ಕರ್ನಾಟಕ ರಜಪೂತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂಗೆ ಮನವಿ

ಕರ್ನಾಟಕ ರಜಪೂತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂಗೆ ಮನವಿ  Request to CM for the establishment of the Karnataka Rajput Development Corporation


ತಾಳಿಕೋಟಿ 17 : ಕಲ್ಯಾಣ ಕರ್ನಾಟಕ ಉತ್ಸವ ಹಿ 2026 ಅಂಗವಾಗಿ ಕಲಬುರಗಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರ್ನಾಟಕ ರಜಪೂತ ಯುವಶಕ್ತಿ ಸಂಘಟನೆಯ ನೇತೃತ್ವದಲ್ಲಿ ಸಮಾಜದ ಪ್ರಮುಖರ ನಿಯೋಗ ಭೇಟಿ ಮಾಡಿ, ರಜಪೂತ ಸಮುದಾಯದ ಬಹುದಿನಗಳ ಬೇಡಿಕೆಯಾದ ‘ಕರ್ನಾಟಕ ರಜಪೂತ ಅಭಿವೃದ್ಧಿ ನಿಗಮ/ಮಂಡಳಿ’ ಸ್ಥಾಪನೆಗೆ ಶಾಸನಬದ್ಧ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿತು.  

ನಿಗಮ ಸ್ಥಾಪನೆಯ ಪ್ರಸ್ತಾವನೆಯನ್ನು ಮುಂಬರುವ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಿ, ಶಾಸನಬದ್ಧ ಅನುಮೋದನೆ ನೀಡಬೇಕು. ನಿಗಮದ ಕಾರ್ಯಾರಂಭಕ್ಕೆ ಅಗತ್ಯವಾದ ಆರಂಭಿಕ ಬಜೆಟ್ ಅನುದಾನ ಬಿಡುಗಡೆ ಮಾಡಿ, ಯುವಜನರಿಗೆ ಉದ್ಯೋಗ, ಶೈಕ್ಷಣಿಕ ಸಾಲ ಹಾಗೂ ಕೌಶಲ ತರಬೇತಿ ಯೋಜನೆಗಳನ್ನು ಆರಂಭಿಸಬೇಕು ಎಂದು ನಿಯೋಗ ಒತ್ತಾಯಿಸಿತು.  

ಕಲ್ಯಾಣ ಕರ್ನಾಟಕದ ಪವಿತ್ರ ಭೂಮಿಯಲ್ಲಿ ಸಮಾಜದ ಬಹುದಿನಗಳ ಬೇಡಿಕೆಯನ್ನು ಮುಖ್ಯಮಂತ್ರಿ ಈಡೇರಿಸುವ ವಿಶ್ವಾಸವಿದೆ ಎಂದು ನಿಯೋಗದ ಸದಸ್ಯರು ವ್ಯಕ್ತಪಡಿಸಿದರು.  ನಿಯೋಗದಲ್ಲಿ ಹೈಕೋರ್ಟ್‌ ವಕೀಲ ಭೂಪೇಂದ್ರ ಸಿಂಗ್, ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ನಾಗೇಂದ್ರ ಸಿಂಗ್ ಠಾಕೂರ್, ಜೇವರ್ಗಿ ರಜಪೂತ ಸಮಾಜದ ಅಧ್ಯಕ್ಷ ಮಂಜು ಸಿಂಗ್ ರಜಪೂತ್, ಶಹಾಬಾದ್ ರಜಪೂತ ಸಮಾಜದ ಅಧ್ಯಕ್ಷ ತುಳಜಾರಾಮ್ ಸಿಂಗ್, ಸುರಪುರದ ಹಿರಿಯ ಮುಖಂಡ ಬಾಬು ಸಿಂಗ್ ದೇವತ್ಕಲ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.