ಸಂಸ್ಕೃತಿ ಉಳಿಯಲು ಸಂಸ್ಕಾರ ಬೆಳೆಯಲು ಆಧ್ಯಾತ್ಮಿಕ ಸತ್ಸಂಗ ಅಗತ್ಯ

ಬಿಸನಾಲ ತೋಟದಲ್ಲಿ ವಿಜೃಂಭಣೆಯಿಂದ ಬನ್ನೆಮ್ಮದೇವಿ ಜಾತ್ರೆ, ಹನುಮ ಜಯಂತಿ 

ಮಹಾಲಿಂಗಪುರ 26: ಭಾರತೀಯ ಸಂಸ್ಕೃತಿ ಉಳಿಯಲು, ಸಂಸ್ಕಾರ ಬೆಳೆಯಲು ಸತ್ಸಂಗ ಮತ್ತು ಆಧ್ಯಾತ್ಮಿಕ ಉತ್ಸವಗಳು ಅಗತ್ಯ ಎಂದು ಗದ್ಯಾಳ ಬಬಲಾದಿಮಠದ ರಾಮಯ್ಯಸ್ವಾಮಿಜಿ ಹೇಳಿದರು. 

ಸಮೀಪದ ಬಿಸನಾಳ ಗ್ರಾಮದ ಜೈಆಂಜನೇಯ ಸನ್ನಿಧಿಯಲ್ಲಿ ನಡೆದ ಹನುಮ ಜಯಂತಿ ಹಾಗೂ ಬನ್ನೆಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು. ತಂತ್ರಜ್ಞಾನ ಎಷ್ಟೇ ಬೆಳೆದರೂ ನೆಮ್ಮದಿಯ ಬದುಕಿಗೆ ಆತ್ಮಜ್ಞಾನ ಬೇಕು ಎಂದರು. ಇಟ್ನಾಳ ಸಿದ್ದೇಶ್ವರ ಸ್ವಾಮಿಜಿ ಮಾತನಾಡಿದರು.  

ಉತ್ಸವ ನಿಮಿತ್ತ ಸನ್ನಿಧಿಗೆ ಗೋಮಾತೆಯ ಪ್ರವೇಶ ಮಾಡಿಸಿ ಪೂಜಿಸಲಾಯಿತು. ಯಡೂರಿನ ಮಹಾಲಿಂಗ ಗುರುಸ್ವಾಮಿಗಳಿಂದ ಪವಮಾನ ಹೋಮ-ಹವನ ಜರುಗಿತು. ಬನ್ನೆಮ್ಮದೇವಿ ದೇವಸ್ಥಾನದಿಂದ ಸಮೀರವಾಡಿ ಮಾರ್ಗವಾಗಿ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ, ಪಲ್ಲಕ್ಕಿ ಉತ್ಸವ ವಾದ್ಯ ಮೇಳದೊಂದಿಗೆ ಸನ್ನಿಧಿವರೆಗೆ ಶೋಭಾಯಾತ್ರೆ ಜರುಗಿತು. ಅಯ್ಯಪ್ಪ ಸನ್ನಿಧಿಯ ಈರಯ್ಯಸ್ವಾಮಿ, ಪ್ರಕಾಶ ಮಠದ, ಅವರಿಂದ ರುದ್ರಾಭಿಷೇಕ ನೆರವೇಸರಿತು. ಹನುಮ ಜಯಂತಿ ನಿಮಿತ್ತ ಮುತೈದೆಯರಿಂದ ತೊಟ್ಟಿಲು ಉತ್ಸವ ಮತ್ತು  ನಾಮಕರಣ  ಕಾರ್ಯಕ್ರಮ ಜರುಗಿತು.  

ಸಂಜೆ ಸದಾಶಿವ ರಗಟಿ ಪೂಜ್ಯರಿಂದ ಅಗ್ನಿ ಪೂಜೆ ನಂತರ ಜೈ ಆಂಜನೇಯ ಸನ್ನಿಧಿಯ ಹನುಮ ಮಾಲಾಧಾರಿಗಳಿಂದ ಹಾಗೂ ಮಹಿಳೆಯರಿಂದ ಅಗ್ನಿ ಹಾಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಕಾರ್ಯಕ್ರಮದ ನಂತರ ಹಾಲುಗ್ಗಿ ಅನ್ನಸಾರು ಮಹಾಪ್ರಸಾದ ಸವಿದರು. 

ಜೈ ಆಂಜನೇಯ ಸನ್ನಿಧಿ ರೂವಾರಿ ಶಿವಲಿಂಗ ಗುರುಸ್ವಾಮಿ,  ಅಚನೂರ ಶ್ರೀಶೈಲ ಸಾಹುಕಾರ ಸ್ವಾಮಿಜಿ, ರಾಯಪ್ಪ ಕುರನಿಂಗ, ಕಲ್ಲಪ್ಪ ಮಲಕಾಪೂರ, ಚಂದ್ರು ಸಂಶಿ, ಬಸಪ್ಪ ವಾಲಿ, ಸಂತೋಷ ಮುಳ್ಳೂರ, ಗೀರೀಶ ವಾಲಿ, ನಿಂಗಪ್ಪ ಕುರನಿಂಗ, ಬಸವರಾಜ ಮಾನೋಜಿ, ಯಮನಪ್ಪ ದಡ್ಡಿಮನಿ, ಅಶೋಕ ಸಂಶಿ, ಲಕ್ಕಪ್ಪ ದಳವಾಯಿ ಹಾಗೂ ಸಮೀರವಾಡಿ ಸೋಮೈಯಾ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.