ವಿಜೃಂಭಣೆಯಿಂದ ಶ್ರೀಗುದ್ನೇಶ್ವರ ಪಂಚ ಕಳಸ ರಥೋತ್ಸವ ಸಂಪನ್ನ

ಕುಕನೂರು 27: ಪಟ್ಟಣದಲ್ಲಿ ಗುದ್ನೇಶ್ವರ ಸ್ವಾಮಿಯ ಪಂಚಕಳಸ ಮಹಾ ರಥೋತ್ಸವವು ಸಹಸ್ರಾರು ಸದ್ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.  

ಪ್ರತಿವರ್ಷದಂತೆ ಈ ವರ್ಷವೂ ಸಹ ಹೋಸ್ತಿಲ ಹುಣ್ಣಿಮೆಯ ದಿನದಂದು ಸಾಯಂಕಾಲ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯದೈವ ಗುದ್ನೇಶ್ವರ (ರುದ್ರ ಮುನೇಶ್ವರ) ಜಾತ್ರಾ ಮಹೋತ್ಸವ ಜರುಗಿತು. ಜಾತ್ರಾ ಮಹೋತ್ಸವ ದ ಮಹಾರಥೋತ್ಸವಕ್ಕೂ ಮುನ್ನ ಬೆಳಗಿನ ಬ್ರಾಹ್ಮಿ ಮುಹೂರ್ತದಿಂದ ಶ್ರೀಮಠದಲ್ಲಿ ವಿಧಾನಗಳನ್ನು ನೆರವೇರಿಸಲಾಯಿತು. ಸಾಯಂಕಾಲವಾಗುತ್ತಿದ್ದಂತೆ ಬಿನ್ನಾಳ ಗ್ರಾಮದಿಂದ ನಂದಿ ಕೋಲು ಸೇವೆ ಹಾಗೂ ಪಕ್ಕದಲ್ಲಿರುವ ಅಳಿಯಪ್ಪನ ಮಠ ಗ್ರಾಮದಿಂದ ಶ್ರೀ ಅಳಿಯ ಚೆನ್ನಬಸವೇಶ್ವರ ಭಜನಾ ಸಂಘದವರಿಂದ ಪಲ್ಲಕ್ಕಿ ಸೇವೆ ಆಗಮಿಸುತ್ತಿದ್ದಂತೆಯೇ ಶ್ರೀ ಸ್ವಾಮಿಯ ಪಂಚಕಳಸ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.  

ಪುರಾತನ ಕಾಲದಲ್ಲಿ ಗುದ್ನೇಶ್ವರ ಪವಾಡ ಕಥೆಗಳು ಅದ್ಭುತವಾಗಿದ್ದು ಅವುಗಳಲ್ಲಿ ಪ್ರಮುಖವಾದದ್ದು ಬೆಳಗಾಗುವುದರೊಳಗೆ 500ಕ್ಕೂ ಹೆಚ್ಚು ಎಕರೆ ಭೂ ಪ್ರದೇಶವನ್ನು ಗುಡ್ನೇಶ್ವರರು ಬಿತ್ತನೆ ಮಾಡಿ ಪವಾಡ ಮಾಡಿದ್ದು ಆ ಕಾಲದಲ್ಲಿ ಬಿತ್ತಿದ ಬೀಜಗಳು ಬೃಹತ್ ಹುಣಸೆ ಮರವಾಗಿ ನಿಂತಿರುವುದನ್ನು ಇಂದಿಗೂ ಸಹ ಕಾಣಬಹುದಾಗಿದ್ದು ಗುದ್ನೆಪ್ಪನ ಮಠ ಪ್ರದೇಶದಲ್ಲಿ ಬೃಹದಾಕಾರವಾಗಿ ಬೆಳೆದ ಸಹಸ್ರಾರು ಹುಣಸೆ ಮರಗಳನ್ನು ಇಂದಿಗೂ ಸಹ ಕಾಣಬಹುದಾಗಿದೆ ಹಾಗೂ ರಾತ್ರೋರಾತ್ರಿ ಹುಣಸೆ ಮರ ಬಿತ್ತನೆಗೆ ಬಳಸಿದ ಬಸವಣ್ಣ (ಎತ್ತುಗಳು) ಕಲ್ಲಿನ ರೂಪ ಪಡೆದು ಸ್ಥಾಪಿತಗೊಂಡಿರುವುದನ್ನು ಇಂದಿಗೂ ಸಹ ದೇವಸ್ಥಾನದ ಆವರಣದಲ್ಲಿ ಕಾಣಬಹುದಾಗಿದೆ.  

ಇನ್ನು ನವ ವಿವಾಹಿತ ಜೋಡಿಗಳು ತಪ್ಪದೇ ಗುಡ್ನೇಶ್ವರರ ಪಂಚಕಳಸ ರಥೋತ್ಸವದ ದರ್ಶನ ಪಡೆದು ಪಾವನರಾಗಬೇಕು ಎಂಬುದು ಇಲ್ಲಿನ ಜನರಲ್ಲಿ ಬೇರೂರಿದ ನಂಬಿಕೆಯಾಗಿದ್ದು ಈ ರೀತಿ ಪಂಚ ಕಳಸ ಮಹಾರಾತೋತ್ಸವದ ದರ್ಶನ ಪಡೆದ ದಂಪತಿಗಳು ಮುಂದಿನ ವರ್ಷ ರಥೋತ್ಸವದ ಒಳಗೆ ತಮ್ಮ ಸಂತಾನ ದೊಂದಿಗೆ ಆಗಮಿಸಿ ರಥೋತ್ಸವದ ದರ್ಶನ ಪಡೆಯುತ್ತಾರೆ. ಗುಡ್ನೇಶ್ವರ ಸ್ವಾಮಿಯ ದಯೆಯಿಂದ ಪಂಚ ಕಳಸ ದರ್ಶನ ಪಡೆದ ನವ ವಿವಾಹಿತರಿಗೆ ಸಂತಾನ ಭಾಗ್ಯ ದೊರೆಯುವುದು ನಿಶ್ಚಿತ ಎಂಬುದು ಜನತೆಯ ನಂಬಿಕೆಯಾಗಿದೆ.  

ಪಂಚ ಕಳಸ ಮಹಾ ರಥೋತ್ಸವಕ್ಕೆ ಆಗಮಿಸಿದ ಭಕ್ತವರ್ಗದವರು ತಮ್ಮ ಹರಕೆಗಳನ್ನು ಈಡೇರಿಸಿ ಮಹಾ ರಥೋತ್ಸವಕ್ಕೆ ಉತ್ತತ್ತಿ ಹಾಗೂ ಬಾಳೆಹಣ್ಣನ್ನು ಸಮರ​‍್ಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.