ಸರ್ವಹಿತಚಿಂತಕ ರಾಮನ ಪೂಜೆಯಿಂದ ಶಾಂತಿ, ನೆಮ್ಮದಿ: ಪ್ರಭುನೀಲಕಂಠ ಸ್ವಾಮೀಜಿ

ರಾಮ ನವಮಿ ಅದ್ಧೂರಿ ಆಚರಣೆ  

ಬೈಲಹೊಂಗಲ 17: ಸರ್ವಹಿತಚಿಂತಕನಾಗಿ ಬದುಕಿದ ಶ್ರೀರಾಮನನ್ನು ಪೂಜಿಸದೆ ಮತ್ತೇ ಯಾರನ್ನು ಪೂಜಿಸಬೇಕು. ರಾಮನಾಮದಿಂದ ಶಾಂತಿ, ನೆಮ್ಮದಿ ದೊರೆಯುತ್ತದೆ. ಅಂತಹ ಶ್ರೀರಾಮನ ದೇವಾಲಯ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವುದು ಭಾರತದ ಹೆಮ್ಮೆಯ ಪ್ರತೀಕವಾಗಿದೆ. ರಾಮನ ದೇವಾಲಯ ಭಾರತದ ಹೃದಯವಾಗಿದೆ ಎಂದು ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.  

ಪಟ್ಟಣದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿಶ್ವಹಿಂದು ಪರಿಷದ್ ವತಿಯಿಂದ ಬುಧವಾರ ನಡೆದ ಶ್ರೀರಾಮ ನವಮಿ ಆಚರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.  

ಶ್ರೀರಾಮನ ಜೀವನ ಭಾರತಕ್ಕೆ ಆದರ್ಶವಾಗಿದೆ. ಅಂತಹ ರಾಮನವಮಿ ಆಚರಣೆ ನಮಗೆ ಸ್ಮರಣೀಯವಾಗಿದೆ. ನೂರಾರು ರಾಮಾಯಣ ಕಥೆಗಳು ಇವೆ. ಆದರೆ ಮೂಲ ರಾಮಾಯಣದ ಕಥೆಯನ್ನು ಅಧ್ಯಯನ ಮಾಡಿ ರೂಢಿಸಿಕೊಳ್ಳಬೇಕು. ಮೂಲ ರಾಮಾಯಣ ಅಧ್ಯಯನ ಮಾಡುವುದರ ಮೂಲಕ ರಾಮನವಮಿ ಆಚರಣೆಯನ್ನು ಪರಿಪೂರ್ಣ ಮಾಡಬೇಕು ಎಂದರು.  

ವಿಶ್ವಹಿಂದು ಪರಿಷದ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ತಾಲ್ಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ ಮಾತನಾಡಿ, ಸೀತಾ ರಾಮ ತಮಗೆ ಎಷ್ಟೇ ನೋವು, ಸಂಕಷ್ಟ ಎದುರಾದರೂ ಅದನ್ನು ಬದಿಗೊತ್ತಿ ರಾಮರಾಜ್ಯ ಕಟ್ಟಿಕೊಟ್ಟು ಆದರ್ಶರಾದರು. ಎಲ್ಲರನ್ನು ಸಮಾನವಾದ ಪ್ರೀತಿ, ಪ್ರೇಮದಿಂದ ಕಂಡ ಏಕೈಕ ವ್ಯಕ್ತಿ ಪ್ರಭು ಶ್ರೀರಾಮ. ಮಕ್ಕಳು ರಾಮನ ಜೀವನಾದರ್ಶಗಳನ್ನು ಸ್ಮರಣೆ ಮಾಡುತ್ತ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ರಾಮನ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ರಾಮರಾಜ್ಯ ಕನಸು ನನಸು ಮಾಡಬೇಕು ಎಂದರು.    

ನಟ ಶಿವರಂಜನ ಬೋಳನ್ನವರ, ಉದ್ಯೆಮಿ ವಿಜಯ ಮೆಟಗುಡ್ಡ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ, ಬಿ.ಬಿ.ಗಣಾಚಾರಿ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಮಹಾಂತೇಶ ಮತ್ತಿಕೊಪ್ಪ, ರಾಜು ನರಸನ್ನವರ, ರಾಜು ಬಡಿಗೇರ, ಸುಭಾಸ ಸಂಪಗಾಂವ, ಸುರೇಶ ನಂದಿಹಳ್ಳಿಮಠ, ಸುಭಾಷ್ ತುರಮರಿ, ನಿವೃತ್ತ  ಯೋಧರಾದ ಬಸವರಾಜ ಸರಾಯದ, ಸಂಗಮೇಶ ರೇಶ್ಮಿ, ರವಿ ವನ್ನೂರ, ಮಾಜಿ ಸೈನಿಕರ ಸಂಘದ ಸದಸ್ಯರು, ಸಂಘಟನೆ ಮುಖಂಡರಾದ ಗೌತಮ ಇಂಚಲ, ಅಶೋಕ ಸವದತ್ತಿ, ರಾಜು ಹರಕುಣಿ, ನಾರಾಯಣ ನಲವಡೆ, ಮಂಜುನಾಥ ಆದರಗಿ, ಮಹೇಶ ಜಾಧವ, ಮಹಾಂತೇಶ ಮಾತನ್ನವರ, ರಾಜಶೇಖರ ಕಟ್ಟಿಮನಿ, ಮಲ್ಲಿಕಾರ್ಜುನ ಏಣಗಿಮಠ, ಅರವಿಂದ ಬೆಟಗೇರಿ, ಅನೇಕರು ಇದ್ದರು.