ಸಿತಾರ್ ನವಾಜ್ ಉಸ್ತಾದ್ ಬಾಲೆಖಾನ್

ದಕ್ಷಿಣ ಭಾರತಕ್ಕೆ ಸಿತಾರ ವಾದ್ಯ ಪರಿಚಯಿಸಿ ಪ್ರಸಿದ್ಧಿಗೊಳಿಸಿದವರೆಂದರೆ ಸಿತಾರ ರತ್ನ ಉಸ್ತಾದ ರಹಿಮತ್ಖಾನರು. ಸಿತಾರ ರತ್ನರದು ಮಹಾ ಸಂಗೀತ ಪರಂಪರೆ. ಅವರಿಗಿಂತ ಪೂರ್ವದ ಮೂರು ತಲೆಮಾರು ಮತ್ತು ಅವರ ನಂತರದ ಮೂರು ತಲೆಮಾರು ಸಂಗೀತಗಾರಾಗಿರುವರು. ಏಳು ತಲೆಮಾರು ಸಂಗೀತ ಹರಿದು ಬಂದಿರುವ ಇಂಥ ಮಹಾನ್ ಸಂಗಿತ ವೃಕ್ಷ ಇನ್ನೆಲ್ಲಿಯೂ ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಅವರ ಮನೆತನ ಪರಂಪರೆಯಲ್ಲಿ ಮಕ್ಕಳು, ಮೊಮ್ಮಕ್ಕಳಾದಿಯಾಗಿ ಸಿತಾರ ಘರಾನಾದಲ್ಲಿ ಬೆಳೆದು ಬಂದಿರುವದು ವಿಶೇಷ.

ಇಂತಹ ಉನ್ನತ ಸಂಗೀತ ಪರಂಪರೆಗೆ ಸೇರಿದ ಆರನೆಯ ತಲೆಮಾರಿನ ಸಿತಾರವಾದಕರು ಉಸ್ತಾದ ಬಾಲೆಖಾನ್. ಅವರು 1942ರ ಅಗಸ್ಟ 29ರಂದು ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಜನಿಸಿದರು. ಬಾಲೆಖಾನರ ಮೂಲ ಹೆಸರು ಬಾಬುಖಾನ್. ಅವರ ಅಜ್ಜ ರಹಿಮತ್ಖಾನ ಅವರು ಬಾಲೆ ಎಂದು ಕರೆಯುತ್ತಿದ್ದರು. ಹೀಗಾಗಿ ಮುಂದೆ ಅದೇ ಹೆಸರು ಜನಪ್ರಿಯವಾಯಿತು. ಬಾಲೆಖಾನರ ತಂದೆ ಅಬ್ದುಲ್ ಕರೀಂಖಾನ್ರು. ಬಾಲೆಖಾನರ ಏಳು ಜನ ಸೋದರರು ಸಿತಾರ ವಾದಕರಾಗಿರುವದು ವಿಶೇಷ.

ಬಾಲೇಖಾನರು ಬಾಲ್ಯದಲ್ಲಿ ಸಂಗೀತದ ಕಡೆಗೆ ಒಲವು ಹೊಂದಿದ್ದರಿಂದ, ಅವರು ಶಿಕ್ಷಣ ಕಲಿಯುವಿಕೆಯಲ್ಲಿ ಹಿಂದುಳಿದರು. ಅವರ ಕುಟುಂಬ ಧಾರವಾಡ ಮತ್ತು ಪುಣೆಗೆ ಸ್ಥಳಾಂತರಗೊಳ್ಳುತ್ತಿದ್ದರಿಂದ ಬಾಲೆಖಾನರು ಪುಣೆಯ ವೇಲನಕರ ಹಾಗೂ ಧಾರವಾಡದ ಬಾಸಲ್ ಮಿಶನ್ ಶಾಲೆಗಳಲ್ಲಿ ಓದಿದರು. ಹನ್ನೊಂದು ವರ್ಷದವರಿದ್ದಾಗಲೇ ಬಾಲೆಖಾನರು ಮಿರಜದಲ್ಲಿ ಕಿರಾಣಾ ಘರಾಣೆಯ ಸಂಸ್ಥಾಪಕ ಉಸ್ತಾದ ಅಬ್ದುಲ್ ಕರೀಂಖಾನರ ಸ್ಮರಣಾರ್ಥ ಸಂಗೀತಾರಾಧನೆಯಲ್ಲಿ 'ಮಿಯಾಕಿ ತೋಡಿ' ಯನ್ನು ಸುಶ್ರಾವ್ಯವಾಗಿ ಹಾಡಿ ಮೆಚ್ಚುಗೆ ಪಡೆದಿದ್ದರು. ಅಲ್ಲದೇ ಹದಿಮೂರನೆಯ ವಯಸ್ಸಿನಲ್ಲಿಯೇ ಬೆಳಗಾವಿಯ ಆರ್ಟ ಸರ್ಕಲ್ ಏರ್ಪಡಿಸಿದ್ದ ಸಿತಾರವಾದನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದರು. ಮಗನನ್ನ ಗಾಯಕರಾಗಿಸಬೇಕೆಂಬ ಆಸೆ ಹೊತ್ತಿದ್ದ ಪ್ರೊ. ಕರೀಂಖಾನರಿಗೆ ಬಾಲೆಖಾನರು ಸಿತಾರ ಕಡೆಗೆ ಆಕರ್ಷಿತನಾದದ್ದು ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಅವರು ಕೋಪಗೊಂಡು ಒಂದು ವರ್ಷ ಸಂಗೀತ ಪಾಠವನ್ನೇ ನಿಲ್ಲಿಸಿದರು. ಮಗನ ಹಠಕ್ಕೆ ಮಣಿದು ಪ್ರೊ. ಉಸ್ತಾದ ಅಬ್ದುಲ್ ಕರೀಮಖಾನರು ಪೂರ್ಣಾವಧಿಯ ಸಿತಾರ ಪಾಠವನ್ನು ಆರಂಭಿಸಿದರು.

ತಂದೆಯವರಿಂದ ಬಾಲೆಖಾನರ ಕಲಿಕೆ, ರಿಯಾಜ ಗಂಭೀರವಾಗಿಯೇ ಪ್ರಾರಂಭಗೊಂಡಿತು. ಅಣ್ಣ ಉಸ್ಮಾನ ಖಾನ್ ಸದಾ ಅವರ ಜೊತೆಗಿರುತ್ತಿದ್ದರು. ತಂದೆಯವರು ಬೇರೆ ಶಿಷ್ಯರಿಗೂ ಕಲಿಸುವಾಗಲೂ ಬಾಲೆಖಾನರು ಗಮನವಿಟ್ಟು ಆಲಿಸುತ್ತಿದ್ದರು. ಅವರು ತಂದೆಯವರ ಅನುಪಸ್ಥಿತಿಯಲ್ಲಿ ಸಿತಾರವಾದನವನ್ನು ಕಲಿಸತೊಡಗಿದರು. ನಿರಂತರ ಪಾಠ, ಪರಿಶ್ರಮದ ರಿಯಾಜಗಳೀಂದ ಬಾಲೆಖಾನರು ಪ್ರತಿಭಾನ್ವಿತ ಸಿತಾರವಾದಕರಾಗಿ ರೂಪಗೊಂಡರು. ನಿಧಾನಗತಿಯ ಆಲಾಪ, ಲಯಬದ್ಧ ಜೋಡ್, ರಭಸದ ಝಲಾದಲ್ಲಿ ಚರಮಗತಿ ಬಾಲೆಖಾನರ ಶೈಲಿಯ ಗುಣಗಳಾಗಿದ್ದವು.

1968ರಲ್ಲಿ ಆಕಾಶವಾಣಿಯ ಕಲಾವಿದರಾಗಿ ಮನ್ನಣೆ ಪಡೆದ ಬಾಲೆಖಾನರು ನಂತರ 1973ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ನೇಮಕಗೊಂಡರು. ಆಕಾಶವಾಣಿಯ ಧ್ವನಿಮುದ್ರಣಕ್ಕಾಗಿ ಭೇಟಿ ನೀಡುತ್ತಿದ್ದ ಹಿರಿಯ-ಕಿರಿಯ ಕಲಾವಿದರೊಂದಿಗೆ ಆತ್ಮೀಯ ಸೌಹಾರ್ದ ಸಂಬಂಧವನ್ನು ಹೊಂದಿದ್ದರು. ಅವರು ಧ್ವನಿಮುದ್ರಣದ ಮೇಲ್ವಿಚಾರಣೆಯ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಲೇ, ಹಲವು ಆಕಾಶವಾಣಿಯ ಕಾರ್ಯಕ್ರಮಗಳಿಗೆ ಸಂಗೀತ ಸಂಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಉಸ್ತಾದ ಬಾಲೆಖಾನರು ಧಾರವಾಡ ಆಕಾಶವಾಣಿಯಲ್ಲಿ 1973ರಿಂದ 2002ರವರೆಗೆ ನಿಲಯ ಕಲಾವಿದರಾಗಿದ್ದಲ್ಲದೇ, ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಎ ಗ್ರೇಡ್ ಕಲಾವಿದರಾಗಿದ್ದರು.

1970ರಲ್ಲಿ ಮುಂಬೈನ ಪಂ. ಬಾಲಕೃಷ್ಣ ಬುವಾ ಕಪಿಲೇಶ್ವರಿ ಅವರ ಸರಸ್ವತಿ ಸಂಗೀತ ವಿದ್ಯಾಲಯದ ವಾಷರ್ಿಕೋತ್ಸವ ಸಮಾರಂಭದಲ್ಲಿ ಬಾಲೆಖಾನರು ಅತಿಥಿ ಕಲಾವಿದರಾಗಿ ಪಾಲ್ಗೊಂಡು, ಸಿತಾರವಾದನವನ್ನು ನುಡಿಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಷಿಪ್ಪಿಂಗ್ ಕಾಪರ್ೋರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಶ್ರೀವಾಸ್ತವ ಅವರು ಬಾಲೆಖಾನರ ಸಿತಾರವಾದನಕ್ಕೆ ಮಾರುಹೋಗಿ, ವಿದೇಶದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಸಿದರು. ಅಲ್ಲಿಂದ ಅವರು ಕೀನ್ಯಾ, ಉಗಾಂಡಾ, ತಾಂಜಾನಿಯಾ, ಲಂಡನ್, ಮ್ಯಾಂಚೆಸ್ಟರ್ ಹಾಗೂ ಪ್ಯಾರಿಸ್ ಮುಂತಾದೆಡೆ ಸಂಗೀತ ರಸಧಾರೆ ಹರಿಸಿ ಬಂದರು. ಉಸ್ತಾದ ಬಾಲೆಖಾನರು ಅಲ್ಲಿಯ ಶೋತೃಗಳಿಂದ, ಸಂಗೀತ ವಿಮರ್ಶಕರಿಂದ ವಿವಿಧ ಪತ್ರಿಕೆಗಳಲ್ಲಿ ಪ್ರಂಶಸೆಗೆ ಒಳಪಟ್ಟರು. ಪ್ಯಾರಿಸ್ದ ಲೆಟರ್ಸ್ ಫ್ರಾಂಚೇಸ್ ಪತ್ರಿಕೆಯ ಮಾರ್ಟ್ ನ್ ಕ್ಯಾಡ್ಯೂ ಅವರು 'ಸಂಗೀತವೇ ಬಾಲೆಖಾನರ ಉಸಿರಾಗಿದೆ. ಅವರ ಸಿತಾರವಾದನದಲ್ಲಿ ಎದ್ದು ಕಾಣುವದೆಂದರೆ ಅಸಾಧಾರಣ ಸೂಕ್ಷ್ಮತೆ, ರೇಷ್ಮೆ ಬಟ್ಟೆಯ ಮೇಲೆ ಚಿತ್ರ ಬಿಡಿಸಿದಂತಹ ನಯಗಾರಿಕೆ' ಎಂದು ವಿಮರ್ಶಿಸಿದರು.

ಧಾರವಾಡದಲ್ಲಿ ನೆಲೆಸಿದ್ದರೂ ಬಾಲೆಖಾನ್ ಅವರಿಗೆ ಬೆಂಗಳೂರು ಎರಡನೆಯ ಮನೆಯಂತಿತ್ತು. ಅವರು ಕನರ್ಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮೂರು ಅವಧಿಗೆ ಸದಸ್ಯರಾಗಿದ್ದರು. ಬೆಂಗಳೂರಿನಲ್ಲಿ ಹಲವಾರು ಕಛೇರಿ ನೀಡಿ ಅಲ್ಲಿನ ಸಂಗೀತಪ್ರಿಯರ್ ಮನಸೂರೆಗೊಂಡಿದ್ದರು. ಪಹಾಡಿ, ಶಿವರಂಜನಿ, ಖಮಾಜ, ಪೀಲು, ಭೈರವಿಯಂತಹ ಲಘುರಾಗಗಳನ್ನು ವಿಸ್ತಾರವಾಗಿ ಗಂಟೆಗಟ್ಟಲೆ ಪ್ರಸ್ತುತಪಡಿಸಿರುವ ಪರಿಣಿತ ಅವರಿಗಿತ್ತು. 1970ರ ದಶಕದಿಂದ ಮೂರು ದಶಕಗಳ ಕಾಲ ಪ್ರತಿ ತಿಂಗಳು ಬೆಂಗಳೂರಿನಲ್ಲಿ ತರಗತಿ ನಡೆಸಿ ನೂರಾರು ವಿದ್ಯಾಥರ್ಿಗಳಿಗೆ ತರಬೇತಿ ನೀಡಿದ್ದರು. ಅವರ 50ನೆಯ ಜನ್ಮದಿನದ ಪ್ರಯುಕ್ತ 1992ರಲ್ಲಿ ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಸಂಭಾಂಗಣದಲ್ಲಿ ಅಪಾರ ಶಿಷ್ಯವರ್ಗ, ಸ್ನೇಹಿತರು  ಹಾಗೂ ಸಂಗೀತ ಪ್ರೇಮಿಗಳು ಅವರನ್ನು ಸನ್ಮಾನಿಸಿದರು. ಉಸ್ತಾದ ಬಾಲೆಖಾನರ ಮೆಚ್ಚಿನ ಗಾಯಕರಾಗಿದ್ದ ಪಂ. ಭೀಮಸೇನ ಜೋಶಿ ಅವರು ಸಮಾರಂಭದಲ್ಲಿ ಹಾಜರಿದ್ದು ಶುಭ ಕೋರಿದರು.

ಉಸ್ತಾದ ಬಾಲೆಖಾನರ ದೇಶದ ತುಂಬೆಲ್ಲ ಸಂಚರಿಸಿ, ತಮ್ಮ ವಿಶಿಷ್ಟ ಶೈಲಿಯ ವಾದನದಿಂದ ಶೋತೃಗಳ ಮನಸೂರೆಗೊಂಡರು. ಅವರು ಮಿರಜ, ಪುಣೆ, ಮುಂಬೈ ನಾಗ್ಪುರ, ಕೋಲ್ಕತ್ತಾ ಮುಂತಾದೆಡೆ ಸಂಗೀತ ಕಛೇರಿಗಳಲ್ಲಿ ಪ್ರದರ್ಶನ ನಿಡಿ ಸಂಗೀತಾಸಕ್ತರನ್ನು ಮಂತ್ರಿಮುಗ್ದಗೊಳಿಸಿದ್ದರು. ಭಾರತೀಯ ಸಂಗೀತ ವಿದ್ಯಾಲಯ ಮತ್ತು ಸಿತಾರ್ರತ್ನ ಸಮಿತಿಗಳ ಆಶ್ರಯದಲ್ಲಿ ಐದು ಸಂಗೀತೋತ್ಸವಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀತರ್ಿ ಅವರದು. ಸ್ವರವೇ ಈಶ್ವರ ಎಂದು ನಂಬಿದ್ದ ಅವರು ಸಂಗೀತವನ್ನು ವೃತ್ತಿಯ ಬದಲು ಸರಸ್ವತಿಯ ಆರಾಧನೆಯನ್ನಾಗಿ ಮಾಡಿಕೊಂಡವರು.

ತಂದೆಯವರು ಸ್ಥಾಪಿಸಿದ ಭಾರತೀಯ ಸಂಗೀತ ವಿದ್ಯಾಲಯವನ್ನು ಮುನ್ನಡೆಸಿಕೊಂಡು ಅತ್ಯುತ್ತಮ ಸಂಗೀತ ಶಿಕ್ಷಕರಾಗಿ ಹೆಸರುಗಳಿಸಿದವರು. ಉಸ್ತಾದ ಬಾಲೆಖಾನರು ನೂರಾರು ಶಿಷ್ಯರಿಗೆ ಯಾವ ಭೇದ ಭಾವವೂ ಇಲ್ಲದೇ ವಿದ್ಯಾದಾನ ಮಾಡಿರುವದು ಸ್ತುತ್ಯಾರ್ಹವಾದುದು. ಅವರು ಅಂದಾಜು ಮೂರು ದಶಕಗಳ ಕಾಲ ಧಾರವಾಡದಲ್ಲಿಷ್ಟೇ ಅಲ್ಲದೇ ನಿರಂತರವಾಗಿ ಪ್ರತಿ ತಿಂಗಳೂ ಎರಡನೆಯ ಶನಿವಾರ-ರವಿವಾರ ಬೆಂಗಳೂರಿಗೆ ತೆರಳಿ, ಅನೇಕ ಶಿಷ್ಯರಿಗೆ ದಣಿವರಿಯದೇ ಸಿತಾರವಾದನದ ಪಾಠಗಳನ್ನು ಮಾಡಿರುವದನ್ನು ಇಂದಿಗೂ ಅವರ ಶಿಷ್ಯರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಕರ್ನಾಟಕದಾದ್ಯಂತ 160ಕ್ಕೂ ಅಧಿಕ ಶಿಷ್ಯರನ್ನು ಉಸ್ತಾದ ಬಾಲೆಖಾನರು ಹೊಂದಿದ್ದಾರೆ. ಅವರಲ್ಲಿ ವಿ.ಜಿ.ಮಹಾಪಾತ್ರ, ಎನ್.ರಾಘವನ್, ಶ್ರೀನಿವಾಸ ಜೋಶಿ, ರಫೀಕ ನದಾಫ, ಶಫೀಕ್ ಖಾನ್, ರಫೀಕ್ಖಾನ ಮುಂತಾದವರು ಪ್ರಮುಖರಾಗಿದ್ದಾರೆ.

ಧಾರವಾಡದ ಸಿತಾರ ರತ್ನ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಯಿ ಅವರು ಉಸ್ತಾದ ಬಾಲೆಖಾನರ ಒಡನಾಟದೊಂದಿಗೆ '1980ರ ದಶಕದ ಸಮಯದಲ್ಲಿ ಧಾರವಾಡಕ್ಕೆ ಪಂ.ಗಜಾನನ ಜೋಶಿ ಬುವಾ ಅವರು ಆಗಮಿಸಿದ್ದರು. ಆಗ ಅವರು ನನ್ನನ್ನು ಕರೆದುಕೊಂಡು ಹೋಗಿ ಭೇಟಿಯಾಗಿದ್ದರು. ಪಂ. ಗಜಾನನ ಬುವಾರವರ ಜೊತೆಗಿದ್ದ ಜಿ.ಆರ್.ನಿಂಬರಗಿಯವರು ಸಂಗೀತ ಕಛೇರಿಯನ್ನು ಏರ್ಪಡಿಸಲು ವಿನಂತಿಸಿದರು. ತಕ್ಷಣವೇ ಬಾಲೇಖಾನರು ಒಪ್ಪಿಗೆ ಸೂಚಿಸಿದ್ದರು. ಹಾಗೆಯೇ ಸಮೀಪದ ಶಾಲೆಯೊಂದರಲ್ಲಿ ಸಂಗೀತ ಕಛೇರಿಯನ್ನು ಏರ್ಪಡಿಸಿ, ಸಭಿಕರಿಂದ ಎರಡು ಸಾವಿರ ಸಂಗ್ರಹದ ಹಣದೊಂದಿಗೆ ತಾವು ಎರಡು ಸಾವಿರ ರೂಪಾಯಿಗಳನ್ನು ಸೇರಿಸಿ, ಪಂ.ಗಜಾನನ ಜೋಶಿ ಬುವಾ ಅವರಿಗೆ ಕಾಣಿಕೆಯಾಗಿ ನೀಡಿದ್ದರು. ಹೀಗೆ ಕಲೆ-ಕಲಾವಿದರನ್ನು ಪೋಷಿಸುವ ನಿಟ್ಟಿನಲ್ಲಿ ಬಾಲೆಖಾನ ಒಬ್ಬ ಅತ್ಯುತ್ತಮ ಸಂಘಟಕರಾಗಿದ್ದರು' ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಪಂ. ವಿನಾಯಕ ತೊರವಿ ಅವರು ಬಾಲೆಖಾನರ ಒಡನಾಟವನ್ನು 'ಮುಸ್ಲಿಂ-ಹಿಂದೂ ಹಬ್ಬಗಳಲ್ಲಿ ನಾವು ಪರಸ್ಪರ ಭಾಗಿಯಾಗುತ್ತಾ ಬೆಳೆದೆವು. ನಮ್ಮ ಮನೆಯಲ್ಲಿ ಚಿದಂಬರ ಮಹಾಸ್ವಾಮಿಗಳ ಉತ್ಸವದಲ್ಲಿ ಎರಡೂವರೆ ತಾಸು ಮಧ್ಯರಾತ್ರಿ ತನಕ ನುಡಿಸಿದ್ದು ಇನ್ನೂ ಸ್ಮೃತಿಪಟಲದಲ್ಲಿದೆ. ಈ ಉತ್ಸವಕ್ಕೆ ಅಬ್ದುಲ್ ಕರೀಮ್ಖಾನರೂ ಬಂದು ನುಡಿಸಿದ್ದು ನಮ್ಮೆಲ್ಲರ ಪುಣ್ಯ. ಮುಂದೆ ಉಸ್ಮಾನ್ಖಾನ್ ಮತ್ತು ಬಾಲೆಖಾನ್ ಜುಗಲ್ ಬಂದಿ ಮಾಡಿದ್ದಂತೂ ಎಂದೂ ಮರೆಯದಂಥದ್ದು' ಎಂದು ನೆನಪಿಸಿಕೊಳ್ಳುತ್ತಾರೆ. ಮಿತಭಾಷಿ, ಮೃದುಭಾಷಿಯಾಗಿದ್ದ ಬಾಲೆಖಾನ್ ಅವರು ಸರಳತೆ, ಸಜ್ಜನಿಕೆ, ವಿನಯವಂತಿಕೆಗಳಿಗೆ ಹೆಸರಾದವರು. ಉಸ್ತಾದ ಬಾಲೆಖಾನರು ಹಮೀದಾ ಬೇಗಂ ಅವರನ್ನು ಮದುವೆಯಾದರು. ಅವರಿಗೆ ಐವರು ಮಕ್ಕಳು. ಪರವೀನ ಬೇಗಂ, ನಫೀಜ್ ಉನ್ನಿಸಾ, ರಯೀಸಖಾನ, ಅನೀಸ್ ಉನ್ನಿಸಾ ಮತ್ತು ಹಫೀಜ್ ಖಾನ. ಅವರ ಪುತ್ರರಾದ ಉಸ್ತಾದ ರಯೀಸಖಾನ ಮತ್ತು ಉಸ್ತಾದ ಹಫೀಜಖಾನ ಅವರು ಸಂಗೀತ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ.

ಉಸ್ತಾದ ಬಾಲೆಖಾನರ ಸಂಗೀತ ಸಾಧನೆಯನ್ನು ಮನ್ನಿಸಿ ಕರ್ನಾಟಕ ಕಲಾಶ್ರೀ, ಕನರ್ಾಟಕ ಸಕರ್ಾರದ ರಾಜೋತ್ಸವ ಪ್ರಶಸ್ತಿ, ಡಾ.ಪುಟ್ಟರಾಜ ಗವಾಯಿ ಸಮ್ಮಾನ ಪ್ರಶಸ್ತಿ-ಪುರಸ್ಕಾರಗಳು ಅವರನ್ನಲಂಕರಿಸಿವೆ. 2003ರಲ್ಲಿ ಅವರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಪ್ರೊ.ಸದಾನಂದ ಕನವಳ್ಳಿ ಅವರ ನೇತೃತ್ವದಲ್ಲಿ 'ಸಿತಾರ ನವಾಜ' ಎಂಬ ಬಿರುದು ನೀಡಿ ಗೌರವಿಸಲಾಗಿದೆ. ಅವರು 'ಕನಕ ಪುರಂದರ' ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

2007ರಲ್ಲಿ ಭಾರತೀಯ ಸಂಗೀತ ವಿದ್ಯಾಲಯದ ಅಮೃತ ಮಹೋತ್ಸವದ ಸಂಗೀತೋತ್ಸವದಲ್ಲಿ ಕಿರಿಯ ಸಹೋದರ ಛೋಟೆ ರಹಿಮತ್ಖಾನರೊಂದಿಗೆ ಉಸ್ತಾದ ಬಾಲೆಖಾನರು ನೀಡಿದ ಸಿತಾರ ಜುಗಲಬಂದಿ ಕಾರ್ಯಕ್ರಮವೇ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಯಿತು. ಅವರು ಹೃದಯಾಘಾತದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಡಿಸೆಂಬರ 2, 2007ರಂದು ಸಂಗೀತ ಲೋಕದಲ್ಲಿ ಲೀನರಾದರು. ಆದರೆ ಅವರ ಸಂಗೀತ ಪರಂಪರೆ ಎಂದೆಂದಿಗೂ ಜೀವಂತವಾಗಿದೆ.

ಉಸ್ತಾದ ಬಾಲೆಖಾನ ಅವರ ಪುತ್ರ ರಯೀಸಖಾನ ಅವರು ಪುನಾದಲ್ಲಿ 2017ರಿಂದ ಸುಹಾನಾ ಬಸಂತ ಫೌಂಡೇಶನ್ ಸ್ಥಾಪಿಸಿ, ಇನ್ನೋರ್ವ ಪುತ್ರ ಹಫೀಜ್ಖಾನ ಅವರು ಬೆಂಗಳೂರಿನಲ್ಲಿ 2009ರಿಂದ ಉಸ್ತಾದ ಬಾಲೆಖಾನ ಮೆಮೊರಿಯಲ್ ಟ್ರಸ್ಟ್ ಸ್ಥಾಪಿಸಿ, ಅವರ ನೆನಪಿನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಅಲ್ಲದೇ ಧಾರವಾಡದಲ್ಲಿ ಭಾರತೀಯ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಪ್ರತಿವರ್ಷ ಉಸ್ತಾದ ಬಾಲೆಖಾನರ ಸ್ಮರಣಾರ್ಥ ಸಂಗೀತೋತ್ಸವ ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಖ್ಯಾತ ಪಕ್ಕವಾದ್ಯ ಕಲಾವಿದರನ್ನು ಗುರುತಿಸಿ ಪಕ್ಕವಾದ್ಯ ಕಲಾವಿದ ಪ್ರಶಸ್ತಿಯನ್ನು ನೀಡಲಾಗುತ್ತ್ತಿದೆ.

-ಸುರೇಶ ಗುದಗನವರ

  ಧಾರವಾಡ