ಹಾವೇರಿ 20 : ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರ ಏಕ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ-2025ಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಕ್ಷೆ ಕಾರ್ಯವನ್ನು ಮೇ 28ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ತಿಳಿಸಿದ್ದಾರೆ.
ಮೇ 25ರವರೆಗೆ ಮನೆ ಮನೆ ಭೇಟಿ: ಸಮೀಕ್ಷಾದಾರರಿಂದ ಮನೆ ಮನೆ ಭೇಟಿ ಸಮೀಕ್ಷೆ ಮೇ 25 ರವರೆಗೆ ವಿಸ್ತರಿಸಲಾಗಿದೆ.
ಮೇ 26 ರಿಂದ 28ರವರೆಗೆ ವಿಶೇಷ ಶಿಬಿರ: ಮನೆ ಮನೆಯ ಭೇಟಿ ಸಂದರ್ಭದಲ್ಲಿ ತಮ್ಮ ಮಾಹಿತಿ ಒದಗಿಸದೇ ಇದ್ದಲ್ಲಿ ಮೇ 26, 27 ಹಾಗೂ 28 ರಂದು ವಿಶೇಷ ಶಿಬಿರಗಳಲ್ಲಿ ಮಾಹಿತಿ ನೀಡಲು ಅವಕಾಶವಿದೆ. ನಿಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ತಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್‌ನೊಂದಿಗೆ ಮಾಹಿತಿ ನೀಡಬೇಕು.
ಮೇ 28ರವರೆಗೆ ಆನ್‌ಲೈನ್ ಸಮೀಕ್ಷೆ:ಮನೆ ಮನೆಯ ಭೇಟಿ ಸಂದರ್ಭದಲ್ಲಿ ತಮ್ಮ ಮಾಹಿತಿ ನೀಡದವರು ನೇರವಾಗಿ ಆನ್‌ನ್‌ಲೈನ್ https://schedulecastesurvey.karnataka.gov.in/ selfdeclaration ಮೂಲಕ ಸ್ವಯಂ ಘೋಷಣೆಗೆ ಮೇ 19 ರಿಂದ ಮೇ 28ರವರೆಗೆ ಅವಧಿ ವಿಸ್ತರಿಸಲಾಗಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣೆಗೆ ಆಧಾರ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರದ ಆರ್.ಡಿ. ನಂಬರ್ ಅವಶ್ಯವಾಗಿದೆ.
ಸಮೀಕ್ಷೆಗೆ ಸಹಕರಿಸಿ, ನಿಖರವಾದ ಮಾಹಿತಿ ನೀಡಬೇಕು ಹಾಗೂ ನ್ಯಾಯಯುತ ಮೀಸಲಾತಿ ಹಂಚಿಕೆಗಾಗಿ ಸಮೀಕ್ಷಾದಾರರಿಗೆ ಪರಿಶಿಷ್ಟ ಜಾತಿಗೆ ಸೇರಿದವರು ತಮ್ಮ ಮೂಲ ಜಾತಿ, ಶಿಕ್ಷಣ, ವರಮಾನ, ಉದ್ಯೋಗ ಮತ್ತು ಇನ್ನತರ ನಿಖರ ಮಾಹಿತಿ ನೀಡಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಆಂತರಿಕ ಮೀಸಲಾತಿಯ ಬೇಡಿಕೆ ಪರಿಹರಿಸಲು ಸರ್ಕಾರ ಕೈಗೊಂಡ ಒಂದು ಮಹತ್ವಾಕಾಂಕ್ಷಿ ಹಾಗೂ ದಿಟ್ಟ ಹೆಜ್ಜೆಯಾಗಿದೆ. ನಿಮ್ಮ ಮುಂದಿನ ಪೀಳಿಗೆ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗದಿರಲಿ.
ನಿಮ್ಮ ಜಾತಿ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂದ್ರ ಎಂದು ಇದ್ದಲ್ಲಿ ಮೂಲ ಜಾತಿಯನ್ನು ಒದಗಿಸಬೇಕು ಹಾಗೂ ಸಹಾಯವಾಣಿ 9481359000 ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.