ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಿ: ಐಜಿಪಿ ಸಂದೀಪ್ ಪಾಟೀಲ ಕರೆ

ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಿ: ಐಜಿಪಿ ಸಂದೀಪ್ ಪಾಟೀಲ ಕರೆ  Students, stay away from drugs: IGP Sandeep Patil's appeal.

ವಿಜಯಪುರ, ಜು.15: ವಿದ್ಯಾರ್ಥಿಗಳು ಕುತೂಹಲ, ಸ್ನೇಹಿತರ ಒತ್ತಡ ಅಥವಾ ಇತರ ಕಾರಣಗಳಿಗೆ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದೆ ಎಚ್ಚರಿಕೆ ವಹಿಸಬೇಕು ಎಂದು ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ ಕರೆ ನೀಡಿದರು. ನಗರದ ಸಿಕ್ಯಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಿಕ್ಯಾಬ್ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ಡ್ರಗ್ಸ್‌ ಜಾಗೃತಿ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಮಾರಾಟ ಮಾತ್ರವಲ್ಲ, ಸೇವನೆಯೂ ಕಾನೂನುಬದ್ಧ ಅಪರಾಧವಾಗಿದೆ ಎಂದು ಹೇಳಿದರು.

ಆಧುನಿಕ ಫೊರೆನ್ಸಿಕ್ ತಂತ್ರಜ್ಞಾನದ ಮೂಲಕ ಹಲವು ತಿಂಗಳುಗಳ ಬಳಿಕವೂ ಡ್ರಗ್ಸ್‌ ಸೇವಿಸಿರುವುದನ್ನು ಪತ್ತೆಹಚ್ಚಲು ಸಾಧ್ಯವಿದೆ. ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿದರೆ ಉನ್ನತ ಶಿಕ್ಷಣ, ವಿದೇಶಿ ವೀಸಾ, ಸರ್ಕಾರಿ ಉದ್ಯೋಗ ಸೇರಿದಂತೆ ಭವಿಷ್ಯದ ಅವಕಾಶಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕೆಲ ಕ್ಷಣಗಳ ಉಲ್ಲಾಸಕ್ಕಾಗಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  

ಡ್ರಗ್ಸ್‌ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು. ಡ್ರಗ್ಸ್‌ ಕುರಿತು ಮಾಹಿತಿ ಇದ್ದರೆ ಕೆಎಸ್‌ಪಿ ಆ್ಯಪ್ ಮೂಲಕ ಗೌಪ್ಯವಾಗಿ ಹಂಚಿಕೊಳ್ಳುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳು ತಮ್ಮ ಶಕ್ತಿ ಮತ್ತು ಪ್ರತಿಭೆಯನ್ನು ಶಿಕ್ಷಣ, ಕ್ರೀಡೆ ಹಾಗೂ ಸೃಜನಾತ್ಮಕ ಚಟುವಟಿಕೆಗಳತ್ತ ಕೇಂದ್ರೀಕರಿಸಿ ಆರೋಗ್ಯಕರ ಜೀವನ ನಡೆಸಬೇಕು ಎಂದು ಹೇಳಿದರು. ಸಮಾಜದ ಸಹಭಾಗಿತ್ವ ಅಗತ್ಯ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಲಾವುದ್ದೀನ್ ಪುಣೇಕರ್ ಮಾತನಾಡಿ, ಡ್ರಗ್ಸ್‌ ಸಮಸ್ಯೆ ಶಿಕ್ಷಣ ಸಂಸ್ಥೆಗಳಿಗೂ ವ್ಯಾಪಿಸಿದ್ದು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.  

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎ.ಎಸ್‌. ಪಾಟೀಲ ಮಾತನಾಡಿ, ವ್ಯಸನಮುಕ್ತ ಭಾರತ ನಿರ್ಮಾಣ ಸರ್ಕಾರ ಅಥವಾ ಪೊಲೀಸ್ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ; ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವದಿಂದಲೇ ಈ ಗುರಿ ಸಾಧಿಸಬಹುದು ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಡ್ರಗ್ಸ್‌ ವಿರುದ್ಧದ ಹೋರಾಟದಲ್ಲಿ ಪೂರೈಕೆಯನ್ನು ತಡೆಯುವುದಷ್ಟೇ ಸಾಕಾಗುವುದಿಲ್ಲ. ಅದರ ಬೇಡಿಕೆಯನ್ನು ಕಡಿಮೆ ಮಾಡುವ ಕಾರ್ಯಕ್ಕೂ ಆದ್ಯತೆ ನೀಡಬೇಕು.

ಯುವಜನರಲ್ಲಿ ಬೇಡಿಕೆ ಹೆಚ್ಚಿದಂತೆ ಪೂರೈಕೆಯೂ ಹೆಚ್ಚಾಗುತ್ತದೆ. ಆದ್ದರಿಂದ ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಪೂರೈಕೆ ಮತ್ತು ಬೇಡಿಕೆ ಎರಡನ್ನೂ ನಿಯಂತ್ರಿಸುವ ಸಮಗ್ರ ಹೋರಾಟ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತಿ ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ಗೀತೆಯನ್ನು ಕುಮಾರಿ ಸುಮಯ್ಯಾ ಹಾಡಿದರು. ನಗರ ಪೊಲೀಸ್ ಉಪಾಧೀಕ್ಷಕ ನಾಗರಾಜ ಜೆ. ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಡಾ. ಎಚ್‌.ಕೆ. ಯಡಹಳ್ಳಿ ಅತಿಥಿಗಳನ್ನು ಪರಿಚಯಿಸಿದರು.  

ಕಾರ್ಯಕ್ರಮದಲ್ಲಿ ಸಿಪಿಐಗಳಾದ ಆರಿಫ್ ಮುಷಾಪುರ, ಪ್ರದೀಪ್ ತಳಕೇರಿ, ಮಹೇಶ್ ಸಂಕ, ಡಿಎಸ್ಪಿ ಸುನಿಲ್ ಕಾಂಬೆ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.