ಪಾಲಿಕೆ ವ್ಯಾಪ್ತಿಯ ಅರ್ಹ ಪತ್ರಕರ್ತರಿಗೆ ಆರೋಗ್ಯ ವಿಮೆ ಸೌಲಭ್ಯ ಮುಂದುವರಿಸಲು ಮನವಿ
Request to continue health insurance benefits for eligible journalists within the corporation's juri
ಬೆಳಗಾವಿ 15: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುದ್ರಣ ಮಾಧ್ಯಮದ ಪತ್ರಕರ್ತರಿಗೆ ಹಲವು ವರ್ಷಗಳಿಂದ ನೀಡಲಾಗುತ್ತಿರುವ ಆರೋಗ್ಯ ವಿಮೆ ಸೌಲಭ್ಯವನ್ನು ಪ್ರಸಕ್ತ ವರ್ಷವೂ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಸಬೇಕು ಎಂದು ಬೆಳಗಾವಿ ಮುದ್ರಣ ಮಾಧ್ಯಮ ಸಂಘವು ಮಹಾನಗರ ಪಾಲಿಕೆ ಆಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಪತ್ರಕರ್ತರ ಆರೋಗ್ಯ ಮತ್ತು ಅವರ ಕುಟುಂಬದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಗಿರುವ ಆರೋಗ್ಯ ವಿಮೆ ಯೋಜನೆ ಅತ್ಯಂತ ಜನಪರ ಹಾಗೂ ಮಾದರಿ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯು ಪತ್ರಕರ್ತರ ಕಲ್ಯಾಣದ ದೃಷ್ಟಿಯಿಂದ ಆರೋಗ್ಯ ವಿಮೆ ಸೌಲಭ್ಯವನ್ನು ನಿರಂತರವಾಗಿ ಒದಗಿಸುತ್ತಿದ್ದು, ಈ ಯೋಜನೆಯಿಂದ ಅನೇಕ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರು ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ಪಡೆದು ಪ್ರಯೋಜನ ಹೊಂದಿದ್ದಾರೆ. ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಹಗಲಿರುಳು ಶ್ರಮಿಸುವ ಪತ್ರಕರ್ತರಿಗೆ ಈ ಯೋಜನೆ ಮಹತ್ವದ ಭದ್ರತೆಯಾಗಿ ಪರಿಣಮಿಸಿದೆ ಎಂದು ಸಂಘ ತಿಳಿಸಿದೆ.
ಈ ಯೋಜನೆ ಯಶಸ್ವಿಯಾಗಿ ಮುಂದುವರಿಯಲು ಸಹಕರಿಸಿದ ಸಚಿವರು, ಸ್ಥಳೀಯ ಶಾಸಕರು, ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್, ನಗರಸೇವಕರು ಹಾಗೂ ಪಾಲಿಕೆ ಆಯುಕ್ತರಿಗೆ ಸಂಘವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.
ಪ್ರಸಕ್ತ ವರ್ಷದ ಆರೋಗ್ಯ ವಿಮೆಯ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಅದನ್ನು ನವೀಕರಿಸುವ ಪ್ರಕ್ರಿಯೆಯನ್ನು ಮಹಾನಗರ ಪಾಲಿಕೆ ಆರಂಭಿಸಿರುವುದು ಪತ್ರಕರ್ತ ಸಮುದಾಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಆದರೆ, ವಿಮೆ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ನೈಜವಾಗಿ ಕಾರ್ಯನಿರ್ವಹಿಸುತ್ತಿರುವ ಮುದ್ರಣ ಮಾಧ್ಯಮದ ವರದಿಗಾರರ ಹೆಸರುಗಳನ್ನು ಸಮಗ್ರವಾಗಿ ಪರೀಶೀಲಿಸಿ, ವಾಸ್ತವವಾಗಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಅರ್ಹ ಪತ್ರಕರ್ತರನ್ನು ಮಾತ್ರ ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕು. ಅನರ್ಹರು ಯೋಜನೆಯ ಪ್ರಯೋಜನ ಪಡೆಯದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಅರ್ಹ ಪತ್ರಕರ್ತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪತ್ರಕರ್ತರು ಸಮಾಜ ಮತ್ತು ಆಡಳಿತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಹಾಗೂ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸೇವಾ ಮನೋಭಾವದಿಂದ ದುಡಿಯುವ ಪತ್ರಕರ್ತರ ಆರೋಗ್ಯ ರಕ್ಷಣೆ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದ್ದು, ಆರೋಗ್ಯ ವಿಮೆ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕೆಂದು ಸಂಘ ಮನವಿ ಮಾಡಿದೆ.
ಪತ್ರಕರ್ತರ ಆರೋಗ್ಯ ಮತ್ತು ಅವರ ಕುಟುಂಬಗಳ ಹಿತದೃಷ್ಟಿಯಿಂದ ಈ ಮನವಿಯನ್ನು ಮಹಾನಗರ ಪಾಲಿಕೆ ಸಕಾರಾತ್ಮಕವಾಗಿ ಪರಿಗಣಿಸಿ, ಪ್ರಸಕ್ತ ಸಾಲಿನ ಆರೋಗ್ಯ ವಿಮೆ ಯೋಜನೆಯನ್ನು ಶೀಘ್ರದಲ್ಲೇ ನವೀಕರಿಸಿ, ಅರ್ಹ ಪತ್ರಕರ್ತರಿಗೆ ಯಾವುದೇ ವಿಳಂಬವಿಲ್ಲದೆ ಸೌಲಭ್ಯ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುದ್ರಣ ಮಾಧ್ಯಮ ಸಂಘ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮುದ್ರಣ ಮಾಧ್ಯಮ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಪತ್ರಕರ್ತರ ಹಿತಾಸಕ್ತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮಹಾನಗರ ಪಾಲಿಕೆ ಆಡಳಿತದ ಗಮನ ಸೆಳೆದರು.
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು 