ಸಚಿವ ಸ್ಥಾನಕ್ಕೆ ಬೆಂಬಲ: ಆ.15ರಂದು ಕೃತಜ್ಞತಾ ಕಾರ್ಯಕ್ರಮ

ಸಚಿವ ಸ್ಥಾನಕ್ಕೆ ಬೆಂಬಲ: ಆ.15ರಂದು ಕೃತಜ್ಞತಾ ಕಾರ್ಯಕ್ರಮ  Support for Ministerial Post: Gratitude Event on August 15


ಮುದ್ದೇಬಿಹಾಳ: ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಹಾಗೂ ಬೆಂಗಳೂರಿಗೆ ತೆರಳಿ ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಿ ಸಹಕರಿಸಿದವರಿಗೆ ಶಾಸಕ ಸಿ.ಎಸ್‌. ನಾಡಗೌಡ ಅಪ್ಪಾಜಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.  

ಜೂ.19ರಂದು ಮುದ್ದೇಬಿಹಾಳ ಪಟ್ಟಣದ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಿದ್ದರು. ಜೂ.26ರಂದು ಮುಖಂಡರು, ವರ್ತಕರು ಹಾಗೂ ಪಟ್ಟಣದ ಗುರುಹಿರಿಯರು ಸ್ವಇಚ್ಛೆಯಿಂದ ಬೆಂಗಳೂರಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿಯಾಗಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದರು.  

ಈ ಹಿನ್ನೆಲೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಆ.15ರಂದು ಮಧ್ಯಾಹ್ನ 12.30ಕ್ಕೆ ಪಟ್ಟಣದ ಶ್ರೀ ಸಂಗನಬಸಮ್ಮ ಮದರಿ ಕಲ್ಯಾಣ ಮಂಟಪದಲ್ಲಿ ಕೃತಜ್ಞತಾ ಕಾರ್ಯಕ್ರಮ ಆಯೋಜಿಸಲಾಗಿದೆ.  

ವರ್ತಕರು, ಮುಖಂಡರು ಹಾಗೂ ಪಟ್ಟಣದ ಗುರುಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಸಿ.ಎಸ್‌. ನಾಡಗೌಡ ಅಪ್ಪಾಜಿ ಅವರು ಮನವಿ ಮಾಡಿದ್ದಾರೆ ಎಂದು ಅವರ ಆಪ್ತಸಹಾಯಕ ನಾಗರಾಜ ತಂಗಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.