ಕಂಬಳಿ ಹೊತ್ತು ಸಂಯುಕ್ತಾ ಪಾಟೀಲ ನಾಮಪತ್ರ ಸಲ್ಲಿಕೆ

ಬಾದಾಮಿ ಬನಶಂಕರಿ ದೇವರಿಗೆ ವಿಶೇಷ ಪೂಜೆ ಽ ಹೆಬ್ಬಳ್ಳಿ ಅಜ್ಜನ ಆಶೀರ್ವಾದ ಪಡೆದು 

ಬಾಗಲಕೋಟೆ 15:  ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಸೋಮವಾರ ಸರಳವಾಗಿ ನಾಮಪತ್ರ ಸಲ್ಲಿಸಿದ್ದು, ಮತ್ತೊಮ್ಮೆ ಬೃಹತ್ ರಾ​‍್ಯಲಿ ನಡೆಸುವ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. 

ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಬಾದಾಮಿಯ ಬನಶಂಕರಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹೆಬ್ಬಳ್ಳಿ ಗ್ರಾಮದ ದೊಡ್ಡ ಲಾಲಸಾಬ್ ಅಜ್ಜನವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ತದನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಅವರಿಗೆ ನಾಮಪತ್ರ ಸಲ್ಲಿಸಿದರು.  

ನಾಮಪತ್ರ ಸಲ್ಲಿಸುವ ವೇಳೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ ಮತ್ತು ಎಂ.ಬಿ. ಸೌದಾಗಾರ್ ಇದ್ದರು. ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಹಲವಾರು ಮುಖಂಡರು ಹಾಜರಿದ್ದು, ಸಂಯುಕ್ತ ಪಾಟೀಲ ಅವರಿಗೆ ಶುಭ ಕೋರಿ, ಚುನಾವಣೆಯಲ್ಲಿ ಭಾರಿ ಅಂತರದ ಜಯ ಲಭಿಸಲಿ ಎಂದು ಹಾರೈಸಿದರು. 

ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಸಂಯುಕ್ತ ಪಾಟೀಲ ಅವರಿಗೆ ಕಂಬಳಿ ಹೊದಿಸಿ ಶುಭ ಕೋರಲಾಯಿತು. ಸಂಯುಕ್ತ ಪಾಟೀಲ ಅವರೊಂದಿಗೆ ಇದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಗಮನಿಸಿರುವ ಮತದಾರರು  ನಿಶ್ಚಿತವಾಗಿ ಸಂಯುಕ್ತ ಪಾಟೀಲ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು. 

ಸತತವಾಗಿ 20 ವರ್ಷ ಸಂಸತ್ ಸದಸ್ಯರಾಗಿರುವ ಪಿ.ಸಿ. ಗದ್ದಿಗೌಡರ್ ಬಾಗಲಕೋಟೆ ಅಭಿವೃದ್ಧಿಗೆ ಪ್ರಯತ್ನ ಮಾಡಲಿಲ್ಲ. ಕುಡಚಿ ಬಾಗಲಕೋಟೆ ರೈಲ್ವೆ ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ. ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಯಾವುದೇ ಉದ್ಯಮವನ್ನು ಜಿಲ್ಲೆಗೆ ತರಲು ಪ್ರಯತ್ನ ಮಾಡಲಿಲ್ಲ ಎಂದು ಟೀಕೆ ಮಾಡಿದರು. ಜಿಲ್ಲೆಯಲ್ಲಿ ಐತಿಹಾಸಿಕ ಪ್ರವಾಸಿ ತಾಣಗಳಿವೆ. ಕೇಂದ್ರದ ಅನುದಾನ ತಂದು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಗದ್ದಿಗೌಡರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲ ಎಂದರು. 

ಪಿ.ಸಿ.ಗದ್ದಿಗೌಡರು ಸಂಸದರಾಗಿ 20 ವರ್ಷಗಳಲ್ಲಿ ಬಾಗಲಕೋಟ ಜಿಲ್ಲೆಗೆ ಏನು ಮಾಡಿದ್ದೇನೆ ಎಂದು ಹೇಳಲಿ. ನಂತರ ಅವರು ಏನನ್ನು ಮಾಡಿಲ್ಲ ಎಂಬುದನ್ನು ನಾವು ಹೇಳುತ್ತೇವೆ. 

-ಎಸ್‌.ಜಿ.ನಂಜಯ್ಯನಮಠ,

ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ  

ಬಾಗಲಕೋಟೆ ಮತಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಎರಡನೇ ದಿನವಾದ ಸೋಮವಾರದಂದು ಒಟ್ಟು ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೇಸ್ ಪಕ್ಷದಿಂದ ಸಂಯುಕ್ತ ಪಾಟೀಲ, ಉತ್ತಮ ಪ್ರಜಾಕೀಯ ಪಕ್ಷದಿಂದ ಅಂತೋಷ ಸವ್ವಾಸೆ ಹಾಗೂ ಸೋಷಲಿಸ್ಟ್‌ ಯುನಿಟ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ) ಪಕ್ಷದಿಂದ ಮಪ್ಪಲ್ಲ ತಳವಾರ ನಾಮಪತ್ರ ಸಲ್ಲಿಸಿದ್ದಾರೆ. ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 6 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.