ಕಾಲುವೆಗೆ ನೀರು ಹರಿಸಿ, ಬೆಳೆ ಉಳಿಸಿ: ಅಧಿಕಾರಿಗಳೆದುರು ರೈತರ ಅಳಲು

ಕಾಲುವೆಗೆ ನೀರು ಹರಿಸಿ, ಬೆಳೆ ಉಳಿಸಿ: ಅಧಿಕಾರಿಗಳೆದುರು ರೈತರ ಅಳಲು  Release water into the canal and save the crops: Farmers' plea to officials


ಮುದ್ದೇಬಿಹಾಳ 20: ಹೊಲದಲ್ಲಿನ ಬೆಳೆಗಳು ಒಣಗಿ ಹೋಗಿವೆ. ದನ-ಕರುಗಳಿಗೆ ನೀರಿಲ್ಲ, ಮನುಷ್ಯರಿಗೆ ಕುಡಿಯಲೂ ನೀರಿಲ್ಲ. ಹೊಲಕ್ಕೆ ಹೋದಾಗ ಒಣಗಿದ ಬೆಳೆಗಳನ್ನು ನೋಡಿದರೆ ಕಣ್ಣೀರು ಬರುತ್ತದೆ. ಸಾಲ-ಶೂಲ ಮಾಡಿ ಒಂದು ಲಕ್ಷ ರೂಪಾಯಿ ಹಾಕಿ ಬೆಳೆ ಬೆಳೆದಿದ್ದೇವೆ. ಅಧಿಕಾರಿಗಳು ಕಾಲುವೆಗೆ ನೀರು ಬಿಡಲು ಸಿದ್ಧರಿಲ್ಲ. ಹೀಗೆ ಬದುಕುವುದಕ್ಕಿಂತ ಅಧಿಕಾರಿಗಳೇ ವಿಷ ಕೊಟ್ಟರೆ ಕುಡಿದು ಸಾಯುತ್ತೇವೆ ಎಂದು ರೈತ ಸಿದ್ದಪ್ಪ ಮಾದರ ಅವರು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.  

ನೀರಿಲ್ಲದೆ ಬೆಳೆಗಳು ಒಣಗಿ ಹೋಗಿದ್ದು, ಸಾಲದ ಹೊರೆ ಹೆಚ್ಚಾಗಿ ರೈತರು ಕಣ್ಣೀರಿನಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಎ.ಎಲ್‌.ಬಿ.ಸಿ. ಕಾಲುವೆ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಿ ಬೆಳೆಗಳನ್ನು ಉಳಿಸುವ ಜತೆಗೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.  

ಪಟ್ಟಣದ ಕೃಷ್ಣಾ ಭಾಗ್ಯ ಜಲ ನಿಗಮದ ಎ.ಎಲ್‌.ಬಿ.ಸಿ. ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಬುಧವಾರ ತೆರಳಿದ ಚವನಭಾವಿ ಗ್ರಾಮದ ರೈತರು, ಕೆಬಿಜೆಎನ್‌ಎಲ್ ಎಂಜಿನಿಯರ್‌ಗಳಾದ ಬಿ.ಎಂ. ಸಾತಿಹಾಳ ಹಾಗೂ ಎಸ್‌.ಕೆ. ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು.  

ಒಂದೆಡೆ ಬರಗಾಲ,ಮಳೆ ಕೈಕೊಟ್ಟಿರುವುದರಿಂದ ಜಮೀನಿನಲ್ಲಿ ಬೆಳೆದಿರುವ ತೊಗರಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಬೆಳೆಗಾಗಿ ಸಾವಿರಾರು ರೂಪಾಯಿ ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಇದೀಗ ನೀರಿಲ್ಲದೆ ಬೆಳೆ ಕೈಕೊಟ್ಟರೆ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ ಎಂದು ಸಿದ್ದಪ್ಪ ಮಾದರ ಅಳಲು ತೋಡಿಕೊಂಡರು.