ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಲಕ - ಬಾಲಕಿಯರ ಹಾಸ್ಟೆಲ್ ಮಂಜೂರು ಮಾಡುವಂತೆ ಎಸ್‌ಎಫ್‌ಐ ಮನವಿ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಲಕ - ಬಾಲಕಿಯರ ಹಾಸ್ಟೆಲ್ ಮಂಜೂರು ಮಾಡುವಂತೆ ಎಸ್‌ಎಫ್‌ಐ ಮನವಿ  SFI requests sanction of boys' and girls' hostels for the convenience of students

                                                  ಹಾವೇರಿ ವಿಶ್ವವಿದ್ಯಾಲಯದಲ್ಲಿ ಸರ್ಕಾರಿ ವಸತಿ ನಿಲಯಕ್ಕೆ ಆಗ್ರಹ  

ಹಾವೇರಿ, ಆ.5: ಹಾವೇರಿ ವಿಶ್ವವಿದ್ಯಾಲಯ ಆವರಣದಲ್ಲಿ ಸರ್ಕಾರಿ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ವಿಶ್ವವಿದ್ಯಾಲಯ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪ ಅವರಿಗೆ ಮನವಿ ಸಲ್ಲಿಸಿದರು.  

ಮನವಿಯಲ್ಲಿ, ಗ್ರಾಮೀಣ ಪ್ರದೇಶಗಳಿಂದ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳು ಸಾರಿಗೆ ಹಾಗೂ ವಸತಿ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ವಿಶ್ವವಿದ್ಯಾಲಯವು ನಗರದಿಂದ ಸುಮಾರು 8 ರಿಂದ 10 ಕಿ.ಮೀ. ದೂರದಲ್ಲಿದ್ದು, ಸಮರ​‍್ಕ ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ.  

ಪ್ರಸ್ತುತ ಬಾಲಕಿಯರಿಗೆ ಸೀಮಿತ ವಸತಿ ವ್ಯವಸ್ಥೆ ಇದ್ದರೂ, ಬಾಲಕರಿಗೆ ಸರ್ಕಾರಿ ಹಾಸ್ಟೆಲ್ ಸೌಲಭ್ಯ ಇಲ್ಲ. ಖಾಸಗಿ ವಸತಿ ನಿಲಯಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಎಸ್‌ಎಫ್‌ಐ ತಿಳಿಸಿದೆ.  

2023ರಿಂದ 2026ರವರೆಗೆ ವಿಶ್ವವಿದ್ಯಾಲಯದಲ್ಲಿ ಒಟ್ಟು 715 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ 242 ಬಾಲಕರು ಹಾಗೂ 473 ಬಾಲಕಿಯರು ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವತಿಯಿಂದ ಸರ್ಕಾರಿ ವಸತಿ ನಿಲಯಗಳನ್ನು ಆರಂಭಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.  

ಸಮಾಜ ಕಲ್ಯಾಣ ಇಲಾಖೆಯ ನಿಯಮಾವಳಿಯ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗೂ ವಸತಿ ಸೌಲಭ್ಯ ಒದಗಿಸಬೇಕಾದರೂ, ಜಿಲ್ಲೆಯಲ್ಲಿ ಈ ನಿಯಮ ಸಮರ​‍್ಕವಾಗಿ ಜಾರಿಯಾಗಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ವಿಶ್ವವಿದ್ಯಾಲಯ ಆರಂಭವಾಗಿ ಮೂರು ವರ್ಷ ಕಳೆದರೂ ವಿದ್ಯಾರ್ಥಿಗಳ ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ವಿಷಾದನೀಯ ಎಂದು ಎಸ್‌ಎಫ್‌ಐ ತಿಳಿಸಿದೆ.  

ಮನವಿ ಸ್ವೀಕರಿಸಿದ ಉಪನಿರ್ದೇಶಕರು ಸಂಬಂಧಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಘಟನೆ ಒತ್ತಾಯಿಸಿತು.  ಈ ಸಂದರ್ಭದಲ್ಲಿ ಎಸ್‌ಎಫ್‌ಐ ಘಟಕದ ಅಧ್ಯಕ್ಷೆ ಪೂಜಾ ಬಾಕಿ, ಕಾರ್ಯದರ್ಶಿ ಶಂಭುಲಿಂಗ ಸವದತ್ತಿ, ಉಪಾಧ್ಯಕ್ಷ ಪರಶುರಾಮ, ಬಸವರಾಜ ಎಸ್‌., ಕಾಂತೇಶ್ ಹಳ್ಳೇರ, ಸಹ ಕಾರ್ಯದರ್ಶಿ ಪ್ರವೀಣ್ ಮಟ್ಟೇರ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಂಚಾಲಕ ಅರುಣ್ ನಾಗವತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.