ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.2ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.2ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ  Sri Krishna Janmashtami Celebration at Government Model Primary School No. 2


ಲಕ್ಷ್ಮೇಶ್ವರ, ಸೆ.4: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.2ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ಶ್ರೀಕೃಷ್ಣನ ವೇಷಭೂಷಣ ಧರಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಪ್ರಧಾನ ಗುರುಮಾತೆ ಎಸ್‌.ಎಚ್‌. ಉಮಚಗಿ ಅವರು, ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯೂ ಒಂದಾಗಿದೆ. ಮಹಾವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ದಿನವನ್ನು ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಸಡಗರದಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು.  

ಜನ್ಮಾಷ್ಟಮಿಯಂದು ಭಕ್ತರು ಉಪವಾಸ ಹಾಗೂ ವ್ರತ ಆಚರಿಸುತ್ತಾರೆ. ಮನೆಗಳನ್ನು ಹೂವು ಹಾಗೂ ರಂಗೋಲಿಗಳಿಂದ ಅಲಂಕರಿಸಿ, ಬಾಲಕೃಷ್ಣನ ಹೆಜ್ಜೆ ಗುರುತುಗಳನ್ನು ಮನೆಯ ಹೊಸ್ತಿಲಿನಿಂದ ಪೂಜಾ ಕೋಣೆಯವರೆಗೆ ಬಿಡಿಸುವ ಸಂಪ್ರದಾಯವಿದೆ.

ಮಧ್ಯರಾತ್ರಿ ಕೃಷ್ಣನ ಜನ್ಮ ಸಮಯದಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ಆರತಿ ನೆರವೇರಿಸಲಾಗುತ್ತದೆ. ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಮೊಸರು, ಅವಲಕ್ಕಿ ಲಾಡು, ಚಕ್ಕುಲಿ ಸೇರಿದಂತೆ ವಿವಿಧ ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ​‍್ಿಸಲಾಗುತ್ತದೆ ಎಂದರು.  

ಮರುದಿನ ಯುವಕರು ‘ಮೊಸರು ಕುಡಿಕೆ’ (ದಹಿ ಹಂಡಿ) ಉತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಭಗವದ್ಗೀತೆಯ ಜ್ಞಾನವನ್ನು ಜಗತ್ತಿಗೆ ನೀಡಿದ, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿದ ಜಗದೋದ್ಧಾರಕ ಶ್ರೀಕೃಷ್ಣನು ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಅವರು ಹಾರೈಸಿದರು.  

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಸ್‌.ಎಸ್‌. ಜಿರಂಕಳಿ, ಕೆ.ಆರ್‌. ಮುದಕಣ್ಣವರ, ಪಿ.ಎಸ್‌. ಹವಾಲ್ದಾರ, ಎಲ್‌.ಎಂ. ದುಂಡಪ್ಪನವರ, ಎನ್‌.ಎಸ್‌. ಬಂಕಾಪುರ, ಪಿ.ಎಂ. ಆಡೂರು, ಪಿ.ಎಫ್‌. ಪಾಟೀಲ, ಭಾಗ್ಯಶ್ರೀ ಪೂಜಾರ, ಪೂರ್ಣಿಮಾ, ಆದಿ ಶಾಂಭವಿ, ಅಕ್ಕೂರು ಮಮತಾಜ್, ಸೊರಟೂರು ತೇಜಸ್ವಿನಿ, ಅಂಗಲಕೋಟಿ ಆಯಿಷಾ, ಶೋಭಾ, ಶ್ವೇತಾ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.