ತೆಲಂಗಾಣ ರಸ್ತೆ ಅಪಘಾತ: ಆರು ಕೂಲಿ ಕಾರ್ಮಿಕರ ಸಾವು

ತೆಲಂಗಾಣ ರಸ್ತೆ ಅಪಘಾತ: ಆರು ಕೂಲಿ ಕಾರ್ಮಿಕರ ಸಾವು  Telangana road accident: Six laborers dead

ಬೀದರ್, ಆಗಸ್ಟ್‌ 12: ತೆಲಂಗಾಣ ರಾಜ್ಯದ ಜಹೀರಾಬಾದ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಗೇರಾ ಗ್ರಾಮದ ಆರು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಟಂಟಂ ವಾಹನದಲ್ಲಿದ್ದ ಇನ್ನೂ ಆರು ಮಂದಿ ಗಾಯಗೊಂಡಿದ್ದಾರೆ.  

ಅಪಘಾತದ ಸುದ್ದಿ ತಿಳಿದು ಮಾಜಿ ಸಚಿವ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕ ಬಂಡೆಪ್ಪ ಖಾಶೆಂಪುರ್ ಅವರು ಬುಧವಾರ ಬೆಳಗ್ಗೆ ಮೃತ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತರಿಗೆ ಅಂತಿಮ ನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ ಅವರು, ಕುಟುಂಬಸ್ಥರಿಗೆ ವೈಯಕ್ತಿಕ ನೆರವು ನೀಡಿ ಧೈರ್ಯ ತುಂಬಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಬಂಡೆಪ್ಪ ಖಾಶೆಂಪುರ್, “ನನ್ನ ಕ್ಷೇತ್ರದ ಒಂದೇ ಗ್ರಾಮದ ಆರು ಮಂದಿ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವು ತಂದಿದೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.  

ಕೂಲಿ ಕಾರ್ಮಿಕರಿಗೆ ಸ್ಥಳೀಯ ಉದ್ಯೋಗಕ್ಕೆ ಒತ್ತಾಯ  

2022ರ ನವೆಂಬರ್ 4ರಂದು ತಮ್ಮ ಕ್ಷೇತ್ರದ ಬೇಮಳಖೇಡ ಬಳಿ ಆಟೋ-ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಉಡಮನಹಳ್ಳಿ ಗ್ರಾಮದ ಆರು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದ ಘಟನೆಯನ್ನು ಸ್ಮರಿಸಿದ ಅವರು, ಇಂತಹ ದುರಂತಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾಗಿ ತಿಳಿಸಿದರು.  

ಬೀದರ್ ಜಿಲ್ಲೆಯ ಜನರು ಉದ್ಯೋಗಕ್ಕಾಗಿ ಪಕ್ಕದ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು. ಜಿಲ್ಲೆಯಲ್ಲಿಯೇ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಕೆಲಸವನ್ನು 100 ದಿನಗಳಿಗೆ ಸೀಮಿತಗೊಳಿಸದೆ ಹೆಚ್ಚಿನ ದಿನಗಳಿಗೆ ವಿಸ್ತರಿಸಬೇಕು ಎಂದು ಈ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು.  

ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಬೇಡಿಕೆಗೆ ಅನುಗುಣವಾಗಿ ನಿರಂತರ ಉದ್ಯೋಗ ಖಾತ್ರಿ ಕೆಲಸ ಸೇರಿದಂತೆ ಇತರ ಉದ್ಯೋಗಾವಕಾಶಗಳನ್ನು ಅವರ ಗ್ರಾಮಗಳಲ್ಲಿಯೇ ಕಲ್ಪಿಸಬೇಕು ಎಂದು ಒತ್ತಾಯಿಸಿದರು.  

ಮೃತರ ಕುಟುಂಬಗಳಿಗೆ ಪರಿಹಾರ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ  

ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಪರಿಹಾರವನ್ನು ಶೀಘ್ರವೇ ವಿತರಿಸಬೇಕು ಎಂದು ಬಂಡೆಪ್ಪ ಖಾಶೆಂಪುರ್ ಆಗ್ರಹಿಸಿದರು.  

ಅಪಘಾತದಲ್ಲಿ ಗಾಯಗೊಂಡಿರುವ ಕಾರ್ಮಿಕರಿಗೆ ಉತ್ತಮ ಹಾಗೂ ಉಚಿತ ಚಿಕಿತ್ಸೆ ನೀಡಬೇಕು. ಮೃತ ಹಾಗೂ ಗಾಯಾಳು ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.  

ಈ ಭಾಗದ ಜನರು ಬರಗಾಲದ ಪರಿಣಾಮ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಇನ್ನಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು. ನಮ್ಮ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ದೊರಕಿಸುವ ಕೆಲಸವನ್ನು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಬಂಡೆಪ್ಪ ಖಾಶೆಂಪುರ್ ಆಗ್ರಹಿಸಿದರು.