ದೇವರಹಿಪ್ಪರಗಿ 10: ಪಹಲ್ಗಾಮ್ ಉಗ್ರ ದಾಳಿ ಸಂಬಂಧ ದೇಶದ ಏಕತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಗಳಿಗೆ ತಮ್ಮ ಪೂರ್ಣ ಬೆಂಬಲವಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದ್ದಾರೆ.
ಪಟ್ಟಣದಲ್ಲಿ ಶನಿವಾರದಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಯೋತ್ಪಾದಕರ ಹಾಗೂ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಪಕ್ಷದಿಂದ ಬೆಂಬಲ ಕೊಟ್ಟಿದ್ದೇವೆ. ನಮಗೆ ದೇಶ ಮುಖ್ಯ. ಯಾವುದೇ ಕ್ರಮ ಕೈಗೊಂಡರೂ ಬೆಂಬಲ ಇದ್ದೇ ಇರುತ್ತದೆ. ದೇಶದ ಏಕತೆ, ಸಮಗ್ರತೆ ಮತ್ತು ಸಮೃದ್ಧಿಯ ವಿರುದ್ಧದ ಯಾವುದೇ ಬೆದರಿಕೆಗೆ ನಾವು ಒಗ್ಗಟ್ಟಿನಿಂದ ಮತ್ತು ದೃಢವಾಗಿ ಪ್ರತಿಕ್ರಿಯಿಸುತ್ತೇವೆ. ಪಕ್ಷವು ಸರ್ಕಾರದ ಜೊತೆ ನಿಂತಿದೆ. ಈ ಸಂದೇಶವನ್ನು ಇಡೀ ಜಗತ್ತಿಗೆ ಮಾದರಿಯಾಗಿದೆ.ರಕ್ಷಣಾ ಪಡೆಗಳಿಗೆ ಮೋದಿ ಅವರು ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ. ಮೊದಲ ಬಾರಿಗೆ ದೇಶದ ಪ್ರಧಾನಿ ಮೋದಿ ಅವರು ಇಂತಹ ದಿಟ್ಟ ನಿರ್ಧಾರ ಮಾಡಿದ್ದಾರೆ. ಇತಿಹಾಸದಲ್ಲಿ ಈ ರೀತಿ ಎಂದೂ ನಿರ್ಧಾರ ಆಗಿರಲಿಲ್ಲ, ಗೃಹ, ರಕ್ಷಣೆ ಹಾಗೂ ವಿದೇಶಾಂಗ ಖಾತೆಗಳನ್ನು ನಿಭಾಯಿಸುತ್ತಿರುವ ಸಚಿವರುಗಳು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಜನತೆ ಸೇರಿದಂತೆ ಇಡೀ ದೇಶ ಪ್ರಧಾನಿ ಮೋದಿಯವರ ಜೊತೆ ನಿಂತಿದೆ. ಎಲ್ಲಾ ರಾಜಕೀಯ ಪಕ್ಷಗಳು ಮೋದಿಯವರ ನಿರ್ಧಾರವನ್ನು ಬೆಂಬಲಿಸಿವೆ. ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಪಾಕಿಸ್ತಾನ ಪ್ರೇರಿತ ಉಗ್ರರನ್ನು ಸದೆ ಬಡಿಯುವವರೆಗೆ ವಿರಮಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವೆಲ್ಲರೂ ಅವರ ಜೊತೆಗಿರುತ್ತೇವೆ. ಭಾರತದ ಸೈನಿಕರಿಗಾಗಿ ನಾವೆಲ್ಲರೂ ಪ್ರಾರ್ಥಿಸೋಣ ಎಂದು ಹೇಳಿದರು.