ಮಕ್ಕಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಪ್ರಮುಖ: ನಾಗರಾಳ

ಬಸವನ ಬಾಗೇವಾಡಿ 08: ಶಾಲಾ ಮಕ್ಕಳಲ್ಲಿ ಭಾವೈಕ್ಯತೆ ಭಾವದ ವಿಶಿಷ್ಟ ಗುಣ ಮೂಡಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಬಸವನ ಬಾಗೇವಾಡಿ ತಾಲೂಕು ದೈಹಿಕ ಶಿಕ್ಷಣ ವಿಷಯದ ಪರೀವೀಕ್ಷಕ ಜಿ.ವೈ.ನಾಗರಾಳ ಅಭಿಪ್ರಾಯಿಸಿದರು. 

ಸಮೀಪದ ಬಿಸನಾಳ ಗ್ರಾಮದ ಶ್ರೀ ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಬಸವನ ಬಾಗೇವಾಡಿ ತಾಲ್ಲೂಕಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ ಹಾಗು ರಾಷ್ಟ್ರಗೀತೆ ಮಹತ್ವದ ಕುರಿತಾಗಿ ಆಯೋಜಿಸಿದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶೃಧ್ಧಾಭಕ್ತಿಯಿಂದ ರಾಷ್ಟ್ರೀಯ ಭಾವನೆ ನಮ್ಮಲ್ಲಿ ಮೂಡಬೇಕು. ರಾಷ್ಟ್ರೀಯ ಎಂಬ ಹಬ್ಬದ ಅರಿವಿನಗೊಸ್ಕರ ನಡೆಯುವ ಇಂಥ ಎಷ್ಟೋ ತರಬೇತಿ ಸಂಯೋಜಿಸಿದರು ಕಡಿಮೆ. ಆ ದಿಸೆಯಲ್ಲಿ ದೈಹಿಕ ಶಿಕ್ಷಕರು ತಮ್ಮ ಪಾಲಿನ ಕೆಲಸ, ಕಾರ್ಯ ಅರಿತು ನಿಷ್ಟೆ ಯಿಂದ ಕರ್ತವ್ಯ ನಿರ್ವಹಿಸಲು ಮುಂದಾಗಬೇಕು ಎಂದರು.  

ಪ್ರತಿಯೊಬ್ಬರೂ ಸ್ವಾರ್ಥ ಭಾವನೆಯಿಂದ ಹೊರಬಂದು ನಾವೆಲ್ಲ ಒಂದು ಎಂಬ ಒಗ್ಗಟ್ಟಿನ ಭಾವನೆ ಹೊಂದಬೇಕು. ದೇಶದ ಅಖಂಡತೆ,ಸಂಸ್ಕೃತಿ,ಪರಂಪರೆ ಎತ್ತಿ ಹಿಡಿಯುವಲ್ಲಿ ಮುಂದಾಗಬೇಕು. ದೇಶಭಕ್ತಿ,ತ್ಯಾಗ ಮನೋಭಾವ ಜಾಗೃತವಾದಾಗ ಏಕತೆಭಾವ ಗಟ್ಟಿಗೊಳ್ಳಲು ಸಾಧ್ಯ. ಮಾನಸಿಕ, ಸಾಮಾಜಿಕ, ಬೌದ್ಧಿಕ ಯೋಗಕ್ಷೇಮದ ಅನುಭವ ಭಾವೈಕ್ಯತೆಯಿಂದ ನಾವೆಲ್ಲ ಪಡೆಯಬಹುದೆಂದರು. 

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ , ರಾಷ್ಟ್ರಗೀತೆ, ನಾಡಗೀತೆ, ಸಮೂಹಿಕ ಕವಾಯತ ತಾಲೂಕಿನಾದ್ಯಂತ ಎಲ್ಲ ಶಾಲೆಗಳಲ್ಲಿ ಒಂದೇ ತೆರನಾದ ಧಾಟಿಯಲ್ಲಿ ಮೊಳಗಬೇಕು. ಶಾರೀರಿಕವಾಗಿ ಮಕ್ಕಳನ್ನು ಸದೃಢ ಆರೋಗ್ಯವಂತರನ್ನಾಗಿ ಬೆಳೆಸಬೇಕು.ನಮ್ಮೆಲ್ಲರ ಪ್ರಗತಿಪರ ಬೆಳವಣಿಗೆಗೆ ಭಾವೈಕ್ಯತೆ ಭಾವದ ಅಗತ್ಯತೆ ಇದೆ ಎಂದರು. 

ಮುದ್ದೇಬಿಹಾಳ ತಾಲ್ಲೂಕಿನ ದೈಹಿಕ ಶಿಕ್ಷಣಾಧಿಕಾರಿ ಆರ್‌.ಆರ್‌.ಚವ್ಹಾಣ, ಮಕ್ಕಳನ್ನು ಸುಸಂಸ್ಕೃತರನ್ನಾಗಿ   ರೂಪಿಸುವಲ್ಲಿ ದೈಹಿಕ ಶಿಕ್ಷಕರ ಹೊಣೆಗಾರಿಕೆ ಮಹತ್ವದಾಗಿದೆ.ಒಂದೇ ರಾಷ್ಟ್ರ ನಮ್ಮ ಹೆಮ್ಮೆಯ ರಾಷ್ಟ್ರ ಎಂಬ ಪರಿಕಲ್ಪನೆಯ ಭಾವನೆ ವಿದ್ಯಾರ್ಥಿ ಸಮೂಹದಲ್ಲಿ ಮೊಳಬೇಕು. ಸಾಮರಸ್ಯ,,ಏಕತೆ,ಒಗ್ಗಟ್ಟು, ಸಹಬಾಳ್ವೆ ಮೂಡಿಸುವ ಗುಣಧರ್ಮವೇ ರಾಷ್ಟ್ರೀಯ ಭಾವೈಕ್ಯತೆ. ಬಹುಭಾಷಿಕ,ಬಹು ಸಂಸ್ಕೃತಿಯ ನಮ್ಮ ದೇಶದಲ್ಲಿ ಈ ಭಾವಗಳು ಮಕ್ಕಳಲ್ಲಿ ಪ್ರಫುಲವಾಗಿ ಅರಳಬೇಕು ಎಂದರು. 

ಮುಖ್ಯ ಶಿಕ್ಷಕ ಎ.ಕೆ.ಚಳ್ಳಗಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ.ಸದಸ್ಯರಾದ ಚನ್ನುಗೌಡ ಬಿರಾದಾರ, ಎಲ್‌.ಎಸ್‌. ಬೆಟಕನಕೆರೆ, ಸಂಗಮೇಶ ಮಮದಾಪುರ, ಹಣಮಂತ ಪೂಜಾರ, ಶಿವಾನಂದ ಬಿಸನಾಳ,ಸಿಆರ್ ಪಿ ಎಚ್‌.ಎಸ್‌. ಡೋಮನಾಳ, ವಿಶ್ರಾಂತ ಮುಖ್ಯ ಗುರು ವೈ.ಎಂ. ಮಠ ಮತ್ತಿತರರಿದ್ದರು.  

ಸಂಪನ್ಮೂಲ ವ್ಯಕ್ತಿಯಾಗಿದ್ದ ನಾಗೇಶ ಡೋಣೂರ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ, ಧ್ವಜಗೀತೆಗಳನ್ನು ನಿಯಮಬದ್ದ, ಲಯಬದ್ಧವಾಗಿ  ವಾದ್ಯಗಳೊಂದಿಗೆ ಸುಶ್ರಾವ್ಯವಾಗಿ ಹಾಡಿದರು. ವಿದ್ಯಾರ್ಥಿಗಳಿಗೆ ಸರಳೀಕೃತ ಕಲಿಸುವ ವಿದಾನ ಮಾರ್ಮಿಕವಾಗಿ ಇದೇ ಸಂದರ್ಭದಲ್ಲಿ ತಿಳಿಸಿಕೊಟ್ಟರು.ವಿವಿಧ ಶಾಲೆಗಳಿಂದ ನೂರಾರು ಶಿಕ್ಷಕ ಬಳಗ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಅವರಿಗೆಲ್ಲ ಊಟೋಪಚಾರದ ವ್ಯವಸ್ಥೆ ಅಚ್ಚುಕಟ್ಟಾಗಿ ಅತಿಥೇಯ ಶಾಲೆಯ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ತಳವಾರ ಒದಗಿಸಿದ್ದು ವಿಶೇಷವಾಗಿತ್ತು.