ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮವಹಿಸಿ: ತಾಪಂ ಇಓ ನರಸಪ್ಪ

ಕಾರಟಗಿ 14: ಜಿಲ್ಲೆಯು ವಿವಿಧ ಕಡೆ ಕಲುಷಿತ ನೀರು ಪೂರೈಕೆಯಾಗಿ ವಾಂತಿ-ಭೇದಿ ಪ್ರಕರಣಗಳು ಕಂಡು ಬಂದ ಹಿನ್ನೆಲೆ ತಾಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಶುಧ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ತಾ.ಪಂ ಇಓ ನರಸಪ್ಪ ಎನ್‌. ಅವರು ಹೇಳಿದರು. 

ಪಟ್ಟಣ ಎಪಿಎಂಸಿ ಸಭಾಂಗಣದಲ್ಲಿ ಬುಧವಾರದಂದು ಆಯೋಜಿಸಲಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಜಲ ಜೀವನ್ ಮಿಷನ್ ಸೇರಿದಂತೆ ಇನ್ನಿತರ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದರು. ಇತ್ತೀಚಿಗೆ ಜಿಲ್ಲೆಯ ಕೆಲವು ಕಡೆ ಕಲುಷಿತ ನೀರು ಸೇವೆಯಿಂದ ವಾಂತಿ- ಭೇದಿ ಪ್ರಕರಣ ಹೆಚ್ಚಾಗಿ ಕಂಡುಬರುವ ಹಿನ್ನೆಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ಪೈಪ್ ಲೈನ್ ದುರಸ್ತಿ ಕಂಡು ಬಂದರೆ ಸ್ಥಳಕ್ಕೆ ಭೇಟಿ ನೀಡಿ ಪೈಪ್ ಲೈನ್ ದುರಸ್ತಿಗೊಳಿಸಬೇಕು.  

ಗ್ರಾಮದಲ್ಲಿನ ಒ.ಎಚ್‌.ಟಿ ಟ್ಯಾಂಕ್, ಸ್ವಚ್ಛಗೊಳಿಸಿ, ಒಣಗಿಸಿದ ಮೇಲೆ ಟ್ಯಾಂಕ್ ಗೆ ನೀರು ಪೂರೈಕೆ ಮಾಡಿ, ನೀರಿನ ಪ್ರಮಾಣ ತಕ್ಕಂತೆ ಬ್ಲೀಜಿಂಗ್ ಪೌಡರ್ ಸಿಂಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ವಿವಿಧ ವಾರ್ಡ್ಗಳಲ್ಲಿ ಚರಂಡಿ ಸ್ವಚ್ಚತೆ ಕಾರ್ಯ ಮಾಡಿ, ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಮುತುವರ್ಜಿ ವಹಿಸಬೇಕು. ಕಲುಷಿತ ನೀರು ಪೂರೈಕೆಯಾಗುವ ಮಾಹಿತಿಯನ್ನು ಸಂಗ್ರಹಿಸಿ ಅಂತಹ ಸ್ಥಳಕ್ಕೆ ಗ್ರಾಮ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ, ಸಮಸ್ಯೆ ಇತ್ಯರ್ಥ ಪಡಿಸಬೇಕು.  

ಪ್ರತಿಯೊಂದು ಗ್ರಾಮದಲ್ಲಿ ಯೋಗ್ಯವಾದ ನೀರು ಸೇವಿಸುವಂತೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು. ಕುಡಿಯುವ ನೀರಿನ ಪೂರೈಕೆ ಸಂಬಂಧಿಸಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ದಿನ ನಿತ್ಯದ ಕುಡಿಯುವ ನೀರಿನ ಸರಬರಾಜು ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳುವಂತೆ  ಇಲಾಖೆಯ ಕಿರಿಯ ಅಭಿಯಂತರಾದ ಸಿದ್ದಪ್ಪ ರವರಿಗೆ ತಿಳಿಸಿದರು. ಪ್ರತಿಯೊಂದು ಹಳ್ಳಿಗಳಿಗೆ ಸರಬರಾಜು ಮಾಡುವ ನೀರಿನ ಶ್ಯಾಂಪಲ್ ಗಳನ್ನು ತಪಾಸಣೆ ಕಳಿಸಬೇಕು.  

ಬಂದಂತಹ ವರದಿ ಪ್ರಕಾರ ಯೋಗ್ಯವಾದ ನೀರು ಒದಗಿಸಲು ಮುಂದಾಗಿ, ಕುಡಿಯಲು ಯೋಗ್ಯವಲ್ಲದ ನೀರಿನ ವರದಿ ಕಂಡು ಬಂದರೆ ಅಂತಹ ಕಡೆ ಶುಧ್ಧ ಕುಡಿಯುವ ನೀರು ಒದಗಿಸಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ತಿಳಿಸಿದರು. ಶುಧ್ಧ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿ ಪೂರೈಕೆಯಾಗುವ ನೀರಿನ ತಪಾಸಣೆ ಮಾಡಿದ ವರದಿಯನ್ನು ತಾಲೂಕು ಪಂಚಾಯತಿಗೆ ಸಲ್ಲಿಸಬೇಕು. ಜಿಜೆಎಮ್  ಯೋಜನೆ ಹಾಗೂ ತಾಲೂಕಿನ ರಾಜೀವ್ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದು, ಸಮಸ್ಯೆ ಇದ್ದಲ್ಲಿ ಕ್ರಮ ವಹಿಸುವಂತೆ  ಇಲಾಖೆಯ ಇಂಜಿನಿಯರ್ ಗೆ ಸೂಚಿಸಿದರು. ನಾಗನಕಲ್ ಸಮುದಾಯ ಆರೋಗ್ಯ ಅಧಿಕಾರಿ  ಹನುಮಂತಪ್ಪ ಅವರು ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚತೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳ ಸಲಹೆಗಳನ್ನು ನೀಡಿದರು.ಈ ಸಂದರ್ಭಗಳಲ್ಲಿ ತಾ.ಪಂ ಯೋಜನಾಧಿಕಾರಿಗಳಾದ ರಾಘವೇಂದ್ರ, ಉಪ ತಹಸೀಲ್ದಾರ್ ಉಮಾಮಹೇಶ್ , ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷರು , ಅಭಿವೃದ್ಧಿ ಅಧಿಕಾರಿಗಳು, ವಿವಿಧ ಯೋಜನೆಗಳ ವಿಷಯ ನಿರ್ವಾಹಕರು, ತಾಲೂಕಾ ಪಂಚಾಯತ ನರೇಗಾ ಯೋಜನೆಯ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಇದ್ದರು