ಚಿಕ್ಕೋಡಿ 08: ತಾಲೂಕಿನ ಅಂಕಲಿ-ನಸಲಾಪುರ ರಸ್ತೆಯಿಂದ ಕೋರೆ, ಪಿಂಜಾರ, ಹಿರೇಕುರಬರ ತೋಟಗಳ ಮೂಲಕ ಕಾಡಾಪೂರ ಸೀಮೆ ವರೆಗೆ ರೂ. 2.50 ಕೋಟಿ ವೆಚ್ಚದ ಮಹತ್ವದ ರಸ್ತೆ ನಿರ್ಮಾಣ ಕಾಮಗಾರಿಗೆ ಅಂಕಲಿ ಹಾಗೂ ಕಾಡಾಪುರ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಭೂಮಿ ಪೂಜೆ ನೆರವೇರಿಸಿ ಅಂಕಲಿ ಗ್ರಾಮದ ಮುಖಂಡ ಸುರೇಶ ಕೋರೆ ಮಾತನಾಡಿ ಈ ಯೋಜನೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಮತ್ತು ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಅವರ ಅವಿರತ ಪ್ರಯತ್ನದಿಂದ ಅನುಮೋದನೆ ದೊರಕಿದ್ದು, ಈ ರಸ್ತೆ ಸುಧಾರಣೆಯಿಂದ ಅಂಕಲಿ ಹಾಗೂ ಕಾಡಾಪೂರ ಗ್ರಾಮದ ಸ್ಥಳೀಯ ನಾಗರಿಕರಿಗೆ ಸುಲಭ ಸಂಚಾರ ಸೌಲಭ್ಯ ಒದಗುವುದರ ಜೊತೆಗೆ, ಕೃಷಿ, ವ್ಯಾಪಾರ ಹಾಗೂ ಗ್ರಾಮೀಣ ಆರ್ಥಿಕತೆಗೆ ನೂತನ ಚೈತನ್ಯ ನೀಡಲಿದೆ ಎಂದು ಹೇಳಿದರು.
ಅಂಕಲಿ ಗ್ರಾಮದ ಮುಖಂಡ ರಂಜೀತ ಶಿರಸೇಟ ಅವರು ಮಾತನಾಡಿ ನಮ್ಮ ನಾಯಕ ಪ್ರಕಾಶ ಹುಕ್ಕೇರಿ ಮತ್ತು ಗಣೇಶ ಹುಕ್ಕೇರಿ ಅವರ ದೀರ್ಘದೃಷ್ಟಿಯಿಂದ ಅಂಕಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮಂಜೂರಾಗಿವೆ. ವಾರ್ಡ್ ನಂ. 1, 2 ಹಾಗೂ 3 ರಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ರೂ. 1.40 ಕೋಟಿ, ಗ್ರಾಮ ಪರಿಮಿತಿಯಲ್ಲಿ ರಸ್ತೆ ಡಾಂಬರೀಕರಣ ಮತ್ತು ಚರಂಡಿ ನಿರ್ಮಾಣಕ್ಕೆ ರೂ. 50 ಲಕ್ಷ, ಹಾಗೂ ಸಿದ್ದಾಪುರವಾಡಿ ಗ್ರಾಮ ವ್ಯಾಪ್ತಿಗೆ ರೂ. 50 ಲಕ್ಷ ಅನುದಾನ ಮಂಜೂರಾಗಿ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ. ಗ್ರಾಮಸ್ಥರ ಪರವಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಕಾಡಾಪುರ ಗ್ರಾಮದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಕಾಶ ರಾಚನ್ನವರ ಅವರು ಮಾತನಾಡಿ ಪ್ರಕಾಶ ಹುಕ್ಕೇರಿ ಮತ್ತು ಗಣೇಶ ಹುಕ್ಕೇರಿ ಅವರು ಸದಾ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಭೂಮಿಪೂಜೆ ನೆರವೇರಿದ ಈ ರಸ್ತೆ ಯೋಜನೆ ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದನೆಯಾಗಿದೆ. ಈಗಾಗಲೇ ಕಾಡಾಪೂರ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ರೂ. 4.61 ಕೋಟಿ ಅನುದಾನ ಮಂಜೂರಾಗಿ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಸಂಭಾಜಿ ಪವಾರ, ಅಪ್ಪು ಸನದಿ, ಪಾಂಡು ವಡ್ಡರ, ಭಾರತ ಕೋಳೇಕರ, ಪಾಪು ಕಿಳ್ಳಿಕತ, ಶಿವಾಜಿ ಶಿಂದೆ, ವಿಕ್ರಮ ಶಿರಸೆಟ್, ರವಿ ತುಬಾಕೆ, ಅಶೋಕ ತುಬಾಕೆ, ಶಿವಾಜಿ ಕೋಟಿವಾಲೆ, ಕುಮಾರ ಬಬನಾಳೆ, ಪ್ರಮೋದ ಬಡಿಗೇರ, ಸಿದ್ದಾ ನರೋಟೆ ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.