ಸಂಕ್ರಾಂತಿ: ಗಾಳಿಪಟ ತಯಾರಿಕೆ, ಹಾರಿಸುವ ಸ್ಪರ್ಧೆ

ಸಂಕೇಶ್ವರ 16: ವಾಟ್ಸಪ್ ಮತ್ತು ಫೇಸಬುಕ್ ಯುಗದಲ್ಲಿ ಮೊಬೈಲ್‌ನಲ್ಲಿಯೇ ಸಮಯ ಕಳೆಯುವ ಇಂದಿನ ಯುವ ಜನಾಂಗದವರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಗ್ರಾಮೀಣ ಸೊಗಡಿನ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಮತ್ತು ಕ್ರಿಯಾಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗಾಳಿಪಟ ತಯಾರಿಕೆ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ಇಲ್ಲಿಯ ಸಂಕೇಶ್ವರ ಭಾಗ್ಯನಗರ ಲೇಓಟನಲ್ಲಿ ಆಯೋಜಿಸಲಾಗಿತ್ತು.   

ಯಮಕನಮರಡಿ ಕ್ಷೇತ್ರದ ಯುವನಾಯಕ ಕಿರಣ ರಜಪೂತ ಸಿಂಗ ಇವರು ಮಾತನಾಡುತ್ತ ತಾಲೂಕಿನ 150 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಈ ಗ್ರಾಮೀಣ ಕ್ರೀಡೆಗೆ ಮುನ್ನಡೆ ಬರೆದಿದ್ದಾರೆ ಎಂದು ಹೇಳಿದರು.  

ಕ್ಷೇತ್ರದ ಶಾಸಕ ಹಾಗೂ ಸಚಿವ ಸತೀಶ ಲಕ್ಷ್ಮಣರಾವ ಜಾರಕಿಹೊಳಿ ಇವರು ಸಹ ಈ ಸ್ಪರ್ಧೆಗೆ ಶುಭ ಹಾರೈಸಿದ್ದಾರೆಂದು ಅವರು ತಿಳಿಸಿದರು. ಗಾಳಿಪಟ ತಯಾರಿಕೆ ಮತ್ತು ಹಾರಿಸುವ ಸ್ಪರ್ಧಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.  ಈ ಗಾಳಿಪಟ ಸ್ಪರ್ಧೆಯು ರಾಜ್ಯದಲ್ಲಿ ಮಾದರಿಯಾಗಲೆಂದು ಪವನ ಕಣಗಲಿ ಸ್ಪೋರ್ಟ್ಸ ಮತ್ತು ಸೋಶಿಯಲ್ ಫೌಂಡೇಶನ್‌ನ ಮುಖ್ಯ ಪ್ರವರ್ತಕ ಪವನ ಕಣಗಲಿ ಇವರು ಶುಭಕೋರಿದರು.   

ಇನ್ನೋರ್ವ ಅತಿಥಿ ಸಂಕೇಶ್ವರದ ವಕೀಲರ ಸಂಘದ ಬಾರ್ ಅಸೋಶಿಯೇಶನ್ ಅಧ್ಯಕ್ಷ ನ್ಯಾಯವಾದಿ ಎನ್ ಬಿ ಬಾರಿಗಿಡದ ಇವರು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಜೊತೆಗೆ ವಿದ್ಯಾವಂತರಾಗಿ ಸತ್ಪ್ರಜೆಗಳಾಗಬೇಕೆಂದು ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಹೇಳಿದರು.   

ಪವನ ಕಣಗಲಿ ಸ್ಪೋರ್ಟ್ಸ ಮತ್ತು ಸೋಶಿಯಲ್ ಫೌಂಡೇಶನ್ ಪ್ರಾಯೋಕತ್ವದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ಹುಕ್ಕೇರಿ ತಾಲೂಕಾ ಮಟ್ಟದ ಗಾಳಿಪಟ ತಯಾರಿಕೆ ಮತ್ತು ಹಾರಿಸುವ ಸ್ಪರ್ಧೆಯನ್ನು ಸಂಕೇಶ್ವರದ ಭಾಗ್ಯನಗರ ಲೇಓಟನಲ್ಲಿ ಆಯೋಜಿಸಲಾಗಿತ್ತು.   

ಈ ಸ್ಪರ್ಧೆಗೆ ಹುಕ್ಕೇರಿ ತಾಲೂಕಿನಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿವುದರಿಂದ ಮುಂದಿನ ವರ್ಷ ಯಮಕನಮರಡಿಯಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಎಲ್ಲ ತಾಲೂಕುಗಳ 12ನೇ ತರಗತಿಯವರೆಗೆ ಓದುತ್ತಿರುವ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಗಾಳಿಪಟ ತಯಾರಿಕೆ ಮತ್ತು ಹಾರಿಸುವ ಸ್ಪರ್ಧೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಈಗಿನ ಎಲ್ಲ ಬಹುಮಾನಗಳು ಎರಡರಷ್ಟು ಹೆಚ್ಚಾಗಲಿವೆ ಎಂದು ಕೂಡ ಪವನ ಕಣಗಲಿ ಇವರು ತಿಳಿಸಿದರು. 

ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಆರ್ಯನ್ ವಡ್ಡರ ಮತ್ತು ಹರೀಶ ವಡ್ಡರ ಇವರು ಪ್ರಥಮಸ್ಥಾನ ಗಳಿಸಿ 7001 ರೂಪಾಯಿಗಳ ಪ್ರಥಮ ಬಹುಮಾನ ಪ್ರಮಾಣ ಪತ್ರ ಮತ್ತು ಟ್ರೋಫಿಯನ್ನು ಗಳಿಸಿದರು.  ಸೀಮಾ ಮರಡಿ ಮತ್ತು ರೇಣುಕಾ ವಾರಕರಿ ಇವರು ದ್ವೀತಿಯಸ್ಥಾನ ಗಳಿಸಿ 5001 ರೂಪಾಯಿಗಳ ದ್ವಿತೀಯ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಪಡೆದರು.  ಅಬ್ದುಲ್ ಅಜೀಮ ಬಿಜಾಪೂರೆ ಮತ್ತು ಜುಬೇರ್ ಬಿಜಾಪೂರೆ ಇವರು ತೃತೀಯಸ್ಥಾನ ಗಳಿಸಿ 3001 ರೂಪಾಯಿಗಳ ತೃತೀಯ ಬಹುಮಾನವನ್ನು ಗಳಿಸಿದರು ಹಾಗೂ ಆಕಾಶ ಪೂಜೇರ್‌-ರಿಯಾಲ್ ಪಟೇಲ್ ಮತ್ತು ಸಂತೋಷ ಪಾಟೀಲ್‌-ರಮೇಶ ಮುಗಳಿ ಮತ್ತು ಸುಹಾನಿ ಬಡಿಗೇರ್ ಇವರು 1001 ರೂಪಾಯಿಗಳ ಸಮಾಧಾನಕರ ಬಹುಮಾನಗಳನ್ನು ಗಳಿಸಿದರು.    

ಗಾಳಿಪಟ ತಯಾರಿಕೆ ಸ್ಪರ್ಧೆಯಲ್ಲಿ ಸಂಗೀತಾ ಕಲ್ಲಪ್ಪ ಗರಬುಡೆ ಪ್ರಥಮಸ್ಥಾನ ಪಡೆದು 5001 ರೂಪಾಯಿಗಳ ಪ್ರಥಮ ಬಹುಮಾನ, ಸೃಷ್ಠಿ ಸೋಮನಾಥ ಹಿಡದುಗ್ಗಿ ದ್ವಿತೀಯ ಸ್ಥಾನ ಗಳಿಸಿ 3001 ರೂಪಾಯಿಗಳ ದ್ವಿತೀಯ ಬಹುಮಾನ ಹಾಗೂ ಶ್ರೀನಿವಾಸ ಮಹೇಶ ಪೂಜಾರ ಇವರು ತೃತೀಯಸ್ಥಾನ ಪಡೆದು 2001 ರೂಪಾಯಿಗಳ ತೃತೀಯ ಬಹುಮಾನ ಪಡೆದರು.  ಶ್ರೇಯಾ ಸಂತೋಷ ಮಡಿವಾಳರ ಮತ್ತು ಪೂಜಾ ದುಂಡಪ್ಪಾ ರೂಪಾಳೆ ಇವರು 1001 ರೂಪಾಯಿಗಳ ಸಮಾಧಾನಕರ ಬಹುಮಾನಗಳನ್ನು ಗಳಿಸಿದರು.   

 ಸಮಾರಂಭದಲ್ಲಿ ಹುಕ್ಕೇರಿಯ ಅಬ್ದುಲ್ ಮಕಾನದಾರ, ಚನ್ನಪ್ಪ ಚೌಗುಲಾ, ಪ್ರಸನ್ನ ಮಿಶ್ರಕೋಟಿ, ಪ್ರಿಯಾಂಕಾ ಗಡಕರಿ ಮೊದಲಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಅಲ್ಲಪ್ಪ ಮಿರ್ಜಿ ನಿರೂಪಣೆಯನ್ನು ಮಾಡಿದರು.  

ಸ್ಪರ್ಧೆಯ ಆಯೋಜನೆಯ ರೂವಾರಿ ಪವನ ಕಣಗಲಿ ಮತ್ತು ಅವರು ಪತ್ರಕರ್ತ ಬಳಗದ ಸ್ನೇಹಿತರಾದ ಶಶಿಕಾಂತ ಮಾಳಿ ತಂಡದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.