರದಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಸುಳ್ಳು ಆಶ್ವಾಸನೆ ನೀಡುತ್ತಾ ಬಂದಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಚುನಾವಣೆ ಪೂರ್ವ ನೀಡಿದ್ದ ಭರವಸೆಗಳನ್ನ ಈಡೇರಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತ ಕಾಂಗ್ರೆಸ್ ಪಕ್ಷಕ್ಕೆ ನೀಡುವಂತೆ ನಾಗರಿಕರಲ್ಲಿ ಮನವಿ ಮಾಡಿದರು. ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಸಣ್ಣ ಪುಟ್ಟ ಸಮಸ್ಯೆಗಳನ್ನ ಬದಿಗಿಟ್ಟು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನ ಗೆಲ್ಲಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿಕೊಂಡರು.  

ಸುರೇಶ್ ಹುಂಚಾಳಿ, ರವಿ ಕರಾಳಿ, ಪ್ರವೀಣ ನೇಸರಿ, ಇಲಿಯಾಸ್ ಇನಾಮದಾರ್, ಸಂತೋಷ ಮುಡಸಿ, ಬಸವರಾಜ ಕೋಳಿ, ಅವಿನಾಶ ನಲವಡೆ, ಮಾರುತಿ ಕುಂದಿ, ವಿನೋದ ನಾಯಿಕ, ಚಿದಾನಂದ ಕರ್ದನ್ನವರ, ದಸ್ತಗೀರ ತೇರಣಿ, ಪ್ರಕಾಶ ಮೈಲಾಕೆ, ಮಹೇಶ ಹಟ್ಟಿಹೊಳಿ, ರೇಖಾ ಹುಕ್ಕೇರಿ, ರಿಷಬ್ ಪಾಟೀಲ ಜಯಪ್ರಕಾಶ ಕರಜಗಿ, ವಿಜಯ ರವದಿ ಪ್ರಾಸ್ತಾವಿಕ ಮಾತನಾಡಿದರು. ದೀಲೀಪ್ ಹೊಸಮನಿ ನಿರೂಪಿಸಿದರು.   

ಟೆಂಪಲ್ ರನ್ :  

ಲೋಕಸಭೆ ಚುನಾವಣೆ ಹಿನ್ನಲೆ ಟೆಂಪಲ್ ರನ್ ಆರಂಭಿಸಿದ ಸಚಿವ ಸತೀಶ್ ಜಾರಕಿಹೋಳಿ ಅವರು ಹುಕ್ಕೇರಿ ತಾಲೂಕಿನ ನಿಡಸೋಸಿಯ ದುರುಂಡೇಶ್ವರ ಮಠಕ್ಕೆ ಭೇಟಿ ನೀಡಿದರು.  

ಮಗಳು ಪ್ರೀಯಂಕಾ ಜಾರಕಿಹೋಳಿ ಅಭ್ಯರ್ಥಿ ಹಿನ್ನಲೆ ಸತೀಶ್ ಜಾರಕಿಹೋಳಿಯಿಂದ ಟೆಂಪಲ್ ರನ್ ಆರಂಭ ಮಾಡಿದರು. ನಿಡಸೋಶಿಯ ಶ್ರೀ ದುರದುಂಡೇಶ್ವರ ಮಠಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದ ಸತೀಶ್ ಜಾರಕಿಹೋಳಿ ಅವರು ಮಠಾಧೀಶ ಶಿವಲಿಂಗೇಶ್ವರ ಸ್ವಾಮೀಜಿ ಬೇಟಿ ಮಾಡಿ ಆರ್ಶಿವಾದ ಪಡೆದರು.