ಆಲಮಟ್ಟಿ ಜಲಾಶಯದಲ್ಲಿ 524.256 ಮೀ. ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ

ಆಲಮಟ್ಟಿ ಜಲಾಶಯದಲ್ಲಿ 524.256 ಮೀ. ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ Request to take action to store 524.256 m. of water in Almatti Reservoir

ವಿಜಯಪುರ 21 : ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ, ವಿಜಯಪುರ ವತಿಯಿಂದ ಇಂದು ಬೆಳಗಾವಿಯಲ್ಲಿ ನಿಯೋಗದ ಮೂಲಕ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಆಲಮಟ್ಟಿ ಅಣೆಕಟ್ಟಿನ ನೀರು ಸಂಗ್ರಹ ಮತ್ತು ಬಳಕೆಗೆ ಸಂಬಂಧಿಸಿದ ಮಹತ್ವದ ಮನವಿಯನ್ನು ಸಲ್ಲಿಸಲಾಯಿತು. ಕೃಷ್ಣಾ ನದಿ ತಟದ ಲಕ್ಷಾಂತರ ರೈತರು ಹಾಗೂ ಜನರ ಬದುಕಿಗೆ ಆಲಮಟ್ಟಿ ಆಣೆಕಟ್ಟು ಜೀವನಾಡಿಯಾಗಿದೆ. ಈ ಭಾಗದ ನೀರಾವರಿ, ಕುಡಿಯುವ ನೀರು ಮತ್ತು ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್ ನೀರಿನ ಸಂಗ್ರಹಣೆ  ಅವಶ್ಯಕತೆ ಇರುತ್ತದೆ.

524.256 ಮೀಟರನ್ನು ನೀರು ತಡೆಹಿಡಿಯಲು ನೆರೆಯ ರಾಜ್ಯಗಳಿಂದ ಆಗುತ್ತಿರುವ ಕಾನೂನಿನಾತ್ಮಕ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ವಿನಂತಿಸಲಾಯಿತು. ನೀರು ಸಂಗ್ರಹಣೆ ಹಾಗೂ ಸಮರ​‍್ಕ ಬಳಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.ಇದಕ್ಕೆ ಸ್ಕರಾತ್ಮಕವಾಗಿ ಸ್ಪಂದಿಸಿದ ಸಚಿವರು "ಕಾನೂನಿನ ತೊಡಕಿನ ಬಗ್ಗೆ ನಾನು ತಾಂತ್ರಿಕ ಹಾಗೂ ಕಾನೂನು ತಜ್ಞರ ಮತ್ತು ಕೇಂದ್ರ ನೀರಾವರಿ ಕಾರ್ಯದರ್ಶಿಗಳ  ಮಾಹಿತಿ  ಪಡೆದುಕೊಂಡು ಶಕ್ತಿಮೀರಿ ನಾನು ಈ ವಿಷಯದಲ್ಲಿ ಪ್ರಯತ್ನ ಮಾಡುತ್ತೇನೆ" ಎಂದು ನುಡಿದರು. 

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನಿಯೋಗದ ಸದಸ್ಯರ ಜೊತೆ ಮಾತನಾಡುತ್ತ "ಕಾನೂನು ತಜ್ಞರ ಜೊತೆ ನಾನು ಚರ್ಚೆ ಮಾಡುವೆ. ನನ್ನ ಮಟ್ಟದಲ್ಲಿ ಇತ್ಯರ್ಥ ಆಗುತ್ತಿದ್ದರೆ  ಬಹಳ ಒಳ್ಳೆಯದು, ಒಂದು ವೇಳೆ ಈ ವಿಷಯವಾಗಿ ತಮ್ಮೆಲ್ಲರನ್ನು ಬರಮಾಡಿಕೊಂಡು ವಿಷಯ ಚರ್ಚೆ ಮಾಡಿ ಕೃಷ್ಣಾ ಕೊಳ್ಳದ ಭಾಗಕ್ಕೆ ನ್ಯಾಯ ದೊರಕಿಸಲು ನಿಮ್ಮ ಜೊತೆಗೆ ನಾನಿದ್ದೇನೆ" ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಲೋಕಸಭಾ ಸಂಸದರುಗಳಾದ ಗೋವಿಂದ ಕಾರಜೋಳ, ಪಿ.ಸಿ. ಗದ್ಧಿಗೌಡರ, ರಮೇಶ ಜಿಗಜಿಣಗಿ ಸೇರಿದಂತೆ ಹಲವು ಮುಖಂಡರುಗಳಿಗೆ ನಿಯೋಗದ ಮೂಲಕ ಭೇಟಿ ಮಾಡಲಾಯಿತು. ಉತ್ತರ ಕರ್ನಾಟಕದ ಜನರ ಹಕ್ಕಿನ ನೀರಿಗಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ. ರಾಜಕೀಯ ಭೇದಗಳನ್ನು ಮೀರಿ ಎಲ್ಲ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಈ ಭಾಗದ ನ್ಯಾಯಸಮ್ಮತ ಬೇಡಿಕೆಗೆ ಸ್ಪಂದಿಸಬೇಕು.

ಕೃಷ್ಣಾ ನದಿ ನೀರಿನ ಹಕ್ಕು, ರೈತರ ಬದುಕು ಮತ್ತು ಪ್ರದೇಶದ ಅಭಿವೃದ್ಧಿಗಾಗಿ ನಮ್ಮ ಹೋರಾಟ ಮತ್ತಷ್ಟು ಬಲಗೊಳ್ಳಲಿದೆ.ಈ ಸಂದರ್ಭದಲ್ಲಿ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ಸದಸ್ಯರಾದ ಜಮಖಂಡಿಯ ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ರಾಜೇಂದ್ರ ಪೊದ್ದಾರ, ಪಂಚಪ್ಪ ಕಲಬುರ್ಗಿ, ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಬಿ.ಭಗವಾನ್ ರೆಡ್ಡಿ, ಎಸ್‌.ವಿ. ಪಾಟೀಲ್, ಸುರೇಶ ಬಿಜಾಪುರ, ಭೋಗೇಶ ಸೋಲಾಪುರ, ಗುರುರಾಜ ಪಡಶೆಟ್ಟಿ ಸೇರಿದಂತೆ ಹಲವರು  ಉಪಸ್ಥಿತರಿದ್ದರು.