ಸಂಸ್ಕಾರವೇ ಬದುಕಿನ ಬೆಳಕು: ಡಾ. ಮಹಾದೇವ ಸ್ವಾಮೀಜಿ

ಸಂಸ್ಕಾರವೇ ಬದುಕಿನ ಬೆಳಕು: ಡಾ. ಮಹಾದೇವ ಸ್ವಾಮೀಜಿ Refinement is the Light of Life: Dr. Mahadeva Swamiji

 ಕೊಪ್ಪಳ 15: “ಮನುಷ್ಯನಿಗೆ ಸಂಪತ್ತು ಇಲ್ಲದಿದ್ದರೂ ಬದುಕಬಹುದು. ಆದರೆ ಸಂಸ್ಕಾರವಿಲ್ಲದಿದ್ದರೆ ಬದುಕೇ ಬರಡಾಗುತ್ತದೆ” ಎಂದು ಕುಕನೂರು ಬೇಟಗೇರಿ ಪೂಜ್ಯ ಡಾ. ಮಹಾದೇವ ಸ್ವಾಮೀಜಿ ಹೇಳಿದರು.  

ಬೇಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ 13ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಬಸವಣ್ಣನವರ “ದಯವಿಲ್ಲದ ಧರ್ಮವು ಯಾವುದು?” ಎಂಬ ವಚನವನ್ನು ಉಲ್ಲೇಖಿಸಿ, ದಯೆ, ಕರುಣೆ, ತ್ಯಾಗ ಮತ್ತು ಸಹನೆ ಇವೇ ಸಂಸ್ಕಾರದ ನಿಜವಾದ ಮುಖಗಳು ಎಂದು ತಿಳಿಸಿದರು.  

“ಶಾಲೆಯಲ್ಲಿ ಅಂಕ ಗಳಿಸುವುದನ್ನು ಮಾತ್ರ ಕಲಿತರೆ ಸಾಕಾಗುವುದಿಲ್ಲ. ಅಕ್ಕಪಕ್ಕದವರ ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಂಸ್ಕಾರವಿಲ್ಲದ ವಿದ್ಯೆ ಎಂದರೆ ಕತ್ತಿ ಹಿಡಿದ ಮಂಗನಂತೆ” ಎಂದು ಅವರು ಅಭಿಪ್ರಾಯಪಟ್ಟರು.  

ಮೈನಹಳ್ಳಿ ಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ, “ಸಂಸ್ಕಾರವೆಂದರೆ ಕೇವಲ ದೊಡ್ಡವರಿಗೆ ನಮಸ್ಕಾರ ಮಾಡುವುದಲ್ಲ. ಮಾತಿನಲ್ಲಿ ವಿನಯ, ನಡೆಯಲ್ಲಿ ನೀತಿ ಹಾಗೂ ಮನದಲ್ಲಿ ಮಾನವೀಯತೆ ಇರುವುದು ನಿಜವಾದ ಸಂಸ್ಕಾರ. ಇಂದಿನ ಮೊಬೈಲ್ ಸಂಸ್ಕೃತಿಯ ನಡುವೆ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಪೋಷಕರು ಪ್ರತಿದಿನ ಕೆಲ ಸಮಯ ಮಕ್ಕಳೊಂದಿಗೆ ಕಳೆಯುತ್ತ ನೀತಿ ಕಥೆಗಳು ಹಾಗೂ ವಚನಗಳನ್ನು ಹೇಳಿಕೊಟ್ಟರೆ ಸಂಸ್ಕಾರದ ಬೀಜ ಬಿತ್ತಿದಂತಾಗುತ್ತದೆ” ಎಂದು ಹೇಳಿದರು.  

ಗುರುಬಸಯ್ಯ ಬೃಹನ್ಮಠ ಅವರು ಮಾತನಾಡಿ, “ಹಿಂದೆ ಅಜ್ಜ-ಅಜ್ಜಿಯರ ಕಥೆಗಳೇ ಸಂಸ್ಕಾರದ ನಿಧಿಯಾಗಿದ್ದವು. ಇಂದು ಟಿವಿ ಮತ್ತು ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿವೆ.

ಹೀಗಾಗಿ ಮಠ-ಮಾನ್ಯಗಳು ಹಾಗೂ ಕುಟುಂಬಗಳು ಸಂಸ್ಕಾರ ಬೆಳೆಸುವ ಹೊಣೆಗಾರಿಕೆಯನ್ನು ವಹಿಸಬೇಕು. ಪ್ರತೀ ಮನೆಯಲ್ಲಿ ವಾರಕ್ಕೊಮ್ಮೆ ‘ಸಂಸ್ಕಾರದ ಒಂದು ಗಂಟೆ’ ಆಚರಿಸಿ, ಮಕ್ಕಳಿಗೆ ಹಿರಿಯರ ಪಾದಪೂಜೆ, ದೀಪ ನಮಸ್ಕಾರ ಹಾಗೂ ವಚನ ಕಂಠಪಾಠದಂತಹ ಮೌಲ್ಯಾಧಾರಿತ ಚಟುವಟಿಕೆಗಳನ್ನು ಪರಿಚಯಿಸಬೇಕು” ಎಂದು ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ಸಿಂದಗಿ ಬಸವನಗೌಡ ದೇಸಾಯಿ, ತಳಕಲ್ ಗ್ರಾಮದ ಮಲ್ಲೇಶಪ್ಪ ಸಿಂಗಾಪುರ, ಪ್ರಭು ಶಿಂಪಿಗಾರ, ಮುತ್ತಯ್ಯ ಹಿರೇಮಠ, ಶಂಕ್ರ​‍್ಪ ಬಡಿಗೇರ, ಬಳಗೇರಿ ಪ್ರಭು, ಬಸವರಡ್ಡಿ, ಮುತ್ತಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಕಾರ್ಯಕ್ರಮದ ಬಳಿಕ ಬೇಟಗೇರಿ ಗ್ರಾಮದ ಬಳಗೇರಿ ಬಂಧುಗಳು ದಾಸೋಹ ವ್ಯವಸ್ಥೆ ಮಾಡಿದರು.