ಜಮಖಂಡಿ ಮತಕ್ಷೇತ್ರದ ಮತದಾರರ ಪರಿಷ್ಕರಣೆ ಪಟ್ಟಿ ಪ್ರಕಟ

ಜಮಖಂಡಿ ಮತಕ್ಷೇತ್ರದ ಮತದಾರರ ಪರಿಷ್ಕರಣೆ ಪಟ್ಟಿ ಪ್ರಕಟ Revised voters' list for Jamkhandi constituency published



ಲೋಕದರ್ಶನ ವರದಿ 

ಜಮಖಂಡಿ 26: ಜಮಖಂಡಿ ಮತಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆಯ ಬಳಿಕ ಒಟ್ಟು 2,30,006 ಮತದಾರರ ಪೈಕಿ 36,739 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಅಂತಿಮ ಪಟ್ಟಿಯಲ್ಲಿ 1,93,267 ಮತದಾರರು ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ, ಎಸಿ ಶ್ವೇತಾ ಬೀಡಿಕರ ತಿಳಿಸಿದರು. 

ನಗರದ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೈರು ಉಳಿದ 2,533, ಸ್ಥಳಾಂತರಗೊಂಡ 24,276, ನಿಧನರಾದ 7,542, ಡುಪ್ಲಿಕೇಟ್ ಮತದಾರರು 2,244 ಹಾಗೂ ಇತರೆ ಕಾರಣಗಳಿಂದ 142 ಸೇರಿದಂತೆ ಒಟ್ಟು 36,739 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು. 

ಅಂತಿಮ ಪಟ್ಟಿಯಲ್ಲಿ 96,586 ಪುರುಷ, 96,673 ಮಹಿಳೆ ಹಾಗೂ 8 ಇತರೆ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ 1200 ಕ್ಕಿಂತ ಹೆಚ್ಚು ಮತದಾರರು ಒಂದೇ ಮತಗಟ್ಟೆಯಲ್ಲಿ ಇರಬಾರದು ಎಂಬ ನಿಯಮದಂತೆ ಮತಗಟ್ಟೆಗಳನ್ನು ಮರುವಿಂಗಡಿಸಲಾಗಿದ್ದು, 21 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಮತಗಟ್ಟೆಗಳ ಸಂಖ್ಯೆ 232ರಿಂದ 253ಕ್ಕೆ ಏರಿಕೆಯಾಗಿದೆ ಎಂದರು. 

ಮ್ಯಾಚಿಂಗ್ ಆಗದ ಹಾಗೂ ಮ್ಯಾಪಿಂಗ್ ಆಗದೆ ಇರುವ 1,822 ಮತದಾರರಿಗೆ ನೋಟಿಸ್ ನೀಡಲಾಗುವುದು. ಅವರು ಸೂಚಿಸಲಾದ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿದರೆ ಮತದಾರರ ಪಟ್ಟಿಗೆ ಸೇರಿಸಲಾಗುವುದು ಎಂದರು. 

ಮತದಾರರ ಪಟ್ಟಿಯ ಪರೀಶೀಲನೆ ಹಾಗೂ ವಿಚಾರಣೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸಲು ತಹಶೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರನ್ನು ಒಳಗೊಂಡಂತೆ ಪ್ರತ್ಯೇಕ ನಾಲ್ವರು ಅಧಿಕಾರಿಗಳನ್ನು ನೇಮಿಸಲಾಗಿದೆ.

ಇವರ ನೇತೃತ್ವದಲ್ಲಿ ನಗರ, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಚಾರಣೆ ನಡೆಸಿ, ಅರ್ಹತೆ ಹಾಗೂ ದಾಖಲೆಗಳ ಆಧಾರದ ಮೇಲೆ ಮತದಾರರ ಪಟ್ಟಿಗೆ ಸೇರೆ​‍್ಡ ಮಾಡಲಾಗುವುದು. ಅಕ್ಟೋಬರ್ 27 ಅಂತಿಮ ದಿನಾಂಕವಾಗಿದ್ದು, ಅಷ್ಟರೊಳಗೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ ಅನೀಲ ಬಡಿಗೇರ, ಶಿರಸ್ತೇದಾರ ಶಶಿಧರ ಛಲವಾದಿ ಇದ್ದರು.