ರಾಮಪುರ : ಶ್ರೀ ವೀರಭದ್ರೇಶ್ವರ, ಮಲ್ಲಿಕಾರ್ಜುನ ದೇವರ ಜಾತ್ರೆ ಅದ್ದೂರಿ ಆಚರಣೆ

ರಾಮಪುರ : ಶ್ರೀ ವೀರಭದ್ರೇಶ್ವರ, ಮಲ್ಲಿಕಾರ್ಜುನ ದೇವರ ಜಾತ್ರೆ ಅದ್ದೂರಿ ಆಚರಣೆ Rampura: Sri Veerabhadreshwar, Mallikarjuna's fair is a grand celebration

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ 18 : ನಗರಸಭೆ ವ್ಯಾಪ್ತಿಯ ರಾಮಪುರದ ವೀರಭದ್ರೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ಜಾತ್ರಾಮಹೋತ್ಸವ ಶ್ರಾವಣ ಮಾಸದ ಶುಕ್ಲಪಕ್ಷ ಷಷ್ಠಿ ತಿಥಿಯಂದು ಮಂಗಳವಾರ ಅದ್ಧೂರಿಯಾಗಿ ಜರುಗಿತು. ಜಾತ್ರೆಯ ನಿಮಿತ್ತ ಮಂಗಳವಾರ ಬೆಳಿಗ್ಗೆ ದೇವರಿಗೆ ವಿಶೇಷ ಅಭಿಷೇಕ, ಹೋಮ-ಹವನ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಬಳಿಕ ವೀರಭದ್ರೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಸಾಗಿತು. ಪಲ್ಲಕ್ಕಿ ಮೆರವಣಿಗೆಯಲ್ಲಿ ಭಕ್ತರು, ವಾದ್ಯಮೇಳ, ಪುರವಂತರು ಹಾಗೂ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ಮೆರವಣಿಗೆಯು ದೇವಸ್ಥಾನದ ಆವರಣಕ್ಕೆ ಮರಳಿ ಸಂಪನ್ನಗೊಂಡಿತು.  ಮಧ್ಯಾಹ್ನ ಪಲ್ಲಕ್ಕಿ ಮೆರವಣಿಗೆ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಹಲವಾರು ಭಕ್ತರು ಅಗ್ನಿಕುಂಡ ಹಾಯ್ದು ಭಕ್ತಿಭಾವ ಮೆರೆದರು.

ದೇವರ ದರ್ಶನ ಹಾಗೂ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.  ಜಾತ್ರೆಗೆ ಆಗಮಿಸಿದ ಭಕ್ತರಿಗೆ ದೇವಸ್ಥಾನದ ವತಿಯಿಂದ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಅನ್ನದಾಸೋಹದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ದಿನವೀಡೀ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.