ಅಂಗನವಾಡಿ ಕಾರ್ಯಕರ್ತೆಯರ ಮೇಲಿನ ಹೆಚ್ಚುವರಿ ಹೊರೆ ಕಡಿಮೆ ಮಾಡಿ: ಸಂಘದ ಆಗ್ರಹ

ಅಂಗನವಾಡಿ ಕಾರ್ಯಕರ್ತೆಯರ ಮೇಲಿನ ಹೆಚ್ಚುವರಿ ಹೊರೆ ಕಡಿಮೆ ಮಾಡಿ: ಸಂಘದ ಆಗ್ರಹ Reduce the additional burden on Anganwadi workers: Sangh demands

ರಾಯಬಾಗ 27 : 4 - 6 ವರ್ಷದ ಮಕ್ಕಳ, ಗರ್ಭಿಣಿ, ಬಾಣಂತಿಯರ ಅಪೌಷ್ಠಿಕತೆಯನ್ನು ಹೋಗಲಾಡಿಸಿ ಆರೋಗ್ಯ ರಕ್ಷಣೆ ಮಾಡಲು ಗೌರವ ಧನದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ನೆಲೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಅಂಗನವಾಡಿ ನೌಕರರ ಸಂಘದ ತಾಲೂಕಾ ಅಧ್ಯಕ್ಷೆ ಚನ್ನಮ್ಮ ಗಡಕರಿ ಕಳವಳ ವ್ಯಕ್ತಪಡಿಸಿದ್ದಾರೆ. ಪಟ್ಟಣದ ರಾಣುಬಾಯಿ ದೇವಸ್ಥಾನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಐಸಿಡಿಎಸ್ ಕೇಂದ್ರ ಸರಕಾರದ ಯೋಜನೆಯಾದರೂ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಕೆಲಸ ಮಾತ್ರ ಮಾಡಿಸಿಕೊಳ್ಳುತ್ತಿದ್ದು, 2018 ರಿಂದ ಒಂದು ಪೈಸೆ ಕೂಡಾ ಗೌರವ ಧನ ಹೆಚ್ಚಳ ಮಾಡಿಲ್ಲ. ಅಂಗನವಾಡಿ ಸೇವೆಗೆ ನಿಯೋಜನಗೊಂಡ ಕಾರ್ಯಕರ್ತೆಯರು ಅಂಗನವಾಡಿ ಸೇವೆಗೆ ಮಾತ್ರ ಸೀಮಿತವಾಗಿಲ್ಲ.  

ಭಾಗ್ಯಲಕ್ಷ್ಮಿ ,  ಗೃಹಲಕ್ಷ್ಮಿ , ಮಾತೃವಂದನಾ, ಪೋಷಣ ಟ್ರಾಂಕರ್, ಫೇಸ್ ಕ್ಯಾಪ್ಚರ್, ಆಬಾ, ಆಪಾರ ಐಡಿ, ಪೋಷಣ ಅಭಿಯಾನ ಜೊತೆಗೆ ಬಿಎಲ್‌ಒ ಹೀಗೆ ಹತ್ತು ಹಲವಾರು ಯೋಜನೆಗಳ ಜೊತೆಗೆ ಇಲಾಖೇತರ ಸಮೀಕ್ಷೆಗಳನ್ನೂ ಕೂಡಾ ಮಾಡುವುದರಿಂದ ಮಕ್ಕಳಿಗೆ ಪಾಠ ಮಾಡಲು ಸಮಯ ಸಾಲದೇ ಅಂಗನವಾಡಿಗಳ ಗುಣಮಟ್ಟ ಕುಸಿಯುತ್ತಿದೆ. ಎಲ್ಲ ಕೆಲಸಗಳನ್ನು ಮೋಬೈಲ್ನಲ್ಲಿಯೇ ಮಾಡಬೇಕಾಗಿರುವುದರಿಂದ ನೆಟ್ವರ್ಕ ಬರುವಲ್ಲಿ ಹೋಗಿ ಕೆಲಸ ಮಾಡುವುದು, ಫಲಾನುಭವಿಗಳ ಓಟಿಪಿ ಬರುವವರೆಗೂ ಕಾಯುವುದು. ಒಂದು ವೇಳೆ ಓಟಿಪಿ ಹೇಳಲು ಫಲಾನುಭವಿಗಳ ನಿರಾಕರಣೆ, ಫೇಸ್ ಕ್ಯಾಪ್ಚರ್ ಆಗದ ಹೊರತು ಫಲಾನುಭವಿಗಳಿಗೆ ಮನೆಗೆ ಪೂರಕ ಆಹಾರ ವಿತರಿಸುವಂತಿಲ್ಲ.  

ಹೀಗಾಗಿ ನಿಜವಾದ ಫಲಾನುಭವಿಗಳು ಪೂರಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡದಿದ್ದರೆ ಗೌರವ ಧನ ತಡೆ ಹಿಡಿಯಲಾಗುವದೆಂಬ ಹೆದರಿಕೆ ಬೇರೆ. ಐಸಿಡಿಎಸ್ ಯೋಜನೆಯ ಹೆಸರಿನಲ್ಲಿ ಕಾರ್ಯಕರ್ತೆಯರಿಂದ ಹಲವಾರು ಕೆಲಸಗಳನ್ನು ಮಾಡಿಸಿಕೊಂಡು ನಿಜವಾದ ಐಸಿಡಿಎಸ್ ಯೋಜನೆಯ ಗುರಿ ಹಾಗೂಉದ್ದೇಶಗಳನ್ನು ಸರಕಾರ ಗಾಳಿಗೆ ತೂರಿ ಯೋಜನೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಿದೆ. ಜೊತೆಯಲ್ಲಿಯೇ ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನೂ ಪ್ರಾರಂಭಿಸಿದೆ.

ಈ ಎರಡೂ ಇಲಾಖೆಗಳು ಸರಕಾರದ್ದೇ ಆದರೂ ತದ್ವಿರುದ್ಧವಾಗಿ ಪೈಪೋಟಿ ಎನ್ನುವಂತೆ ಕೆಲಸ ಮಾಡುತ್ತಿವೆ. ಇದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದು ಅಂಗನವಾಡಿಗಳು ಮುಚ್ಚುವ ಸ್ಥಿತಿ ತಲುಪಿವೆ. ಜೊತೆಗೆ ಖಾಸಗಿ ಕಾನ್ವೆಂಟ್ಗಳ ಪ್ರಭಾವ ಹೆಚ್ಚಾಗಿದೆ. ಜನರ ಸೇವೆ, ಅಭಿವೃದ್ಧಿ ಕೆಲಸಗಳನ್ನು ಮಾಡಲೆಂದೇ ಚುನಾಯಿತರಾದ ಜನಪ್ರತಿನಿಧಿಗಳು ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಪಡಿಸುವದಕ್ಕಾಗಿ ಸ್ವಂತ ಶಾಲೆಗಳನ್ನೇಕೆ ತೆರೆಯಬೇಕು? ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಹೆಚ್ಚಿಸಿದರೆ ಶೈಕ್ಷಣಿಕವಾಗಿ ಅಭಿವೃದ್ಧಿಯಾಗುವುದಿಲ್ಲವೇ? ಎಷ್ಟೋ ಜನ ಸುಶಿಕ್ಷಿತರು ಉದ್ಯೋಗಕ್ಕಾಗಿ ಅಲೆದಾಡುತ್ತಾರೆ ಅಂಥ ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟಂತಾಗುವುದಿಲ್ಲವೇ? ಖಾಸಗಿ ಶಾಲೆಗಳಲ್ಲಿ 1 ನೇ ತರಗತಿಯಿಂದ ಶಿಕ್ಷಣ ಪ್ರಾರಂಭಿಸಿ, ಎಲ್ಕೆಜಿ, ಯುಕೆಜಿ ಬಂದ್ ಮಾಡಬೇಕು.

1975 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಆಹಾರ, ಆರೋಗ್ಯ, ಶಿಕ್ಷಣ ಕೊಡಲು ಅಂಗನವಾಡಿ ಕೇಂದ್ರಗಳಿರುವಾಗ ಖಾಸಗಿ ಸಂಸ್ಥೆಗಳಿಗೆ ಎಲ್ಕೆಜಿ, ಯುಕೆಜಿ ತರಗತಿಗಳನ್ನು ನಡೆಸಲು ಸರ್ಕಾರ ಅನುಮತಿ ಕೊಡಬಾರದು. ಕಾರ್ಯಕರ್ತೆಯರಿಗೆ ಐಸಿಡಿಎಸ್ ಯೋಜನೆಯ ಮೂಲ ಉದ್ದೇಶ ಮತ್ತು 6 ಸೇವೆಗಳನ್ನೊಳಗೊಂಡ ಕೆಲಸಗಳನ್ನು ಮಾಡಲು ಮಾತ್ರ ಅವಕಾಶ ನೀಡಬೇಕು. ಹೆಚ್ಚುವರಿ ಕೆಲಸ ಮಾಡಿಸಬಾರದು. ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರದ ಜೊತೆಗೆ ಸೌಲಭ್ಯಗಳನ್ನು ನೀಡಿ ಮತ್ತಷ್ಟು ಉನ್ನತೀಕರಿಸಿ ದೇಶದ ಲಕ್ಷಾಂತರ ಬಡ ಅಂಗನವಾಡಿ ಮಹಿಳೆಯರು ಬೀದಿಗೆಬರದಂತೆ ಸರ್ಕಾರ ತಡೆಯಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಆಯೇಷಾ ದೇಸಾಯಿ, ಸುರೇಖಾ ಪೂಜೇರಿ ಮಹಾದೇವಿ ತರಾಳ, ಇಂದಿರಾ ಬಾಗೋಜಿ, ಶೀಲಾ ಕುಲಕರ್ಣಿ ಉಪಸ್ಥಿತರಿದ್ದರು.