ಸಾರಿಗೆ ಬಸ್ ಬಂದ್ ಮಾಡಿ ಘಟಕದ ಸಿಬ್ಬಂದಿಗಳಿಂದ ದಿಢೀರ ಪ್ರತಿಭಟನೆ: ಆಕ್ರೋಶ

ಬಸ್ ಚಾಲಕ, ನಿರ್ವಾಹಕ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ 

ಬೈಲಹೊಂಗಲ 26: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕ ಮೇಲೆ ಕ್ಷುಲ್ಲಕ ಕಾರಣಗಳಿಂದ ಹಲ್ಲೆ ಮಾಡಿದ್ದರಿಂದ ಸಾರಿಗೆ ಬಸ್ ಬಂದ್ ಮಾಡಿ ಘಟಕದ  ಸಿಬ್ಬಂದಿಗಳು ಗುರುವಾರ ಸಂಜೆ  ದಿಢೀರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

ಪಟ್ಟಣದ ಸಾರಿಗೆ ಘಟಕದ ಧಾರವಾಡ ಪ್ಲಾಟ್ ಫಾರ್ಮ್‌ ನಿಂದ ಬಸ್ ಬಿಡುತ್ತಿದ್ದಂತೆ ಓಡಿ ಬಂದು ಬಸ್ ಹತ್ತಿದ ಮಹಿಳೆಯೊಬ್ಬರು ಚಾಲಕ, ನಿವಾರ್ಹಕರನ್ನು ಬಸ್ ನಿಲ್ಲಿಸುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ್ದಾರೆ. ನಂತರ ಮಹಿಳೆಯ ಮೂರು ಜನ ಸಂಬಂಧಿಕರು ಬಂದು ಚಾಲಕ, ನಿರ್ವಾಹಕರನ್ನು ಹಿಗ್ಗಾಮುಗ್ಗಾ ಥಳಿಸಿ ತೀವ್ರ ಹಲ್ಲೆ ಮಾಡಿ ಗಾಯಗೊಳಿಸಿದರು. ಅಲ್ಲದೆ ಸಾರಿಗೆ ಘಟಕದ ಪ್ಲಾಟ್ ಫಾರ್ಮ್‌ ಒಳಗಿನ ಕಂಟ್ರೋಲ್ ಪಾಯಿಂಟ್ ಗ್ಲಾಸ್ ಒಡೆದು ಗುಂಡಾಗಿರಿ ಮೆರೆದರು ಎಂದು ಸಾರಿಗೆ ಘಟಕದ ಸಿಬ್ಬಂದಿ ಸುದ್ದಿಗಾರರಿಗೆ ತಿಳಿಸಿದರು. 

ಚಾಲಕ, ನಿವಾರ್ಹಕರ ಮೇಲೆ ಹಲ್ಲೆ ಮಾಡುತ್ತಿದ್ದವರನ್ನು ಬಿಡಿಸಲು ಹೋದವರ ಮೇಲೆ ಗುಂಡಾಗಿರಿ ನಡೆದಿದೆ. ಇದಕ್ಕೆ ಮನನೊಂದ ಸಾರಿಗೆ ಘಟಕ ಸಿಬ್ಬಂದಿ ದಿಢೀರ್ ಎಲ್ಲ ಬಸ್ಸುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನಾಲ್ಕು ಗಂಟೆಗಳಕಾಲ ಬಸ್ ಬಂದ್ ಮಾಡಿ ಪ್ರತಿಭಟನೆ ಮೆರವಣಿಗೆ ಮೂಲಕ ಪೊಲೀಸ್ ಠಾಣೆಗೆ ಆಗಮಿಸಿ ಹಲ್ಲೇ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆರೋಪಿಗಳ ವಿರುದ್ದ ದೂರು ದಾಖಲಿಸಿದ ಪ್ರತಿಯನ್ನು ನೀಡುವಂತೆ ಪಟ್ಟು ಹಿಡಿದು ಠಾಣೆ ಮುಂಭಾಗದಲ್ಲಿ ಪ್ರತಿಭಟಿಸಿದರು.   

ಪ್ರತಿಭಟನೆಯಿಂದಾಗಿ ಹೊರ ಊರಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ತೀವ್ರವಾಗಿ ಪರದಾಡುವಂತಾಯಿತು. ಬಸ್ ಚಾಲಕ ಚಂದಸಾಬ್ ಫನಿಬಂದ್, ನಿರ್ವಾಹಕ ಮಹಾದೇವ ದೇಮನ್ನವರ ಘಟನೆಯಲ್ಲಿ ತೀವ್ರ ಗಾಯಗೊಂಡ ಪರಿಣಾಮ ಗಾಯಾಳುಗಳನ್ನು ಅಂಬ್ಯುಲೆನ್ಸ್‌ ಮೂಲಕ ಚಿಕಿತ್ಸೆಗೆ ಸಾರ್ವಜನಿಕ  ಆಸ್ಪತ್ರೆಗೆ ದಾಖಲಿಸಲಾಯಿತು. 

ಸಿಪಿಐ ಎಂ.ಎಸ್‌.ಹೂಗಾರ ಮುಂದೆ ತಮ್ಮ ಅಳಲು ತೋಡಿಕೊಂಡು ಗುಂಡಾಗಿರಿ ಮೆರೆದ ಹಲ್ಲೆಕೋರರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದರು.  

ವಿಷಯ ತಿಳಿದು ಪೊಲೀಸ್ ಠಾಣೆಗೆ ಬಂದ ಬೆಳಗಾವಿ ಡಿಟಿಒ ಕೆ.ಕೆ.ಲಮಾಣಿ ಸಿಬ್ಬಂದಿ ಮೇಲೆ ಹಲ್ಲೆ ಆಗುವವರೆಗೆ ಸ್ಥಳೀಯ ಸಾರಿಗೆ ಘಟಕದ ಮೇಲಾಧಿಕಾರಿಗಳು ಎಲ್ಲಿ ಹೋಗಿದ್ದಿರಿ. ಸಿಬ್ಬಂದಿ ಮೇಲೆ ಹಲ್ಲೆ ಆಗಿರುವುದು ಖಂಡನೀಯ. ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರ ಕಾನೂನು ಕ್ರಮ ಜರುಗಿಸುವಂತೆ ಪ್ರಕರಣ ದಾಖಲಿಸಲಾಗುವುದು ಎಂದರು.  

ಆರೋಪಿಗಳನ್ನು ಯಕ್ಕುಂಡಿ ಗ್ರಾಮದ ಇಮಾಮಹುಸೇನ ದಿನ್ನಿಮನಿ, ಶಬ್ಬಿರ ದಿನ್ನಿಮನಿ, ಗೋರಿಮಾ ದಿನ್ನಿಮನಿ, ಇನ್ನೋರ್ವ ಮಹಿಳೆ ಎಂದು ಗುರುತಿಸಲಾಗಿದೆ.