ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಗಂಗಾವತಿ 13: ರಾಮಕೃಷ್ಣ ಮಿಷನ್ ಸ್ಥಾಪಿಸುವ ಮೂಲಕ ಜೀವನಕ್ಕೆ ದಾರಿ ತೋರಿದ ಗುರುವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು ಎಂದು ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ನಾಯ್ಡು ಹೇಳಿದರು. 

ಗಂಗಾವತಿ ನಗರದ ಹಿರೇಜಂತಕಲ್ ಶ್ರೀ ವಿನಾಯಕ ಅನುದಾನಿತ ಕನ್ನಡ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದರ 161ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿವೇಕಾನಂದರು ನೀಡಿದ ಏಳಿ ಎದ್ದೇಳಿ ಗುರಿಮುಟ್ಟುವತನ ಮಲಗದಿರಿ ಎಂಬ ಸಂದೇಶ ದೇಶದ ಹಾಗೂ ವಿಶ್ವದ ಯುವ ಸಮೂಹವನ್ನು ಬಡಿದೆಬ್ಬಿಸಿದೆ, ಅಲ್ಲದೆ ದೇವರು ಮತ್ತು ಮಾನವ, ಧರ್ಮ ಮತ್ತು ವಿಜ್ಞಾನ, ವ್ಯಕ್ತಿ ಮತ್ತು ಸಮಾಜ ಹಾಗೂ ಸ್ತ್ರೀ ಮತ್ತು ಪುರುಷರ ನಡುವಿನ ಕಂದಕವನ್ನು ದೂರಮಾಡಿದರು. ಮಾನವಕುಲದ ಒಳತಿಗಾಗಿ ತಮ್ಮ ಜೀವನ ಪೂರ್ತಿ ಶ್ರಮಿಸಿ, ಭಾರತದ ಸಂಸ್ಕೃತಿ, ಹಿರಿಮೆ, ಗರಿಮೆ, ವೇದ, ಉಪನಿಷತ್ತನ್ನು ಪರಿಚಯಿಸುವ ಮೂಲಕ ದೇಶದ ಶ್ರೀಮಂತ ಪರಂಪರೆ ಎತ್ತಿಹಿಡಿದವರು. ಆದ್ದರಿಂದ ವಿದ್ಯಾರ್ಥಿಗಳು ಗುರಿಯೊಂದಿಗೆ ಮುನ್ನೆಡೆಯಿರಿ ಎಂದು ಕಿವಿಮಾತು ಹೇಳಿದರು.  

ವಿದ್ಯಾರ್ಥಿಗಳು ವಿವೇಕಾನಂದರ ಭಾವಚಿತ್ರ ಬಿಡಿಸಿದ್ದು ಹಾಗೂ ಭಾಷಣ ಮಾಡಿದ್ದು ಎಲ್ಲಾ ಮಕ್ಕಳ ಗಮನ ಸೆಳೆಯಿತು.  ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ, ವೀರೇಶ, ದೈಹಿಕ ಶಿಕ್ಷಕ ಉಜ್ಜನಗೌಡ, ಚನ್ನಬಸವ ಯು, ಸಂತೋಷ ಕುಮಾರ, ರಾಮನಗೌಡ, ರೇಣುಕಾ, ಲಕ್ಷ್ಮಿ, ಜೋಶಿ, ರಜೀಯಾ ಸೇರಿದಂತೆ ಇತರರು ಇದ್ದರು