ಶಿಕ್ಷಕರ ಶ್ರಮಕ್ಕೆ ಗೌರವ, ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ: ಎಸ್‌.ವಿ. ಸಂಕನೂರ

ಶಿಕ್ಷಕರ ಶ್ರಮಕ್ಕೆ ಗೌರವ, ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ: ಎಸ್‌.ವಿ. ಸಂಕನೂರ  Respect for teachers' efforts, priority for educational quality: S.V. Sankanur


ಗದಗ, ಸೆ.5 (ಕರ್ನಾಟಕ ವಾರ್ತೆ): ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಸಮಯ ಮೀಸಲಿಡಬೇಕು. ಬೋಧನಾ ಕಾರ್ಯಕ್ಕೆ ಆದ್ಯತೆ ನೀಡುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಎಸ್‌.ವಿ. ಸಂಕನೂರ ಹೇಳಿದರು.  

ನಗರದ ಡಾ. ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಸರಾಸರಿ ಫಲಿತಾಂಶ ಶೇ.93ರಷ್ಟಿದ್ದರೆ, ಗದಗ ಜಿಲ್ಲೆ ಶೇ.94ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದ ಸರಾಸರಿಯನ್ನು ಮೀರಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಜಿಲ್ಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರಂತರ ಪರಿಶ್ರಮವೇ ಕಾರಣ ಎಂದು ಸಂಕನೂರ ಶ್ಲಾಘಿಸಿದರು.  

ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಶಾಲಾ ಸಮಯಕ್ಕೂ ಮುನ್ನ ಮತ್ತು ನಂತರ ಪರಿಹಾರ ಬೋಧನೆ, ಪರೀಕ್ಷಾ ಸಿದ್ಧತೆ ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶ್ರಮಿಸಿದ ಶಿಕ್ಷಕರ ಸೇವೆಯನ್ನು ಅವರು ಪ್ರಶಂಸಿಸಿದರು.  

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ, ಜ್ಞಾನ, ಸರಳತೆ ಹಾಗೂ ನಿರಂತರ ಕಲಿಕೆಯ ಮನೋಭಾವ ಪ್ರತಿಯೊಬ್ಬ ಶಿಕ್ಷಕರಿಗೂ ಪ್ರೇರಣೆಯಾಗಬೇಕು. ಉಪನ್ಯಾಸಕರಾಗಿ ಸೇವೆ ಆರಂಭಿಸಿ ವಿಶ್ವವಿದ್ಯಾಲಯದ ಕುಲಪತಿ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿ ಹುದ್ದೆಗೇರಿದ ಅವರ ಆದರ್ಶಗಳನ್ನು ಶಿಕ್ಷಕರು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.