ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಶಾಸಕ ಗುಡಗುಂಟಿ

ಹಿಗ್ಗಾ ಮುಗ್ಗಾ ತರಾಟೆಗೆ: ಅಧಿಕಾರದ ಚ್ಯಾಳಿ ಮುಂದುವರಿಸಿದರೆ ಕ್ರಮದ ಎಚ್ಚರಿಕೆ 

ಜಮಖಂಡಿ 05: ಚವಳಿಕಾಯಿ, ಬದನೆಕಾಯಿ, ಟೊಮ್ಯಾಟುಗೆ ಹೆಸರಿನ ಮೇಲೆ ಲಕ್ಷಾಂತರ ಹಣವನ್ನು ಖರ್ಚು ಮಾಡಿ, ಬಿಲ್ ತೆಗೆದು ವರದಿಯನ್ನು ಸಲಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ದಾಸರ ಅವರನ್ನು ಶಾಸಕ ಜಗದೀಶ ಗುಡಗುಂಟಿ ಅವರು ಹಿಗ್ಗಾ, ಮುಗ್ಗಾ ತರಾಟೆಗೆ ತೆಗೆದುಕೊಂಡು. ಚವಳಿಕಾಯಿ, ಬದನೆಕಾಯಿ, ಟೊಮ್ಯಾಟು ದರದ ವರದಿ ಹೇಳಲು ಸಾಮಾನ್ಯ ಜ್ಞಾನ ನಿಮಗೆ ಇಲ್ಲವೆ ಎಂದು ತರಾಟೆಗೆ  ತೆಗೆದುಕೊಂಡರು. 

ನಗರದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಜರುಗಿದ ಮೂರನೇ ತ್ರೈಮಾಸಿಕ ಸಭೆಯಲ್ಲಿ ಈ ಪ್ರಸಂಗ ನಡೆಯಿತು. ಅವರ ಮಾತಿಗೆ ಸಭೆಯಲ್ಲಿ ಇದ್ದ ಅಧಿಕಾರಿ ಕಕ್ಕಾಬಿಕ್ಕಿಯಾಗಿ ನಗುವ ಹಾಸ್ಯಸ್ಪದ ಪ್ರಸಂಗ ನಡೆಯಿತು. 

ನಂತರ ಮಾತನಾಡಿದ ಶಾಸಕ ಜಗದೀಶ ಗುಡಗುಂಟಿ ಅವರು, ವಾರ್ಷಿಕ ವರದಿಯಲ್ಲಿ ಲೋಪದೋಷಗಳನ್ನು ಗಮನಿಸಬೇಕು. ಪ್ರತಿಯೊಂದು ಅಂಕಿ, ಅಂಶಗಳು ಒಂದಕ್ಕೊಂದು ಸಂಬಂಧವಿಲ್ಲ. ಸಭೆಗೆ ಬರಬೇಕಾದರೆ ಎಷ್ಟು ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರಾ ಎಂದು ಗೊತ್ತಾಗುತ್ತದೆ. ಹೀಗಾದರೆ ಮಕ್ಕಳ ಭವಿಷ್ಯ ಹೇಗೆ ನೀವು ನಿಭಾಯಿಸುತ್ತಿರಾ. ಖುದ್ದಾಗಿ ನಾನು ಸಾರ್ವಜನಿಕರ ಬಗ್ಗೆ ಸಮಸ್ಯೆ ಹೇಳಿದರೆ ಪೋನ್ ಕರೆಯನ್ನು ಸ್ವೀಕರಿಸದೆ ಉದ್ದಟ್ಟತನ ಮೆರೆಯುತ್ತಿರಿ. ಇನ್ನ ಮುಂದೆ ನಿಮ್ಮ ಇಲಾಖೆಯಿಂದ ಸಾರ್ವಜನಿಕರಿಗೆ ಯಾವುದೇ ತರನಾದ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಯಾರಿಗೂ ತಪ್ಪು ಮಾಹಿತಿಯನ್ನು ನೀಡಬೇಡಿ. ಹೀಗೆ ಮತ್ತೆ ನಿಮ್ಮ ಅಧಿಕಾರದ ಚ್ಯಾಳಿ ಮುಂದುವರಿಸಿದರೆ ನಿಮ್ಮ ಮೇಲೆ ಕ್ರಮಕೈಗೊಳ್ಳಲು ಮೇಲಾಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ತಾಲೂಕು ಆರೋಗ್ಯ ಅಧಿಕಾರಿ ಗೈಬುಸಾಬ ಗಲಗಲಿ ಅವರು ತಮ್ಮ ಇಲಾಖೆಯ ವತಿಯಿಂದ ನಡೆದ, ಶಾಲಾ ಮಕ್ಕಳ ಆರೋಗ್ಯ ತಪಾಸಣೆ ವೇಳೆಯಲ್ಲಿ 12 ಮಕ್ಕಳಿಗೆ ಹೃದಯ ಖಾಯಿಲೆ ಇದ್ದಿದು ಕಂಡುಬಂದಿದೆ. ಅಂತಹ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಗೆ ಕಳಹಿಸಲಾಗಿದೆ ಎಂದು  ಸಭೆಗೆ ಮಾಹಿತಿಯನ್ನು ನೀಡಿದರು. 

ಶಾಸಕ ಮಾತನಾಡಿ ಎಚ್‌ಐವಿ ಪೀಡಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಜೊತೆಗೆ ಉದ್ಯೋಗ ಒದಗಿಸಬೇಕು ಮತ್ತು ಹಾಸ್ಪೆಟೆಲ್‌ದಲ್ಲಿ ಗುಣಮಟ್ಟದ ಆಹಾರ ನೀಡುತ್ತಾ  ಎಲ್ಲ ತರನಾದ ಮೂಲಭೂತವಾದ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆ ಜೊತೆಗೂಡಿ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು. 

ರಾತ್ರಿ ವೇಳೆ ವೈದ್ಯರು ಸರಿಯಾಗಿ ಕೆಲಸ ಮಾಡಬೇಕು. ಎಮರ್ಜೆನ್ಸಿ ರೋಗಿಗಳು ಬಂದಿರುತ್ತಾರೆ. ಅವರಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡಬಾರದು. ನನಗೆ ರೋಗಿಗಳು ಮಧ್ಯ ರಾತ್ರಿಯಲ್ಲಿ ಕರೆ ಮಾಡುತ್ತಾರೆ. ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿದರೆ ನನಗೆ ಯಾಕೆ ಕರೆ ಮಾಡುತ್ತಾರೆ. ಮತ್ತೆ ಹೀಗೆ ಆಗಬಾರದೆಂದು ಮುಖ್ಯ ವೈದ್ಯಾಧಿಕಾರಿ ಕೃಷ್ಣಾ ಬಣ್ಣದ ಅವರಿಗೆ ಹೇಳಿದರು.  

ಶಾಸಕರ ಮಾತಿಗೆ ಉತ್ತರಿಸದ ಮುಖ್ಯ ವೈದ್ಯಾಧಿಕಾರಿ ಹೆಣ್ಣುಮಕ್ಕಳಿಗೆ  ಹೆರಿಗೆಂದು ಬಂದಾಗ ಅವರಿಗೆ ಇನ್ನೂ ನೋವು ಬಂದಿರುವುದಿಲ್ಲ. ಅಂತವರ ಮೇಲೆ ಹನ್ನೆರಡು ಗಂಟೆಗಳ ಕಾಲ ನಿಗಾವಹಿಸಲಾಗುತ್ತದೆ. ಆದರೆ ಅವರಿಗೆ ಅದು ಅರ್ಥವಾಗದೆ ಬೇರೆ ಅವರಿಗೆ ಕರೆ ಮಾಡಿ ತಮ್ಮ ಗಮನಕ್ಕೆ ತರುತ್ತಾರೆ ಎಂದರು. 

ಬೀದಿನಾಯಿ ಮತ್ತು ಬೀದಿದನಗಳ ಹಾವಳಿಗೆ ಯಾವ ಕ್ರಮ ಜರುಗಿಸಿದ್ದಿರಿ, ಇತ್ತೀಚಿಗೆ ಕೆಲವಂದಿಷ್ಟು ನಾಯಿ ಕಡಿತ ಘಟನೆಗಳು ನಗರದಲ್ಲಿ ಹೆಚ್ಚಾಗುತ್ತಿವೆ. ಅದಕ್ಕೇನು ಕ್ರಮ ಜರುಗಿಸಿದ್ದೀರಿ ಎಂದು ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಅವರಿಗೆ ಶಾಸಕರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅವರು ಕಳೆದ ಒಂದು ವರ್ಷದಿಂದ ಬೀದಿ ನಾಯಿ ಹಾವಳಿ ತಡೆಗಟ್ಟಲು ಪ್ರಯತ್ನ ಮಾಡಿದ್ದೇವೆ. ಅದರ ಜೊತೆಗೆ ಪಶು ಸಂಗೋಪನಾಧಿಕಾರಿಗಳ ಜೊತೆಗೆ ಸಮಾಲೋಚಿಸಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿ ಟೆೆಂಡರ ಕರೆಯಲಾಗಿದೆ. ಒಂದು ವಾರದಲ್ಲಿ ಕೆಲಸ ಪ್ರಾರಂಭವಾಗುತ್ತದೆ. ಇನ್ನು ಬೀದಿದನಗಳ ಬಗ್ಗೆ ಈಗಾಗಲೇ 70 ದನಗಳನ್ನು ಗೋಶಾಲೆಗೆ ಸಾಗಿಸಲಾಗಿದ್ದು, ಇನ್ನುಳಿದ ದನಗಳನ್ನು ಒಂದು ವಾರದ ನಂತರ ಸಾಗಾಟ ಮಾಡುತ್ತೇವೆ ಎಂದು ತಿಳಿಸಿದರು. 

ಬೀದಿದನಗಳನ್ನು ಹಾಗೂ ಬೀದಿನಾಯಿಗಳನ್ನು ಹಿಡಿದು ಸಾಗಿಸುವ ಕಾರ್ಮಿಕರಿಗೆ ನಗರಸಭೆಯವರು ಕಡಿಮೆ ಹಣ ನೀಡುತ್ತಿದ್ದಾರೆ. ನಾನೆ ನನ್ನ ಸ್ವಂತ ಹಣವನ್ನು ನೀಡುತ್ತೇನೆ. ಎರಡು ದಿನಗಳಲ್ಲಿ ನಗರದಲ್ಲಿನ ಬೀದಿದನಗಳು, ಬೀದಿನಾಯಿಗಳ ಹಾವಳಿ ಕಡಿಮೆಯಾಗಬೇಕು ಎಂದು ಶಾಸಕರು ತಿಳಿಸಿದರು.  

ವಲಯ ಅರಣ್ಯಾಧಿಕಾರಿ ಸಭೆಯಲ್ಲಿ ಪ್ರಗತಿಯನ್ನು ತಿಳಿಸುತ್ತಿರುವಾಗ ಶಾಸಕರು ಪ್ರಶ್ನಿಸಿಸಮೀಪದ ಗುಡ್ಡದ ಪ್ರದೇಶದ ಕಪ್ಪಲಪಡೆವ್ವ ಬಡಾವಣೆಯಲ್ಲಿ ನೀರಿನ ಸಮಸ್ಯೆಯಾಗಿದ್ದು, ಅಲ್ಲಿ ಕೊಳವೆ ಬಾವಿ ಕೊರೆಯಲು ನೀವು ತಡೆಯೊಡ್ಡಿದ್ದು ಸರಿಯಾದ ಕ್ರಮವಲ.್ಲ ನಾವು ಕರೆ ಮಾಡಿದರೂ ಸಹ ನೀವು ಸ್ಪಂದಿಸಿಲ್ಲ. ಈತರಹ ಮುಂದೆ ಆಗಬಾರದು. ಈಗ ಅಲ್ಲಿ ಕೊಳವೆ ಬಾವಿ ಕೊರೆಯಲು ತೊಂದರೆ ಮಾಡಬೇಡಿ. ಅಲ್ಲಿನ ನಿವಾಸಿಗಳಿಗೆ ನೀರಿನ ಸಮಸ್ಯೆಯಾಗದಂತೆ ನೋಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.  

ವೇದಿಕೆಯಲ್ಲಿ ತಾಪಂ ಇಓ ಭಾರತಿ ಚಲುವಯ್ಯ, ತಾಪಂ ಆಡಳಿತಾಧಿಕಾರಿ ಆರ್, ಮತ್ತು ಆರ್, ಅಧೀಕ್ಷಕ ಹನಮಂತ ದಾಸರ, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಇದ್ದರು.