ಬಿಸಿಲ ತಾಪಕ್ಕೆ ಲೋಕ ಅಭ್ಯರ್ಥಿಗಳು ಕಂಗಾಲು

* ಬಿಸಿಲಿನಿಂದಾಗಿ ಹೊರಗೆ ಬರಲು ಹಿಂದೇಟು ಹಾಕುತ್ತಿರುವ ಜನರು

* ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಕಾರ್ಯಕರ್ತರು 

ಸಂತೋಷಕುಮಾರ ಕಾಮತ  

ಮಾಂಜರಿ 11 : ಚಿಕ್ಕೋಡಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಇಂದು  40ರ ಆಸುಪಾಸು ತಾಪಮಾನವಿದೆ. ಸಹಜವಾಗಿ ಬಿಸಿಲಿನ ಝಳ ಏರಿಕೆಯಾಗುತ್ತಿದೆ. ಇದರ ನಡುವೆಯೇ ಈಗ ಲೋಕಸಭಾ ಚುನಾವಣೆ ಕೂಡ ನಡೆಯುತ್ತಿದ್ದು, ಅದು ಕೂಡ ಕಾವು ಪಡೆದುಕೊಂಡಿದೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ಸಹಜವಾಗಿ ನಾಯಕರಿಗೆ, ಕಾರ್ಯಕರ್ತರಿಗೆ ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ. ಇದೆ ವೇಳೆ ಪ್ರಚಾರ ನಡೆಸಲು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತೀವ್ರ ಹೈರಾಣಾಗುತ್ತಿದ್ದಾರೆ. ಚಿಕ್ಕೋಡಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಾತಾವರಣದಲ್ಲಿ ಬಿಸಿ ಗಾಳಿಯ ಹೆಚ್ಚಾಗಿ ಕಂಡುಬರುತ್ತಿದೆ. ಮಾರ್ಚ್‌ ಮುಗಿದು ಏಪ್ರಿಲ್ ಮೊದಲ ವಾರದಲ್ಲಿಯೇ ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ. ಸುಡು ಬಿಸಿಲಿನ ಬೇಗೆಯಿಂದ ಬಸವಳಿದ ಜನರು ತಂಪುಪಾನೀಯ, ಹಣ್ಣುಗಳತ್ತ ಮೊರೆ ಹೋಗುತ್ತಿದ್ದಾರೆ. ಅದರಂತೆ ಈಗ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವವರಿಗೂ ಬಿಸಿಲಿನ ತಾಪ ತಟ್ಟದೆ ಇರದು.ಚುನಾವಣೆಗೆ ಸಂಬಂಧಿಸಿದಂತೆ ಕೆಲವರು ಮಾತ್ರ ಅಖಾಡದಲ್ಲಿ ಬಿಸಿಲನ್ನೂ ಲೆಕ್ಕಿಸದೇ ಮತ ಸಮರದಲ್ಲಿಉತ್ಸುಕರಾಗಿದ್ದಾರೆ. ಆದರೆ, ಬಿಸಿಲಿನ ತಾಪದಿಂದಾಗಿ ಪ್ರಚಾರಸಭೆ, ಸಮಾರಂಭಗಳಿಂದಕಾರ್ಯಕರ್ತರು, ಜನರು ಕೂಡ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆ ಅಭ್ಯರ್ಥಿಗಳನ್ನು ಆತಂಕಕ್ಕೀಡು ಮಾಡಿದೆ. ಚಿಕ್ಕೋಡಿ ಲೋಕಸಭಾ  ಕ್ಷೇತ್ರದಲ್ಲಿ ಏರುತ್ತಿರುವ ಬಿಸಿಲಿನಿಂದಾಗಿ ಪ್ರಚಾರಕ್ಕೂ ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಬೆಳಗ್ಗೆ ಮತ್ತು ಸಂಜೆ, ರಾತ್ರಿ ವೇಳೆ ಹೆಚ್ಚು ಪ್ರಚಾರ ನಡೆಯುತ್ತಿರುವುದು ಕಂಡುಬರುತ್ತಿದೆ. ಮಾತ್ರವಲ್ಲ, ಮದುವೆ ಛತ್ರಗಳಲ್ಲಿ, ಹಾಲ್‌ಗಳಲ್ಲಿ ಹೆಚ್ಚಾಗಿ ಪ್ರಚಾರ ಸಭೆಗಳುನಡೆಯುತ್ತಿವೆ. ಹೆಚ್ಚಾಗಿ ನೆರಳಿನಲ್ಲಿಯೇ ಪ್ರಚಾರ ನಡೆಯುತ್ತಿವೆ. 

ಬಿಸಿಲ ಪ್ರಚಾರದಲ್ಲಿ ಹೆಚ್ಚಾಗಿ ಕಾಣದ ಜನರು: ಒಂದೆಡೆ ರಣಬಿಸಿಲು. ಮತ್ತೊಂದೆಡೆ ರಾಜಕೀಯ ಭವಿಷ್ಯ, ಹೀಗಾಗಿ ಅನಿವಾರ್ಯ ಎಂಬಂತೆ ಇದುವರೆಗೆ ಕಾಂಗ್ರೆಸ್, ಬಿಜೆಪಿ ನಾಯಕರೆಲ್ಲ ಬಿಸಿಲಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಕಾರ್ಯ ನಡೆಸಬೇಕಾಗಿದೆ. ಆಟೋ, ಪ್ರಚಾರ ಸಭೆ, ಗ್ರಾಮಗಳಿಗೆ ಭೇಟಿ, ನಗರ ಹೋಬಳಿಗಳಿಗೆ ನಿರಂತರವಾಗಿ ಭೇಟಿ ಮಾಡುತ್ತಲೇ ಇದ್ದಾರೆ.ಪ್ರಚಾರ ಕಾರ್ಯ ನಡೆಸುತ್ತಲೇ ಇದ್ದಾರೆ. ಆದರೆ, ಬಿಸಿಲಿನಿಂದಾಗಿ ಪ್ರಚಾರ ಸಭೆ, ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಜನ ಸೇರುತ್ತಿಲ್ಲ ಎಂಬ ವೇದನೆ ಕೂಡ ಅಭ್ಯರ್ಥಿಗಳನ್ನು ಕಂಗೆಡುವಂತೆ ಮಾಡಿದೆ. ಚಿಕ್ಕೋಡಿ ಪಟ್ಟಣ ಮತ್ತು ಗ್ರಾಮೀಣ ಭಾಗದ ಹಳ್ಳಿಗಳ  ಸೇರಿದಂತೆ ಬಹುತೇಕ ಕಡೆ ರಣಬಿಸಿಲು ಇರುವುದರಿಂದ ಜನರು ಕೂಡ ಮನೆಯಿಂದ  

ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಚುನಾವಣೆ ಅದರ ಪಾಡಿಗೆ ಅದು ನಡೆಯುತ್ತದೆ. ಈ ಬಿಸಿಲಿನಲ್ಲಿ ಪ್ರಚಾರ ನಡೆಸುವುದು ಕಷ್ಟದ ಕೆಲಸ ಎಂದು ಸರಸಾಮಾನ್ಯ ಜನರ ಹೇಳುತ್ತಿದ್ದಾರೆ  

ಕಾಣದ  ಅಬ್ಬರ: ರಾಜ್ಯದಲ್ಲಿ ಎರಡು ಹಂತದ ಮತದಾನವಿದೆ. ಏ.24ರಂದು ಮೊದಲ ಹಂತದ ಮತದಾನ ನಡೆಯಲಿದೆ. ಹೀಗಾಗಿ ಬಹುತೇಕ ನಾಯಕರು ದಕ್ಷಿಣ ಕರ್ನಾಟಕ 14 ಕ್ಷೇತ್ರಗಳಲ್ಲಿ ಈಗ ಕಾರ್ಯನಿರತರಾಗಿದ್ದಾರೆ. ಏ.27ರ ನಂತರ ಅವರು ಉತ್ತರದ ಬರಲಿದ್ದಾರೆ. ಸಂದರ್ಭದಲ್ಲಿಯಂತೂ ಮತ್ತಷ್ಟು ಬಿಸಿಲಿನ ಪ್ರಖರತೆ ಇರಲಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಎರಡನೇ ಹಂತದ ಚುನಾವಣೆ ಉತ್ತರ ಭಾಗದಲ್ಲಿ ನಡೆಯುವುದರಿಂದ ಸದ್ಯ ಅಖಾಡದಲ್ಲಿ ಚುನಾವಣೆಯ ಅಬ್ಬರ ಅಷ್ಟಾಗಿ ಕಾಣುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಮೇ 7ರಂದು ಮತದಾನ ನಡೆಯುವುದರಿಂದ ಆ ವೇಳೆಗೆ ಭೂಮಿ ಮತ್ತಷ್ಟು ಕಾವು ಪಡೆದುಕೊಳ್ಳಲಿದೆ. ಹೀಗಾಗಿ ಈ ವೇಳೆ ಮತದಾರರು ಬಿಸಿಲಿನ ನೆಪವೊಡ್ಡಿ ಮನೆಯಲ್ಲಿಯೇ ಇರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಚುನಾವಣೆ ಆಯೋಗ ಮೇಲಿದೆ 

ಕಳೆದ ನಾಲೈದು ದಿನಗಳಿಂದ ಬಿಸಿಲಿನಲ್ಲಿ ತಾಪ ಏರಿಕೆ ಆಗುತ್ತಿದೆ. ಹೆಚ್ಚಿದ ಬಿಸಿಲಿನಿಂದ ಸನ್ ಸ್ಟೋಕ್ ಮತ್ತು ಉಷ್ಣಾಘಾತ (ಹೀಟ್ ಸ್ಟೋಕ್) ಆಗುವc e ಸಾಧ್ಯತೆಗಳಿರುತ್ತವೆ. ದೇಹದಲ್ಲಿ ಸೋಡಿಯಂ ಮತ್ತು ಪೋಟ್ಯಾಶಿಯಂ ಅಂಶ  ಕಡಿಮೆಯಾಗಿ  ಏರಿಳಿತ ಕಂಡು, ಬೇಹ ನಿತ್ರಾಣಕ್ಕೆ ಬರುತ್ತದೆ ರಕ್ತದೊತ್ತಡ ಇಳಿಕೆ ಆಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಅಗತ್ಯ. 

ಡಾ. ಶಾಮಗೌಡ ಪಾಟೀಲ್  ಖ್ಯಾತ ವೈದ್ಯರು, ಮಾಂಜರಿ