ಪ್ರತಿಯೊಬ್ಬ ಪ್ರಜೆಯಿಂದ ಸಹಿ ಸಂಗ್ರಹಿಸಿ ಸಹಿ ಅಭಿಯಾನ: ಸಂಜೀವ ಜಿನ್ನುರ

ದೇವರಹಿಪ್ಪರಗಿ 30: ಚುನಾವಣೆಗಳಲ್ಲಿ ಅತಿ ಹೆಚ್ಚು ಪ್ರತಿಶತ ಮತದಾನ ಮಾಡುತ್ತೇವೆ ಎಂದು ಪ್ರತಿಯೊಬ್ಬ ಪ್ರಜೆಯಿಂದ ಸಹಿ ಸಂಗ್ರಹಿಸಿ ಸಹಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ದೇವರ ಹಿಪ್ಪರಗಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜಿನ್ನುರ ಹೇಳಿದರು.

ತಾಲೂಕ ಪಂಚಾಯತಿಯಲ್ಲಿ ಮಂಗಳವಾರದಂದು ಹಮ್ಮಿಕೊಂಡ ಸಹಿ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕು ಪಂಚಾಯತ ಸಿಬ್ಬಂದಿ ಮತ್ತು ಗ್ರಾಮ ಪಂಚಾಯತ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹಿ ಅಭಿಯಾನದಲ್ಲಿ ಭಾಗವಹಿಸಿ ಖಂಡಿತವಾಗಿಯೂ ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುತ್ತೇವೆ ಎಂದು ಸಹಿ ಮಾಡುವುದರ ಮೂಲಕ ಖಾತ್ರಿ ಪಡಿಸುವ ಅಭಿಯಾನವೇ ಸಹಿ ಸಂಗ್ರಹ ಅಭಿಯಾನವಾಗಿದೆ ಎಂದರು. ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸುವುದು ನನ್ನ ಜವಾಬ್ದಾರಿ ಎಂದು ಅರಿತು ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು.   

ಪ್ರಾಸ್ತಾವಿಕವಾಗಿ ಸಹಾಯಕ ನಿರ್ದೇಶಕರು (ಪಂ.ರಾ) ಶಿವಾನಂದ ಮೂಲಿಮನಿ ಅವರು ಮಾತನಾಡಿ, ಪ್ರತಿಯೊಬ್ಬ ಪ್ರಜೆ  ತನ್ನ ಮತವನ್ನು ಚಲಾಯಿಸಿದಾಗ ಮಾತ್ರ ಸದೃಢ ಪ್ರಜಾಪ್ರಭುತ್ವ ನಿರ್ಮಾಣವಾಗುತ್ತದೆ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ತಮ್ಮ ಅಮೂಲ್ಯ ಮತವನ್ನು ಸಮಾಜದ ಒಳಿತಿಗಾಗಿ ಶ್ರಮಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿಕೊಂಡರು.   

ಇದೇ ಸಂದರ್ಭದಲ್ಲಿ ತಾಲೂಕಾ ಲೆಕ್ಕಾಧಿಕಾರಿ ಮಹೇಶ್ ಬಗಲಿ, ಐ.ಇ.ಸಿ ಸಂಯೋಜಕ ಸಿದ್ದು ಕಾಂಬಳೆ, ತಾಲೂಕ ಎಂ.ಐ.ಎಸ್ ಸಂಯೋಜಕ ಆದಣ್ಣ ಹೊಸಮನಿ,  ವಿಷಯ ನಿರ್ವಾಹಕ ಜಿ.ಎಸ್‌.ರೋಡಗಿ, ಗಣಕಯಂತ್ರ ನಿರ್ವಾಹಕ ಕಿರಣ ಪಾಟೀಲ, ಆಡಳಿತ ಸಹಾಯಕ ಭೀಮರಾಯ ಭಾವಿಕಟ್ಟಿ, ಪಿಡಿಓ ಗಳಾದ ಎಂ.ಎನ್‌.ಕತ್ತಿ, ಶಿವಾನಂದ ಹಡಪದ, ಶಿವಯೋಗಿ ಹೊಸಮನಿ, ಭಾರತಿ ಮನಗೂಳಿ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.