1500 ದಿನಕ್ಕೆ ಕಾಲಿಟ್ಟ ತಾಲೂಕು ಹೋರಾಟ, ತಹಶೀಲ್ದಾರರಿಗೆ ಮನವಿ
ಲೋಕದರ್ಶನ ವರದಿ
ಮಹಾಲಿಂಗಪುರ 19: ನೂತನ ತಾಲೂಕಿಗಾಗಿ ಸಾರ್ವಜನಿಕರಿಂದ ಸುಮಾರು 1500 ದಿವಸಗಳಿಂದ ನಿರಂತರವಾಗಿ ನಡೆದಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಇತ್ತ ಕಡೆಗೆ ಎಳ್ಳಷ್ಟೂ ಗಮನ ಹರಿಸದೆ ಅಸಡ್ಡೆ ತೋರುತ್ತಿರುವುದರಿಂದ ಸೋಮವಾರ ದಿವಸ ಸಂಜೆ ಹೋರಾಟಗಾರರು ವೀರ ಸೇನಾನಿ ಚೆನ್ನಮ್ಮ ವೃತ್ತದಲ್ಲಿ ಸೇರಿ, ಕೆಲ ಕಾಲ ಪ್ರತಿಭಟನೆ ನಡೆಸಿ, ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ್ ಗೀರೀಶ ಸ್ವಾದಿ ಅವರಿಗೆ ರಾಜ್ಯ ಸರ್ಕಾರ ಶೀಘ್ರ ತಾಲೂಕು ಘೋಷಣೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.
ಈ ಸಮಯದಲ್ಲಿ ತಾಲೂಕು ಹೋರಾಟಗಾರರ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಮಾತನಾಡಿದ ತಹಶೀಲ್ದಾರರು, ನಮ್ಮ ಮೇಲಾಧಿಕಾರಿಗಳ ಆದೇಶದಂತೆ ಮಹಾಲಿಂಗಪುರ ನೂತನ ತಾಲೂಕಿಗೆ ಅಗತ್ಯವಿರುವ ಹಳ್ಳಿಗಳು ಹಾಗೂ ಅವುಗಳ ಸುತ್ತಮುತ್ತಲಿನ ಭೌಗೋಳಿಕ ಹಿನ್ನೆಲೆಯನ್ನು ನಾವು ಈಗಾಗಲೇ ಸರ್ಕಾರದ ಕಂದಾಯ ಇಲಾಖೆಗೆ ಸಲ್ಲಿಸಿದ್ದೇವೆ ಇನ್ನು ಮುಂದಿನ ಕಾರ್ಯ ಸರ್ಕಾರದ ಮಟ್ಟದಲ್ಲಿದೆ ಎಂದು ವಿವರಿಸಿದರು.
ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಂಗಪ್ಪ ಹಲ್ಲಿ ಮತ್ತು ಆಮ್ ಆದ್ಮಿ ಪಕ್ಷದ ತೇರದಾಳ ಮತ ಕ್ಷೇತ್ರದ ಮುಖಂಡ ಅರ್ಜುನ್ ಹಲಗಿಗೌಡರ ಮಾತನಾಡಿ, ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಮುಖಂಡರು, ಸಾರ್ವಜನಿಕರು ಸೇರಿ ಛಾತಕ ಪಕ್ಷಿಯಂತೆ ಕಾಯುತ್ತಾ ಮಹಾಲಿಂಗಪುರ ನೂತನ ತಾಲೂಕಿಗಾಗಿ ಹೋರಾಟವನ್ನು ಮುಂದುವರಿಸುತ್ತಾ ಬಂದಿದ್ದೇವೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟ ಕಡೆಯ ನಾಗರಿಕನೂ ಸಹ ತಮ್ಮ ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಶಕ್ತನಾಗಿದ್ದಾನೆ. ನಾವೂ ಸಹ ಯಾವುದೇ ವಾಮ ಮಾರ್ಗ ಬಳಸದೆ ಸಂವಿಧಾನ ಬದ್ಧವಾಗಿಯೇ ನಮ್ಮ ಹಕ್ಕನ್ನು ಕೇಳುತ್ತ, ಶಾಂತ ರೀತಿಯಿಂದ ಇಲ್ಲಿವರೆಗೆ ನಾವುಗಳು ಹೋರಾಟ ಮಾಡಿಕೊಂಡು ಬಂದಿದ್ದೇವೆ.
ದಯವಿಟ್ಟು ಮಾನ್ಯ ಮುಖ್ಯಮಂತ್ರಿಗಳು ನಮ್ಮ ಹೋರಾಟಕ್ಕೆ ಬೆಲೆ ನೀಡಿ ಆದಷ್ಟು ಬೇಗ ಮಹಾಲಿಂಗಪುರ ನೂತನ ತಾಲೂಕು ಘೋಷಣೆ ಮಾಡಿ ದೇಶದ ಸಂವಿಧಾನದ ಘನತೆ ಗೌರವವನ್ನು ಎತ್ತಿ ಹಿಡಿಯಬೇಕು ಎಂದರು.ರೈತ ಮುಖಂಡ ಗಂಗಾಧರ ಮೇಟಿ ಮಾತನಾಡಿದರು.
ಪಟ್ಟಣದ ಪಿಕೆಪಿಎಸ್ ಜಾಗೆಯಲ್ಲಿ ಹಾಕಿದ ತಾಲೂಕು ಹೋರಾಟ ವೇದಿಕೆಯಿಂದ ಚೆನ್ನಮ್ಮ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ಹೋರಾಟಗಾರರು ಬೇಕೇ ಬೇಕು, ನೂತನ ತಾಲೂಕು ಬೇಕು ಎಂದು ಘೋಷನೆ ಕೂಗಿದರು. ಸದಾ ಜನದಟ್ಟನೆಯಿಂದ ಕೂಡುವ ಈ ವೃತ್ತದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರಿ್ಡಸಿತ್ತು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಸಂಗಪ್ಪ ಹಲ್ಲಿ, ರೈತ ಮುಖಂಡ ಗಂಗಾಧರ ಮೇಟಿ, ಪರ್ಪ ಬ್ಯಾಕೋಡ, ನಿಂಗಪ್ಪ ಬಾಳಿಕಾಯಿ, ಚನ್ನು ದೇಸಾಯಿ, ಹಣ್ಮಂತ ಜಮಾದಾರ, ಸಿದ್ದು ಶಿರೋಳ, ಭೀಮಶಿ ಸಸಾಲಟ್ಟಿ, ವೀರೇಶ ಆಸಂಗಿ, ದುಂಡಪ್ಪ ಜಾಧವ, ರಫೀಕ್ ಮಾಲದಾರ,ನ್ಯಾ. ಎಂ.ಕೆ.ಸಂಗಣ್ಣವರ, ದುಂಡಪ್ಪ ಇಟ್ನಾಳ,ಮಹಾಲಿಂಗಯ್ಯ ಅವರಾದಿ,ಕರೆಪ್ಪ ಮೇಟಿ, ಹಾದಿಮನಿ ಸರ್, ಶಂಕರ ಸೈದಾಪುರ, ಮೋಹ್ಮದ್ ಪೆಂಡಾರಿ, ಮಹಾದೇವ ಉತ್ತೂರ,ರೇಹ್ಮಾನ್ ಲಕ್ಕುಂಡಿ, ಸುನೀಲ್ ಮೇಟಿ, ಪ್ರಭುಲಿಂಗ ಕಲ್ಮಠ, ಶಂಕರ ಹುಕ್ಕೇರಿ, ಗಿರಿಶ ಜಮಖಂಡಿ, ಸುಭಾಸ್ ಜಂಬಗಿ ಮುಂತಾದವರಿದ್ದರು.