14ರಿಂದ ಧಾರ್ಮಿಕ ಸಮಾವೇಶ: ನಿಮ್ಮ ನಡಿಗೆ ಚಿಕ್ಕಬಾಸೂರ ಕಡೆಗೆ ಎಂಬ ಸಂದೇಶ

ಬ್ಯಾಡಗಿ 12: ಶರಣರ ಸಂದೇಶಗಳು ಸರ್ವಕಾಲಕ್ಕೂ ಅನುಕರಣೀಯ ಅವುಗಳನ್ನು ಪಾಲನೆ ಮಾಡುವ ಮೂಲಕ ಧರ್ಮವನ್ನು ಉಳಿಸಿಕೊಳ್ಳಬೇಕಾಗಿದೆ ಹೀಗಾಗಿ ಸಂಘಟಿತರಾಗಿ ಧಾರ್ಮಿಕ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, 2 ದಿನಗಳ ಕಾಲ ನಡೆಯುವ ಸಮಾವೇಶದ ಯಶಸ್ವಿಗೋಸ್ಕರ ‘ನಿಮ್ಮ ನಡಿಗೆ ಚಿಕ್ಕಬಾಸೂರ ಕಡೆಗೆ’ ಎಂಬ ಸಂದೇಶ ನೀಡುತ್ತಿದ್ದೇವೆ ಎಂದು ಪುಷ್ಟಗಿರಿಮಠದ ಸೋಮಶೇಖರ ಶಿವಾಚಾರ‌್ಯಶ್ರೀಗಳು ಹೇಳಿದರು. 

ತಾಲೂಕಿನ ಚಿಕ್ಕಬಾಸೂರಿನಲ್ಲಿ ಜ.14 ಮತ್ತು 15 ರಂದು ಎರಡು ದಿನಗಳ ಕಾಲ ನಡೆಯಲಿರುವ 851ನೇ ಸಿದ್ಧರಾಮೇಶ್ವರ ಜಯಂತ್ಯುತ್ಸವ ಹಾಗೂ ರಾಜ್ಯಮಟ್ಟದ ನೊಳಂಬ ಲಿಂಗಾಯತ ಸಮಾವೇಶ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. 

ಮುಖ್ಯಮಂತ್ರಿಗಳ ಬಳಿ ಮನವಿ: ಸುಮಾರು 800 ವರ್ಷಗಳ ಹಿಂದೆಯೇ ತಮ್ಮ ಜೀವಿತದ ಅವಧಿಯಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸುವ ಮೂಲಕ ಕಾಯಕಯೋಗಿ ಎನಿಸಿಕೊಂಡಿದ್ದ ಶ್ರೀಗುರು ಸಿದ್ಧರಾಮೇಶ್ವರರು ಮಾಡಿದ ಸಮಾಜಮುಖಿ ಕೆಲಸ ಗಳು ಇಂದಿಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತಿವೆ ಹೀಗಾಗಿ ಶ್ರೀಗಳ ಹೆಸರಿನಲ್ಲೇ ರಾಜ್ಯದಲ್ಲಿ ಬೃಹತ್ ಯೋಜನೆ ಯೊಂದನ್ನು ಘೋಷಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದಾಗಿ ತಿಳಿಸಿದರು. 

ಖಾವಿಗಿರುವ ಶಕ್ತಿ ಅನಾವರಣ: ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವ ಗುರುತರ ಜವಾಬ್ದಾರಿ ಶರಣರು ಮತ್ತು ದಾರ್ಶನಿಕರಿಗಿದೆ, ಪ್ರಸ್ತುತ ದಿನಗಳಲ್ಲಿ ರಾಜಕಾರಣಕ್ಕೂ ಕೂಡ ಅನ್ವಯಿಸುತ್ತಿದ್ದು ಕಾನೂನುಗಳಿಗಿಂತ ಸಮಾಜಮುಖಿ ನಿಸ್ವಾರ್ಥ ಸೇವೆಸಲ್ಲಿಸುವ ಶರಣರ ಅವಶ್ಯಕತೆಯಿದೆ, ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಾದರಿಯಲ್ಲಿ ಪುಷ್ಪ ಗಿರಿಮಠ ಸೇವೆಯಲ್ಲಿ ಕಾರ್ಯನಿರತವಾಗಿದ್ದು ಖಾವಿಗಿರುವ ಶಕ್ತಿಯನ್ನು ಅನಾವರಣಗೊಳಿಸಿದೆ ಎಂದರು. 

ಸಕಲ ಸಿದ್ದತೆಗಳು ನಡೆದಿವೆ: ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಸೇರುವ ನೀರೀಕ್ಷೆಯಿದ್ದು ಸಮಾವೇಶಕ್ಕೆ ಆಗಮಿಸಿದ ಭಕ್ತ ರಿಗೆ ಊಟ, ವಸತಿ ಸೇರಿದಂತೆ ಆಸನಗಳ ವ್ಯವಸ್ಥೆ ಮಾಡಲಾಗಿದೆ, ಜಯಂತಿಗೆ ಅಗಮಿಸುವ ಜನರಿಗೆ ಸಾರಿಗೆ ಸೌಲಭ್ಯ ಹಾಗೂ ಖಾಸಗಿ ವಾಹನಗಳಲ್ಲಿ ಬಂದವರಿಗೆ ಪಾರ್ಕಿಂಗ್ ವ್ಯವಸ್ಥೆಗಳು ನಡೆದಿವೆ, ನಿರಂತರ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ದಿನದ 24 ಗಂಟೆಗಳ ಕಾಲ ವೈದ್ಯಕೀಯ ಸೇವೆ ಕಲ್ಪಿಸಲು ಶಾಸಕರು ಸಚಿವರು ಭರವಸೆ ನೀಡಿದ್ದು ಸಮಾವೇಶ ಅದ್ಧೂರಿಯಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದರು. 

ನಂಬಿದ ಸಮಾಜವನ್ನು ಕೈಬಿಡುವುದಿಲ್ಲ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾರನ್ನೂ ದೂರವಿಡುವಂತಹ ಪ್ರಶ್ನೆಯೇ ಇಲ್ಲ ಶ್ರೀಗುರು ಸಿದ್ಧರಾಮೇಶ್ವರರ ಶರಣ ಸಂಸ್ಮೃತಿ ಆಚಾರ ವಿಚಾರಗಳನ್ನು ಒಪ್ಪಿಕೊಂಡು ಬರುವಂತಹ ಎಲ್ಲಾ ಸಮಾಜಗಳನ್ನು ಶ್ರೀಮಠವು ಅಪ್ಪಿಕೊಳ್ಳುತ್ತಿದೆ, ಇದರಲ್ಲಿ ಅವರು ಇವರು ಎನ್ನುವ ಪ್ರಶ್ನೆಯೇ ಇಲ್ಲ ಹೀಗಾಗಿ ಭೋವಿ ಸಮಾ ಜದ ಅಧ್ಯಕ್ಷರು ಹಾಗೂ ಸದಸ್ಯರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಲಾಗಿದೆ ಎಂದರು.  

ಈ ವೇಳೆ ವಿ.ಜಿ.ಯಳಗೇರಿ, ಪ್ರಭುಲಿಂಗ ದೊಡ್ಮನಿ, ಮಾರುತಿ ಕೆಂಪಗೊಂಡರ, ಚಂದ್ರು ಕರಿಯಪ್ಪನವರ, ಸಿ.ಬಿ.ಮದ್ಯಾಹ್ನದ ಪರಮೇಶ ಕರಿನಾಗಣ್ಣನವರ, ಮಲ್ಲೇಶಪ್ಪ ಅಡವಿ, ಶ್ರೀಕಾಂತ್ ಗೌರಪುರ, ಶಿವನಗೌಡ ದೊಡ್ಡಗೌಡ್ರ ಇನ್ನಿತರರಿದ್ದರು.