ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ರಕ್ಷಣೆಗೆ ಶ್ರಮಿಸಿ: ಹೊರಟ್ಟಿ ಕರೆ

Strive to protect Kannada language, culture, heritage: Horatti

ಧಾರವಾಡ : ನಮ್ಮ ನೆಲದ ಜನಭಾಷೆ ಕನ್ನಡಕ್ಕೆ ಗೌರವ ಕೊಟ್ಟು ಈ ಭಾಷೆಯ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಗೆ ಸಮಸ್ತ ಕನ್ನಡಿಗರೂ ಒಗ್ಗೂಡಿ ಶ್ರಮಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕರೆ ನೀಡಿದರು.  

ಅವರು ನಗರದಲ್ಲಿ ಬೆಂಗಳೂರಿನ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗವು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬಹಳ ವಿಶಾಲವಾಗಿರುವ ಕರ್ನಾಟಕದ ನೆಲ, ಜಲ, ಗಡಿ ಮತ್ತು ಚಾರಿತ್ರಿಕ ಘನತೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದೂ ಹೊರಟ್ಟಿ ಹೇಳಿದರು.  

ಸಮ್ಮೇಳದ ಸರ್ವಾಧ್ಯಕ್ಷ ಪ್ರೊ. ಶಶಿಧರ್ ತೊಡಕರ ಮಾತನಾಡಿ, ಕನ್ನಡ ನಾಡಿನ ಐತಿಹಾಸಿಕ ಮಹತ್ವವನ್ನು ಎಲ್ಲರೂ ಅಧ್ಯಯನ ಮಾಡುವ ಅಗತ್ಯವಿದೆ. ಕನ್ನಡವನ್ನು ಎಲ್ಲರೂ ಪ್ರೀತಿಸಿ ಬಳಸಿದಾಗ ಅದನ್ನು ಉಳಿಸಲು ಸಾಧ್ಯವಾಗುತ್ತದೆ. ಕನ್ನಡವು ಕೋಟಿ ಕೋಟಿ ಕನ್ನಡಿಗರ ಉಸಿರಾಗಬೇಕು ಎಂದರು.  

ಮನಸೂರ ರೇವಣಸಿದ್ಧೇಶ್ವರಮಠದ ಶ್ರೀ ಬಸವರಾಜ ದೇವರು, ಮುಂಡಗೋಡದ ಶ್ರೀಜಂಪಾ ಲೋಬ್ಸಂಗ್ ಗುರೂಜಿ ಇದ್ದರು. ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿ ಹಾಗೂ ವರಕವಿ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ.ಡಿ.ಎಂ. ಹಿರೇಮಠ ಲಾಂಛನಗಳನ್ನು ಬಿಡುಗಡೆ ಮಾಡಿದರು. ‘ಕಡಲು ತೀರದ ಚೆಲುವೆ’ ಎಂಬ ಪುಸ್ತಕವನ್ನು ಕವಿವಿ ಎನ್‌.ಎಸ್‌.ಎಸ್ ಘಟಕದ ಸಂಯೋಜಕ ಡಾ. ಎಂ. ಬಿ. ದಳಪತಿ ಲೋಕಾರೆ​‍್ಣ ಮಾಡಿದರು. ಕವಿವಿ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡರ ಮಾತನಾಡಿದರು. ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ರಾಜ್ಯಾಧ್ಯಕ್ಷ ಎಸ್‌.ಡಿ.ಮುಡೆಣ್ಣವರ ಅಧ್ಯಕ್ಷತೆವಹಿಸಿದ್ದರು. ಜಿ.ಸಿ. ಕುಲಕರ್ಣಿ, ಆರ್‌. ಜಿ. ಮಾಂಗ್, ದ್ಯಾಮಣ್ಣ ಬಳಗಾನೂರ, ಸೋಮು ಮಾಳ್ಗಿ, ರಮೇಶ್ ಪವಾರ ಸೇರಿದಂತೆ ಇತರರು ಇದ್ದರು.  

ಪ್ರಶಸ್ತಿ ಪ್ರದಾನ : ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯಮಟ್ಟದ ಕರುನಾಡ ರತ್ನ, ಕಾಯಕಯೋಗಿ ರತ್ನ, ಕಾರ್ಮಿಕ ರತ್ನ, ಸರ್ವೋತ್ತಮ ಸೇವಾ ರತ್ನ, ಸಂಜೀವಿನಿ ಸೇವಾ ರತ್ನ, ಕಲಾ ತಿಲಕ ರತ್ನ, ಕಲಾ ಸರಸ್ವತಿ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಬಳಗದ ವಿವಿಧ ಜಿಲ್ಲಾ ಅಧ್ಯಕ್ಷರಿಗೆ ಸೇವಾದೀಕ್ಷೆ ನಡೆಯಿತು. ನಂತರ ಡಾ. ಬಿ.ಪಿ. ಚಡ್ಡಿ ಅಧ್ಯಕ್ಷತೆಯಲ್ಲಿ ಜರುಗಿದ ವಿಚಾರಗೋಷ್ಠಿಯಲ್ಲಿ ಡಾ.ಶ್ರೀಧರ್ ಹೆಗಡೆ ಬದ್ರನ್, ಡಾ. ನಾಗೇಂದ್ರ ಪಿ., ರಾಕೇಶ್ ಹಿರೇಮಠ, ರಮೇಶ್ ಪರಿಟ್, ರಾಜು ದಳಪತಿ, ಸಂಗಮೇಶ್ವರ ಧಾರವಾಡ, ಶಿವಾನಂದ ಗಾಣಿಗೇರ, ವಿನಾಯಕ ರಗಟಿ, ಪ್ರೊ. ಎಚ್‌. ಎ. ಭಿಕ್ಷಾವರ್ತಿಮಠ, ಡಾ. ಶರಣಮ್ಮ ಗೋರೆಬಾಳ, ಶ್ರೀನಿವಾಸ್ ವಾಲಿ, ಸಂತೋಷ್ ಕುಂಬಾರ ಹಾಗೂ ರಾಜ್ಯದ ಹಲವಾರು ಜಿಲ್ಲೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.