ಶಿವಪ್ರಸಾದ್ ಎಸ್‌. ಬನ್ನಟ್ಟಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಶಿವಪ್ರಸಾದ್ ಎಸ್‌. ಬನ್ನಟ್ಟಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ  Solo Art Exhibition by Shivaprasad S. Bannatti

ಲೋಕದರ್ಶನ ವರದಿ 

ಶಿವಪ್ರಸಾದ್ ಎಸ್‌. ಬನ್ನಟ್ಟಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ  

ಕಲಬುರಗಿ 16: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ, ಯುವ ಚಿತ್ರಕಲಾವಿದ ಶಿವಪ್ರಸಾದ್ ಎಸ್‌. ಬನ್ನಟ್ಟಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಜುಲೈ 18ರಿಂದ 22ರವರೆಗೆ ನಗರದ ರಾಮ ಮಂದಿರ ಹಿಂಭಾಗದಲ್ಲಿರುವ ಬಿಸಿಲು ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.  

ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವು ಜುಲೈ 18ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಎಲ್‌. ಜಾನೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ಥೇದಾರ್, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಜಗದೀಶ್ವರಿ ಸಿ. ನಾಸಿ ಹಾಗೂ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ್ ಪಿ. ಭಾಗವಹಿಸಲಿದ್ದಾರೆ.  

ಶಿವಪ್ರಸಾದ್ ಅವರು ವಿವಿಧ ಮಾಧ್ಯಮಗಳಲ್ಲಿ ರಚಿಸಿರುವ 15ಕ್ಕೂ ಹೆಚ್ಚು ಚಿತ್ರಕಲಾಕೃತಿಗಳು ಪ್ರದರ್ಶನದಲ್ಲಿ ಇರಲಿವೆ. ಅವರ ಕಲಾಕೃತಿಗಳಲ್ಲಿ ಯುವ ಮನಸ್ಸುಗಳ ಆಲೋಚನೆಗಳು, ಪ್ರಸ್ತುತ ಸಾಮಾಜಿಕ ಬೆಳವಣಿಗೆಗಳು ಹಾಗೂ ಸಮಕಾಲೀನ ಜೀವನದ ವಿವಿಧ ಆಯಾಮಗಳನ್ನು ಒಳಗೊಂಡ ವಿಷಯಗಳನ್ನು ಅಭಿವ್ಯಕ್ತಿಸಲಾಗಿದೆ.  

ಶಿವಪ್ರಸಾದ್ ಅವರು ಹೈದರಾಬಾದ್, ಸೋಲಾಪುರ, ಬೆಂಗಳೂರು, ಗದಗ, ರಾಮನಗರ ಹಾಗೂ ಕಲಬುರಗಿ ಸೇರಿದಂತೆ ವಿವಿಧೆಡೆ ನಡೆದ 10ಕ್ಕೂ ಹೆಚ್ಚು ಚಿತ್ರ-ಶಿಲ್ಪಕಲಾ ಶಿಬಿರಗಳು ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.  

ದೃಶ್ಯ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿವಪ್ರಸಾದ್ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಬಾಂಬೆ ಆರ್ಟ್‌ ಸೊಸೈಟಿ ಪ್ರಶಸ್ತಿ, ಪುಣೆಯ ಲೋಕಮಾನ್ಯ ತಿಲಕ್ ಪ್ರಶಸ್ತಿ, ಪ್ರಫುಲ್ಲ ಧಹನುಕರ್ ಪ್ರಶಸ್ತಿ, ದೃಶ್ಯ ಬೆಳಕು ಪ್ರಶಸ್ತಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.