ಶಿಕ್ಷಕರ ಮಾರ್ಗದರ್ಶನವೇ ಸಮಾಜದ ಪ್ರಗತಿಗೆ ದಾರಿ

ಶಿಕ್ಷಕರ ಮಾರ್ಗದರ್ಶನವೇ ಸಮಾಜದ ಪ್ರಗತಿಗೆ ದಾರಿ  Teachers' guidance paves the way for the progress of society

ಲೋಕದರ್ಶನ ವರದಿ 

ಜಮಖಂಡಿ ಸೆ.11: ನಗರದ ಬಸವ ಭವನದಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಅನಿಲ್ ಬಡಿಗೇರ್, ತಾವು ಪ್ರಾಥಮಿಕ ಶಾಲೆಯಲ್ಲಿ 10 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಉನ್ನತ ಹುದ್ದೆ ಅಲಂಕರಿಸಲು ಶಿಕ್ಷಕರ ಮಾರ್ಗದರ್ಶನವೇ ಕಾರಣವಾಗಿದೆ ಎಂದರು. ಮಕ್ಕಳೊಂದಿಗೆ ಬೆರೆತು ಅವರಿಗೆ ಶಿಕ್ಷಣ ನೀಡುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.  

ಬಿಇಒ ಅಶೋಕ ಬಸಣ್ಣವರ ಮಾತನಾಡಿ, ಸ್ವಾಮಿ ವಿವೇಕಾನಂದ, ಬುದ್ಧ, ಡಾ. ಬಿ.ಆರ್‌. ಅಂಬೇಡ್ಕರ್ ಸೇರಿದಂತೆ ಮಹನೀಯರ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಮತ್ತು ಸಹಕಾರವಿದೆ ಎಂದರು.  

ಜಮಖಂಡಿ ತಾಲೂಕು ಕೃಷಿ, ಸಕ್ಕರೆ ಉದ್ಯಮ, ಕಲೆ-ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ. ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲೂ ತಾಲೂಕು ಉತ್ತಮ ಸಾಧನೆ ಮಾಡಿದ್ದು, 13 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 1.15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕ-ಶಿಕ್ಷಕಿಯರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಿದ್ದಾರೂಢ ಮಠದ ಸಿದ್ದರಾಮ ಶಿವಯೋಗಿ ಶ್ರೀಗಳು ಆಶೀರ್ವಚನ ನೀಡಿದರು.  

ಸಂಗಮೇಶ ಬಿಜಾಪುರ ಸ್ವಾಗತಿಸಿದರು. ಕಾಶೀನಾಥ ಜಾಧವ, ಚಿದಾನಂದ ಜಡಿಮಠ, ಶ್ವೇತಾ ಕಲ್ಲೂರ ಹಾಗೂ ರಘು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್‌. ಕಟ್ಟಿಮನಿ ಹಾಗೂ ಸಂಗಡಿಗರು ನಾಡಗೀತೆ ಮತ್ತು ರೈತಗೀತೆ ಹಾಡಿದರು.