ನೈರುತ್ಯ ವಲಯದ ರೈಲ್ವೇ ಹಳೇ ಟಿಕೆಟ್ ದರ ಜಾರಿಗೆ

ಹೊಸಪೇಟೆ 22: ರೈಲ್ವೇ ಸಚಿವಾಲಯದ ಆದೇಶ ಪಿ.ಇ.ಡಿ. ಕೋಚಿಂಗ್ ನೊ ಡಿ.ಟಿ.ಪಿ, ಮಾ. 1 ಪ್ರಕಾರ ನೈರುತ್ಯ ವಲಯದ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಹುಬ್ಬಳ್ಳಿ ಹಿ ತಿರುಪತಿ ಪ್ರಯಾಣಿಕರ ಗಾಡಿ ಸಂಖ್ಯೆ : 07657/07658 ಟಿಕೆಟ್ ದರಗಳನ್ನು ಕೋವಿಡ್‌-19 ಪೂರ್ವ ಅವಧಿಯಲ್ಲಿ ಚಾಲ್ತಿಯಲ್ಲಿದ್ದಂತೆ ಹಳೇ ಟಿಕೆಟ್ ದರಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ 2020 ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್ ಘೋಷಿಸಿದ ನಂತರ ಪ್ಯಾಸೆಂಜರ್ ರೈಲು ಸಂಚಾರ ರದ್ದುಗೊಳಿಸಲಾಯಿತು. 2021ರಲ್ಲಿ ಹಂತ ಹಂತವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತೆ ರೈಲು ಸಂಚಾರ ಆರಂಭಿಸಲಾಯಿತಾದರೂ ಹೆಚ್ಚುವರಿ ದರ ಜಾರಿಗೊಳಿಸಲಾಯಿತು. ಹೆಚ್ಚುವರಿ ಆಧಿಕ ಟಿಕೆಟ್ ದರ ವ್ಯವಸ್ಥೆ ನಿರಂತರವಾಗಿ ಮೂರು ವರ್ಷ ಮುಂದುವರೆದು ಈಗ ಮಾರ್ಚ್‌ ತಿಂಗಳಿನಿಂದ ಹೆಚ್ಚುವರಿ ಟಿಕೆಟ್‌ದರ ವ್ಯವಸ್ಥೆಯನ್ನು ಹಿಂಪಡೆದು ಕೋವಿಡ್ 19 ಪೂರ್ವದ ದಿನಗಳಲ್ಲಿ ಚಾಲ್ತಿಯಲ್ಲಿದ್ದ ಹಳೇ ಟಿಕೆಟ್ ದರ ವ್ಯವಸ್ಥೆಯನ್ನು ಮರು ಜಾರಿಗೊಳಿಸಲಾಗಿದೆ.  

ಅದರಂತೆ ಹುಬ್ಬಳ್ಳಿ-ತಿರುಪತಿ ರೈಲಿನಲ್ಲಿ ಹೊಸಪೇಟೆಯಿಂದ ಬಳ್ಳಾರಿಗೆ ಹೆಚ್ಚುವರಿ ದರ 55ರೂ.ಗಳನ್ನು ರದ್ದುಗೊಳಿಸಿ ಈಗ 20 ರೂ. ಹಳೇ ದರ ಜಾರಿಗೊಳಿಸಲಾಗಿದೆ ಹಾಗೂ ಹೊಸಪೇಟೆಯಿಂದ ಗುಂತಕಲ್‌ಗೆ 35 ರೂ. ತಿರುಪತಿಗೆ 85 ರೂ. ಹೊಸಪೇಟೆಯಿಂದ ಹುಬ್ಬಳ್ಳಿಗೆ ರೂ.35 ಹಳೇ ದರ ಜಾರಿಗೊಳಿಸಲಾಗಿದೆ. ಅದೇ ರೀತಿ ಸಂಜೆ 4.50 ಗಂಟೆಗೆ ಹೊಸಪೇಟೆಯಿಂದ ನಿರ್ಗಮಿಸುವ ಹೊಸಪೇಟೆ- ದಾವಣಗೆರೆ- ಹರಿಹರ ಗಾಡಿ ಸಂಖ್ಯೆ : 06245/06246 ರೈಲಿನ ಟಿಕೆಟ್ ದರಗಳು ಇಳಿಕೆಯಾಗಿದ್ದು ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿ 10 ರೂ. ದಾವಣಗೆರೆಗೆ 35 ರೂ ಪರಿಷ್ಕರಿಸಲಾಗಿದ್ದು, ರೈಲ್ವೆ ಸಚಿವಾಲಯದ ನಿರ್ಧಾರದಿಂದ ಬಡಜನರು ಮಧ್ಯಮ ವರ್ಗಕ್ಕೆ ಅನುಕೂಲವಾಗಲಿದೆ. ಅಂದಹಾಗೆ ಕರೋನಾ ಪೂರ್ವ ಸಂದರ್ಭದಲ್ಲಿ ಹಿರಿಯ ನಾಗರೀಕರಿಗೆ ಜಾರಿಯಲ್ಲಿದ್ದ ರಿಯಾಯಿತಿ ಟಿಕೆಟ್ ದರ ಸೌಲಭ್ಯ ರದ್ದಾಗಿದ್ದು, ಅದನ್ನು ಮತ್ತೆ ಮರುಜಾರಿಗೊಳಿಸುವ ಅಗತ್ಯವಿದೆ. ಇದರಿಂದ ದೇಶದ 8ಕೋಟಿ ಹಿರಿಯ ನಾಗರೀಕರಿಗೆ ಅನುಕೂಲವಾಗಲಿದ್ದು, ಚುನಾವಣೆ ನಂತರ ರಚನೆಯಾಗುವ ನೂತನ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂಬುದು ಹಿರಿಯ ನಾಗರೀಕರ ಒತ್ತಾಸೆಯಾಗಿದೆ.