ವಿಜಯಪುರ 07: ಹಿಂದೆ ನಾವು ಲಿಂಗಾಯತ ಧರ್ಮ ಮಾನ್ಯತೆಗೆ ಪ್ರಯತ್ನಿಸಿದ್ದೇವು. ಆದರೆ, ಕೆಲವರು ಧರ್ಮ ಒಡೆಯಲು ಪ್ರಯತ್ನಿಸಿದೆ ಎಂದು ಆರೋಪಿಸಿದರು. ಅಂದು ಸ್ವತಂತ್ರ ಧರ್ಮದ ಮಾನ್ಯತೆ ದೊರಕಿದ್ದರೆ ಇಂದು ಲಿಂಗಾಯಿತ ಎಲ್ಲ ಉಪಪಂಗಡಗಳಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತಿದ್ದವು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಇಂದು ಬುಧವಾರ ಬಬಲೇಶ್ವರ ತಾಲೂಕಿನ ಧನ್ಯಾಳ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಣ ಮಾಡಿ ಅವರು ಮಾತನಾಡಿದರು.
ಬಸವಣ್ಣನವರು ಲಿಂಗಾಯಿತ ಧರ್ಮ ಸ್ಥಾಪಿಸಿದ 12ನೇ ಶತಮಾನದಿಂದ 1881ರ ವರೆಗೆ ಲಿಂಗಾಯಿತ ಪ್ರತ್ಯೇಕ ಧರ್ಮವಾಗಿತ್ತು. ಆದರೆ, 1881 ರಲ್ಲಿ ಮೈಸೂರು ಅರಸರು ಲಿಂಗಾಯಿತರನ್ನು ಪ್ರತ್ಯೇಕ ಧರ್ಮದ ಕಾಲಂ ನಿಂದ ತೆಗೆದು ಹಿಂದೂ ಧರ್ಮದ ಶೂದ್ರ ವರ್ಣದಲ್ಲಿ ಸೇರಿಸಿದರು. ದಯವೇ ಧರ್ಮದ ಮೂಲವಯ್ಯ ಎಂಬ ತಿರುಳು ಹೊಂದಿರುವ ಬಸವ ಧರ್ಮ ಪಾಲನೆಯಾದರೆ ವಿಶ್ವದಲ್ಲಿ ಯುದ್ಧದ ವಾತಾವರಣವೇ ಇರಲ್ಲ. ಮುಂದಿನ ದಿನಗಳಲ್ಲಿ ಬಸವ ಭಾರತವಾಗಲಿದೆ. ಆಗ ದೇಶದಲ್ಲಿ ಕಾಯಕ, ದಾಸೋಹ, ಸಮಾನತೆ, ಸಾಮರಸ್ಯ ನೆಲೆಸಲಿದೆ ಎಂದು ಅವರು ಹೇಳಿದರು.
ಧನ್ಯಾಳ ಗ್ರಾಮಸ್ಥರು ಶ್ರದ್ಧೆ, ಭಕ್ತಿ, ವಿಜೃಂಭಣೆಯಿಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಮೂರ್ತಿ ಉದ್ಘಾಟಿಸಿರುವುದು ಸಂತಸ ತಂದಿದೆ. ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿಗೆ ರೂ. 10 ಲಕ್ಷ ಆರ್ಥಿಕ ನೆರವು ನೀಡುತ್ತೇನೆ ಎಂದು ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದರು.
ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬೆಂಗಳೂರಿನ ಕುಂಬಳಗೋಡಿನ ಬಳಿ ವಿಶ್ವಗುರು ಬಸವಣ್ಣನವರ ಮೂರ್ತಿ ನಿರ್ಮಾಣ ಅರ್ಧಕ್ಕೆ ನಿಂತಿತ್ತು. ಮೈಸೂರು ಹೆದ್ದಾರಿಯ ಮೇಲೆ ಮಹಾಸ್ವಾಮಿಗಳಾದಿಯಾಗಿ ಎಲ್ಲರೂ ಸಂಚರಿಸಿದರೂ ಯಾರೂ ಅತ್ತ ಗಮನ ಹರಿಸಿರಲಿಲ್ಲ. ಆದರೆ, ಸಚಿವ ಎಂ. ಬಿ. ಪಾಟೀಲ ಅವರು ಅವರು ಮೂರ್ತಿ ಪೂರ್ಣಗೊಳಿಸಲು ರೂ. 1 ಕೋಟಿ ನೆರವು ನೀಡಿದ್ದಾರೆ. ಇದು ಅವರ ಬಸವ ಭಕ್ತಿಗೆ ಸಾಕ್ಷಿ ಎಂದು ಎಂದ ಅವರು ಸಚಿವರು ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮ ಹೆಸರು ನಾಮಕರಣ ಮಾಡಿ ಸ್ವಾತಂತ್ರ್ಯ ಹೋರಾಟದ ಕಿಚ್ಚಿಗೆ ಗೌರವ ನೀಡಿದ್ದಾರೆ ಎಂದು ಹೇಳಿದರು.
ಮಠದಲ್ಲಿ ಪ್ರಸಾದ ಸೇವಿಸಿರುವುದನ್ನು ಜನರು ಮರೆಯಬಹುದು. ಆದರೆ, ಹೊಲಗಳಿಗೆ ನೀರು ಕೊಟ್ಟವರನ್ನು ಎಂದೂ ಮರೆಯಬಾರದು. ಅನ್ನದಾತರು ಸದಾ ಅವರ ಬೆನ್ನಿಗೆ ನಿಲ್ಲಬೇಕು ಎಂದು ಸ್ವಾಮೀಜಿ ಹೇಳಿದರು.
ಮುದಗಲ್ ತಿಮ್ಮಾಪೂರದ ಕಲ್ಯಾಣಾಶ್ರಮ ಮಹಾಂತೇಶ್ವರ ಮಠದ ಪ್ರವಚನಯೋಗಿ ಡಾ. ಮಹಾಂತ ಸ್ವಾಮಿಗಳು ಮಾತನಾಡಿ, ವಿಶ್ವಗುರು ಬಸವಣ್ಣನವರು ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ್ದಾರೆ. 16ನೇ ಶತಮಾನದಲ್ಲಿ ಸರ್ವಜ್ಞನ ಅಪ್ಪಣೆಯಂತೆ ಕಳೆದ ಎರಡು ವರ್ಷಗಳಿಂದ ರಾಜ್ಯ ಸರಕಾರ ಬಸವಣ್ಣನ ವಿಚಾರಗಳನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದು, ಇದರ ಹಿಂದೆ ಎಂ. ಬಿ. ಪಾಟೀಲ ಅವರ ಕೊಡುಗೆ ಅಪಾರವಾಗಿದೆ. ಬಸವಣ್ಣ ಮತ್ತು ಶರಣರ ವಚನ ಪ್ರಸಾರದಲ್ಲಿ ಡಾ. ಫ. ಗು. ಹಳಕಟ್ಟಿ, ಹರ್ಡೆಕರ ಮಂಜಪ್ಪನವರ ಪಾತ್ರ ಪ್ರಮುಖವಾಗಿದೆ. ರಾಷ್ಟ್ರ ಮತ್ತು ವಿಶ್ವ ಉಳಿಯಬೇಕಾದರೆ ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ, ಮನೆಮನೆಗಳಲ್ಲಿ ಅಳವಡಿಸಿಕೊಳ್ಳಬೇಕು. ಯುವಜನತೆ ದುಷ್ಚಟಗಳಿಂದ ದೂರವಿದ್ದು ಧನ್ಯಾಳದ ಯುವಕರು ಧನ್ಯರಾಗಬೇಕು. ಬಸವ ತತ್ವ ನಮ್ಮ ಉಸಿರು, ಆದರ್ಶವಾಗಬೇಕು ಎಂದು ಹೇಳಿದರು.
ಗ್ರಾಮದ ಮುಖಂಡ ಚಂದ್ರಶೇಖರ ಗಂಟೆಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ನಿಡೋಣಿ ಚನ್ನವೀರೇಶ್ವರ ವಿರಕ್ತಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ, ಹೆಬ್ಬಾಳಹಟ್ಟಿ ಚಂದ್ರಗಿರಿ ಸದಾಶಿವ ಮಠದ ಸಿದ್ದಲಿಂಗಯ್ಯ ಹಿರೇಮಠ ಸ್ವಾಮೀಜಿ ಉಪಸ್ಥಿತರಿದ್ದರು.