ಶಿಕ್ಷಣದಿಂದಲೇ ಶೋಷಿತರ ಬಾಳು ಬೆಳಗಾಗುವುದು : ಕಾಂತಾ ನಾಯಕ ಅಭಿಮತ
ವಿಜಯಪುರ,ಜ.03 : ಶಿಕ್ಷಣದಿಂದಲೇ ಶೋಷಿತರ ಬಾಳು ಬೆಳಗಾಗುವುದು ಎಂದು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮನಗಂಡು ತಮ್ಮ ಇಡೀ ಜೀವನವೇ ಶೋಷಿತರ ಬಾಳನ್ನು ಬೆಳಕಾಗಿಸಲು ಶ್ರಮಿಸಿದರು ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯಕ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮ ಜಯಂತಿ ಪ್ರಯುಕ್ತ ರಾಜ್ಯ ಮಟ್ಟದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಏನ ಬೇಕಾದರೂ ಸಾಧಿಸಬಹುದು ಎಂದು ಸಾವಿತ್ರಿಬಾಯಿ ಫುಲೆ ಅವರ ತೋರಿಸಿಕೊಟ್ಟಿದ್ದಾರೆ. ಅವರು ಭೋಧಿಸಿದ ಒಂದೊಂದು ಅಕ್ಷರಗಳು ಇವತ್ತು ಶೋಷಿತರ ಬಾಳನ್ನು ಬೆಳೆಗಾಗಿಸಿದೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂದು ಹೇಳುತ್ತಾರೆ, ಆದ್ರೆ ಸಾವಿತ್ರಿಬಾಯಿ ಫುಲೆ ಅವರಿಗೆ ಅಕ್ಷರ ಜ್ಞಾನ ನೀಡಿ, ಅವರನ್ನು ಭಾರತ ಪ್ರಥಮ ಶಿಕ್ಷಕಿಯನ್ನಾಗಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ಕೊಡುಗೆಯೂ ಸಾವಿತ್ರಿಬಾಯಿ ಫುಲೆ ಅವರ ಹೋರಾಟದ ಜೀವನದೊಳಗೆ ಅಪಾರವಾದದ್ದು, ನಾವು ಅವರ ಜನ್ಮ ಜಯಂತಿಯಂದು ಮಾತ್ರ ನೆನೆಯದೇ ಪ್ರತಿ ದಿನವೂ ನೆನೆದು ಅವರ ಹೇಳಿ ಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ, ಆಗಲೇ ಶೋಷಿತ ಸಮುದಾಯಗಳ ಬಾಳಲಿ ಬೆಳಕು ಮೂಡುಬಹದು ಎಂದು ಕಾಂತಾ ನಾಯಕರು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡುತ್ತ, ಜ್ಯೋತಿಬಾ ಫುಲೆ ಅವರು ತಮ್ಮ ಮೇಲ್ಜಾತಿಯ ಸ್ನೇಹಿತನ ಮದುವೆ ಹೋದಾಗ, ಮದುವೆ ಬಂದಿದ್ದ ಮೇಲ್ಜಾತಿಯ ಜನರಿಂದ ಅಪಮಾನಕ್ಕೆ ಒಳಗಾಗುತ್ತಾರೆ. ರಾತ್ರಿಯಿಡೀ ಈ ಬಗ್ಗೆ ವಿಚಾರ ಮಾಡಿ, ಶೋಷಿತ ಸಮುದಾಯದವರು ಸ್ವಾಭಿಮಾನದಿಂದ ಬದುಕು ಬೇಕೆಂದರೆ ಅವರಿಗೆ ಶಿಕ್ಷಣವೆಂಬ ಅಸ್ತ್ರ ಅವರಿಗೆ ನೀಡಬೇಕು, ಆಗಲೇ ಈ ಜಾತಿ ಪದ್ಧತಿ, ಅನ್ಯಾಯ ಮತ್ತು ಗುಲಾಮಗಿರಿ ಹೋಗುತ್ತದೆ ಎಂದು ಮನಗಂಡು ಮುಂದೆ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರಿಗೆ ಅಕ್ಷರ ಜ್ಞಾನ ನೀಡುತ್ತಾರೆ. ಮುಂದೆ ಸಾವಿತ್ರಿಬಾಯಿ ಫುಲೆ ಅವರ ಟೀಚರ್ ತರಬೇತಿ ಪಡೆದು, ಭಾರತ ಪ್ರಥಮ ಶಿಕ್ಷಕಿಯಾಗುತ್ತಾರೆ ಮತ್ತು ಅವರ ಸೇವೆ ಗುರುತಿಸಿ ಅವರಿಗೆ ಅಂದಿನ ಬ್ರಿಟಿಷ್ ಸರ್ಕಾರ ಅವರಿಗೆ "ಭಾರತದ ಪ್ರಥಮ ಶಿಕ್ಷಕಿ" ಎಂಬ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಇದು ನಮ್ಮಗೆಲ ಹೆಮ್ಮೆ ವಿಚಾರ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ತಮ್ಮ ಮನೆಯನ್ನು ಬಿಟ್ಟು ಹೊರ ಬಂದು ಫುಲೆ ದಂಪತಿಗಳು ಶಾಲೆಯನ್ನು ತೆರೆದು ಶಿಕ್ಷಣ ನೀಡದಿದ್ದರೆ ಹೆಣ್ಣು ಮಕ್ಕಳ ಮತ್ತು ಶೋಷಿತರ ಸ್ಥಿತಿ ಗಂಭೀರವಾಗಿರುತ್ತಿತ್ತು. ಅದೇ ರೀತಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೆಣ್ಣು ಮಕ್ಕಳಿಗೆ ಹಕ್ಕುಗಳನ್ನು ದೊರಕಿಸಿಕೊಡಲು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದನ್ನು ನಾವು ಮರೆಯಬಾರದು. ಫುಲೆ ದಂಪತಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿ ಬರುತ್ತಿರಲಿಲ್ಲ ಎಂದರೆ ಬಡವರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗುತ್ತಿರಲಿಲ್ಲ. ಇವತ್ತು ನಮ್ಮಗೆ ನಮ್ಮ ಮಹಾಪುರುಷರು ಹೋರಾಡಿ ಶಿಕ್ಷಣ ನೀಡಿದ್ದಾರೆ, ಇದರ ಸದುಪಯೋಗ ಪಡೆದುಕೊಂಡು ನಾವು ಉನ್ನತ ಸ್ಥಾನಕ್ಕೆ ಹೋಗಿ, ನಮ್ಮ ಮಹಾಪುರುಷರು ಕಂಡ ಕನಸನ್ನು ನನಸು ಮಾಡಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ, ದಲಿತ ವಿದ್ಯಾರ್ಥಿ ಪರಿಷತ್ ಎರಡು ದಶಕಗಳಿಂದ ಕೆಲ ಏಳು ಬೀಳುಗಳನ್ನು ಕಂಡು ನಾಡಿನ ಶೋಷಿತ ಸಮುದಾಯಗಳ ವಿದ್ಯಾರ್ಥಿ ಯುವಜನರ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುತ್ತ ಬರುತ್ತಿದೆ, ಫುಲೆ ದಂಪತಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿದ ಮಾರ್ಗದಲ್ಲಿ ಸಾಗುತ್ತಿದೆ. ನಮಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾರ್ಗವೇ ಅಂತಿಮ ಮಾರ್ಗವಾಗಿದೆ. ಸತತ ಹನ್ನೆರಡು ವರ್ಷಗಳಿಂದ ರಾಜ್ಯಮಟ್ಟದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ಜಯಂತಿಯಂದು ಅವರನ್ನು ಅರ್ಥಪೂರ್ಣವಾಗಿ ನೆನೆಯುತ್ತ, ಅವರ ಹೆಸರಿನಲ್ಲಿ ನಾಡಿನ ಮಹಿಳಾ ಸಾಧಕಿಯರಿಗೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ, ಈ ಕಾರ್ಯವೂ ಇದೇ ರೀತಿ ಮುಂದುವರಿಯಲಿದೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಫಾದರ್ ಟಿಯೋಲ ಮೆಚಡೊ ರವರು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಟಿ. ಎಸ್. ಕೋಲಾರ ರವರು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪುಂಡಲೀಕ ಮಾನವರ ರವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದದ ಸದಸ್ಯರಾದ ದಾಕ್ಷಾಯಿಣಿ ಹುಡೇದ ರವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ರೈತ ನಾಯಕರಾದ ಸಂಗಮೇಶ ಸಗರ, ಶಿಕ್ಷಕ ಶಮ್ಮಶರಲಿ ಮುಲ್ಲಾ ಹಾಗೂ ಹೋರಾಟಗಾರ ಜೈ ಭೀಮ್ ಮುತ್ತಿಗೆ ರವರು ನಿರೂಪಣೆ ಮಾಡಿದರು. ಡಾ.ಬಾಬಾ ಸಾಹೇಬ ಅಂಬೇಡ್ಕರ್ ರಾತ್ರಿ ಶಾಲೆ ಸಿರುಗುಪ್ಪ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಂವಿಧಾನ ಪೀಠಕೆ ಓದುವ ಮೂಲಕ ಮತ್ತು ಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶೈಕ್ಷಣಿಕ, ಸಾಮಾಜಿಕ, ಹೋರಾಟದ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಾಧಕಿಯರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಪರಿಷತ್ ನ ರಾಜ್ಯ ಸಂಚಾಲಕರಾದ ಬಾಲಾಜಿ ಕಾಂಬಳೆ, ರಾಜ್ಯ ಸಂಪರ್ಕ ಕಾರ್ಯದರ್ಶಿ ಅಜೀತ್ ಮಾದರ, ಜಿಲ್ಲಾ ಸಂಚಾಲಕರಾದ ಅಕ್ಷಯ್ ಕುಮಾರ್ ಅಜಮನಿ, ಸಂದೀಪ ಕಾಂಟೆ, ಮೌನೇಶ ಜಾಲವಾಡಗಿ, ನಂದಕುಮಾರ್ ಕರಡೆ, ಬಸವರಾಜ ಗಂಗೂರು, ಜಗದೇವ ಕುಂಬಾರ, ಲಕ್ಷ್ಮಣ ಭಂಡಾರಿ, ಹಣಮಂತ ದಾಸರ್, ದುರ್ಗಾ ಎಚ್, ಹಣುಮೇಶ್, ಆದರ್ಶ ಗಸ್ತಿ, ಮುಖಂಡರಾದ ಮಹಾದೇವ ಚಲವಾದಿ, ಮುತ್ತು ಚಲವಾದಿ, ಶಿಲ್ಪಾ ವಾಲ್ಮೀಕಿ, ಗುರುಪ್ರಸಾದ್, ಕಾಶೀನಾಥ್ ಬೇಕಿನಾಳ ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ತಾಲೋಕ ಸಂಚಾಲಕರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಯುವಜನರು ಸಮಾರಂಭದಲ್ಲಿ ಭಾಗವಹಿಸಿದ್ದರು.