ಹೊಲಿಗೆ ಯಂತ್ರ ವಿತರಣಾ ಸಮಾರಂಭ

ಹಾನಗಲ್:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯಡಿ ದೊರಕಲಿರುವ ಮೊದಲ ಕಂತಿನ- 2 ಸಾವಿರ ಹಣವನ್ನು ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಬಾಕಿ ಪಾವತಿಸಲು ನೀಡುವುದಾಗಿ ಇಲ್ಲಿ ಮಹಿಳೆಯರು ಪ್ರತಿಜ್ಞೆ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ.

ವಿರಕ್ತಮಠದ ಆವರಣದಲ್ಲಿರುವ ಸದಾಶಿವ ಮಂಗಲ ಭವನದಲ್ಲಿ ಶಾಸಕ ಶ್ರೀನಿವಾಸ ಮಾನೆಅವರು ಆಯೋಜಿಸಿದ್ದ ಹೊಲಿಗೆ ಯಂತ್ರ ವಿತರಣಾ ಸಮಾರಂಭದಲ್ಲಿ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ- 2 ಸಾವಿರಹಣವನ್ನು ಪುರಸಭೆ ಅಥವಾ ಗ್ರಾಮಪಂಚಾಯಿತಿಯಲ್ಲಿ ಬಾಕಿ ಇರುವ ತಮ್ಮ ಆಸ್ತಿ ತೆರಿಗೆ ಪಾವತಿಸಲು ನೀಡುವುದಾಗಿ ನೆರೆದ ನೂರಾರು ಸಂಖ್ಯೆಯ ಮಹಿಳೆಯರು ಪ್ರತಿಜ್ಞೆ ಸ್ವೀಕರಿಸಿದ್ದು, ಗಮನ ಸೆಳೆಯಿತು. ಅಲ್ಲದೇ ಮಹಿಳೆಯರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಯಿತು.

ತಾಲೂಕಿನಲ್ಲಿ ಹಾನಗಲ್ ಪುರಸಭೆ ಸೇರಿದಂತೆಎಲ್ಲ 42 ಗ್ರಾಪಂಗಳಲ್ಲಿ ಆಸ್ತಿ ತೆರಿಗೆ ಬರೋಬ್ಬರಿ- 20 ಕೋಟಿಗೂ ಅಧಿಕ ಬಾಕಿ ಉಳಿದಿರುವುದರಿಂದ ಮೂಲಭೂತ ಸೌಲಭ್ಯ ಕಲ್ಪಿಸುವುದು ಸವಾಲಿನಿಂದ ಕೂಡಿದೆ. ಹೀಗಾಗಿ ಪ್ರತಿಯೊಬ್ಬರೂ ಬಾಕಿ ಇರುವ ಆಸ್ತಿ ತೆರಿಗೆ ಭರಿಸಿ ಸ್ಥಳೀಯ ಸಂಸ್ಥೆಗಳಿಗೆ ಬಲ ತುಂಬುವಂತೆ ಶಾಸಕ ಶ್ರೀನಿವಾಸ ಮಾನೆಅವರು ನೀಡಿರುವ ಕರೆಗೆ ಮಹಿಳೆಯರು ಸ್ಪಂದಿಸಿದ್ದಾರೆ.

**ಪ್ರತಿ ಗ್ರಾಪಂನಲ್ಲಿ ಲಕ್ಷಾಂತರ ರೂ. ಆಸ್ತಿ ತೆರಿಗೆ ಬಾಕಿ ಇದೆ. ಪಂಚಾಯಿತಿಗಳು - 40 ಕೋಟಿ ಬೀದಿ ದೀಪಗಳ ವಿದ್ಯುತ್ ಬಿಲ್ ಬಾಕಿ ಭರಿಸಬೇಕಿದೆ. ಪ್ರತಿಯೊಬ್ಬರೂ ಆಸ್ತಿ ತೆರಿಗೆ ತಪ್ಪದೇ ಪಾವತಿಸಿದರೆ ಅನುಕೂಲವಾಗಿದ್ದು, ಈ ನಿಟ್ಟಿನಲ್ಲಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಮೊದಲ ಕಂತನ್ನು ಆಸ್ತಿತೆರಿಗೆ ಬಾಕಿ ಪಾವತಿಗೆ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.

- ಶಾಸಕ ಶ್ರೀನಿವಾಸ ಮಾನೆ