ಬಳ್ಳಾರಿಯಲ್ಲಿ ಸಂಭ್ರಮದ ಶ್ರೀ ಭಗೀರಥ ಜಯಂತಿ ಆಚರಣೆ
ಬಳ್ಳಾರಿ 04: ಮಹರ್ಷಿ ಭಗೀರಥರು ಛಲ ಮತ್ತು ದೃಢಸಂಕಲ್ಪ ಹೊಂದಿದವರು. ಇಂತಹ ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ವಿ.ಚಿದಾನಂದಪ್ಪ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಏರಿ್ಡಸಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಭಗೀರಥನು ಛಲ ಮತ್ತು ದೃಢ ವಿಶ್ವಾಸದಿಂದ ಶಿವನನ್ನು ಮೆಚ್ಚಿಸಲು ಘೋರ ತಪಸ್ಸು ಮಾಡಿದವರು ಎಂದು ತಿಳಿಸಿದರು.ಸಹಾಯಕ ಆಯುಕ್ತ ಪ್ರಮೋದ್ ಅವರು ಮಾತನಾಡಿ, ಸೂರ್ಯವಂಶದ ರಾಜನಾದ ಭಗೀರಥ ಮಹಾರಾಜ ತನ್ನ ಜನರಿಗಾಗಿ ಶಿವನನ್ನು ಕುರಿತು ತಪಸ್ಸು ಮಾಡಿ ಗಂಗೆಯನ್ನು ಧರೆಗೆ ತಂದ ಮಹಾ ಪುರುಷ. ಅವರ ತತ್ವ ಸಿದ್ದಾಂತಗಳು ಇಂದಿಗೂ ಪ್ರಸ್ತುತ ಎಂದರು. ಭಗೀರಥ ಮಹರ್ಷಿಗಳ ತಪೋ ಶಕ್ತಿಗೆ ಶಿವನೇ ಪ್ರತ್ಯಕ್ಷವಾಗಿ, ಧರೆಗೆ ಗಂಗೆಯನ್ನು ಇಳಿಸಿದರು ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದರು.ಕನ್ನಡ ಉಪನ್ಯಾಸಕ ಅಮಾತಿ ಬಸವರಾಜ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಭಗೀರಥರು ಶಿವನನ್ನು ಮೆಚ್ಚಿಸಲು ತಪಸ್ಸು ಮಾಡಿದವರು. ಪವಿತ್ರ ಗಂಗೆಯನ್ನು ತಪಸ್ಸು ಮಾಡುವ ಮೂಲಕ ಸ್ವರ್ಗದಿಂದ ಭೂಮಿಯ ಮೇಲೆ ತರಿಸಿದವರು ಎಂದರು.ಕಾರ್ಯಕ್ರಮದಲ್ಲಿ ಬಿ. ಕಾಸಿಂ ಅಲಿ ತಂಡದಿಂದ ಭಕ್ತಿ ಸಂಗೀತ ಪ್ರಸ್ತುತ ಪಡಿಸಿದರು.ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಮೋದ್, ಮಹಾನಗರ ಪಾಲಿಕೆಯ ಸಭಾ ನಾಯಕ ಪಿ.ಗಾದೆಪ್ಪ, ಜಿಲ್ಲಾ ಭಗೀರಥ ಉಪ್ಪಾರ ಸಂಘ ಅಧ್ಯಕ್ಷ ಹನುಮೇಶ್ ಉಪ್ಪಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಮುಖಂಡರು, ಜನ ಪ್ರತಿನಿಧಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಸಡಗರದ ಮೆರವಣಿಗೆ:ಭಗೀರಥ ಜಯಂತಿ ಅಂಗವಾಗಿ ಏರಿ್ಡಸಿದ್ದ ಮೆರವಣಿಗೆಯು ಸಡಗರದಿಂದ ನಡೆಯಿತು. ಮೆರವಣಿಗೆಯು ನಗರದ ರಾಜ್ಕುಮಾರ್ ರಸ್ತೆಯ ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭಗೊಂಡು ಗಡಿಗಿ ಚೆನ್ನಪ್ಪ ವೃತ್ತ-ಬೆಂಗಳೂರು ರಸ್ತೆ-ಹಳೆ ಬ್ರೂಸ್ ಪೇಟೆ ಪೊಲೀಸ್ ಠಾಣೆ ರಸ್ತೆ-ತೇರು ಬೀದಿ-ಹೆಚ್.ಆರ್.ಗವಿಯಪ್ಪ ವೃತ್ತ- ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಸಾಗಿ ಬಂದು ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದವು.