ಬಾಲಕಿಯನ್ನು ಕೊಂದ ಪಾಪಿಗಳಿಗೆ ಪಾಸಿ ವಿಧಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿ

ವಿಜಯಪುರ ಜಿಲ್ಲೆಯ ಮಡಿವಾಳ ಸಂಘ ರಾಜ್ಯ ಪಾಲರಿಗೆ ಮನವಿ 

ವಿಜಯಪುರ 24: ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಅನುಶ್ರೀ ರಾಘವೇಂದ್ರ ಮಡಿವಾಳರ ಈಕೆಯ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಕೂಡಲೇ ಪತ್ತೆ ಮಾಡಿ ನೊಂದ ಕುಟುಂಬ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ಮಡಿವಾಳ ಸಂಘ ವಿಜಯಪುರ ಜಿಲ್ಲೆಯ ಮಡಿವಾಳ ಸಂಘದ ಪದಾಧಿಕಾರಿಗಳು ವಿಜಯಪುರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು. 

ಮಡಿವಾಳ ಸಂಘದ ಅಧ್ಯಕ್ಷ ಸಾಯಿಬಣ್ಣ ಮಡಿವಾಳರ ಮಾತನಾಡಿ, ಅನುಶ್ರೀ ಮಡಿವಾಳ(7 ವರ್ಷ,) ಈಕೆ ದಿ.19ರಂದು ಮನೆಯಿಂದ ಆಟವಾಡಲು ಹೊರಗೆ ಹೋಗಿ ಮನೆಗೆ ವಾಪಸ್ಸು ಮರಳಿ ಬಾರದ ಕಾರಣ ಬಾಲಕಿಯ ಪೋಷಕರು ಸಾಕಷ್ಟು ಹುಡುಕಿದ್ದು, ಸಿಗದ ಕಾರಣ ಪೋಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದ್ದು, ಅಪಹರಣ ಪ್ರಕರಣ ದಾಖಲಾಗಿತ್ತು. ಪುನಃ ಬಾಲಕಿಯು ಪತ್ತೆಯಾಗಿರಲಿಲ್ಲ.  

ದಿ.21ರಂದು ಕಾಣಿಯಾದ ಬಾಲಕಿಯ ಶವವೂ ಕಿನ್ನಾಳ ಗ್ರಾಮದಲ್ಲಿ ಊರದ ಮಧ್ಯದಲ್ಲಿರುವ ಅಂದು ಬಿದ್ದ ಮನೆಯ ಖುಲ್ಲಾ ಜಾಗೆಯಲ್ಲಿ ಬಾಲಕಿಯನ್ನು ಕೊಲೆ ಮಾಡಿ ಶವವನ್ನು ಗೋಣಿ ಚೀಲದಲ್ಲಿ ಹಾಕಿ, ಬಾಯಿ ಕಟ್ಟಿ ಬಿಸಾಕಿದ್ದರು.  

ಪೋಲಿಸರು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆಂಬುದರ ಬಗ್ಗೆ ಪತ್ತೆ ಹಚ್ಚಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು. ಮತ್ತು ಕೊಲೆಯಾದ ಅನುಶ್ರೀಯ ನೊಂದ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕು. ರಾಜ್ಯದಲ್ಲಿ ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಸಾರ್ವಜನಿಕರು ಭಯಭೀತರಾಗಿದ್ದಾರೆ. ಹಳ್ಳಿಯಲ್ಲಿ ಪೊಲೀಸರ ಗಸ್ತು ಇಲ್ಲ. ಇನ್ನಾದರೂ ಎಚ್ಚೆತ್ತು ಪೊಲೀಸ ಇಲಾಖೆಯು ರಾಜ್ಯಾದ್ಯಂತ ಪೊಲೀಸರ ಗಸ್ತನ್ನು ಹೆಚ್ಚಿಸಬೇಕಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನಕಣ್ಣಿಡಬೇಕು. ಸಾರ್ವಜನಿಕರಿಗೆ ಭಯಭೀತರಾಗದಂತೆ ರಕ್ಷಣೆ ಒದಗಿಸಿ ಕಾನೂನು ಸುವ್ಯವಸ್ಥೆ ಕಲ್ಪಿಸಬೇಕು. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ರಕ್ಷಣೆ ಸೂಕ್ತ ಭದ್ರತೆಗಾಗಿ ಪೊಲೀಸ್ ಇಲಾಖೆ ಜೊತೆ ಸರ್ಕಾರ ಶ್ರಮಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ವಿಶೇಷವಾದ ಕಟ್ಟುನಿಟ್ಟಾದ ಕಾನೂನನ್ನು ಜಾರಿಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. 

ಕೂಡಲೇ ಈ ದುಷ್ಕೃತ್ಯ ಎಸಗಿದ ನೀಚ ಆರೋಪಿತರಿಗೆ ಪತ್ತೆ ಹಚ್ಚಿ ಪಾರದರ್ಶಕವಾಗಿ ಅವರಿಗೆ ಪಾಸಿ ವಿಧಿಸಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಷ್ಟಾದರೂ ಸಂತ್ರಸ್ತ ಕುಟುಂಬದ ಮನೆಗೆ ಯಾವೊಬ್ಬ ಅಧಿಕಾರಿ, ರಾಜಕಾರಣಿಗಳು ಆಗಮಿಸಿ ಸಾಂತ್ವನ ಹೇಳದಿರುವುದು ವಿಷಾದಕರ ಸಂಗತಿ. ಸಣ್ಣ ಸಣ್ಣ ಸಮುದಾಯಗಳಿಗೆ ನ್ಯಾಯ ಮರೀಚೀಕೆಯಾಗಿದೆ. ಕೂಡಲೇ ಎಚ್ಚೆತ್ತುಕೊಂಡು ಸರ್ಕಾರ ನ್ಯಾಯ ಒದಗಿಸಬೇಕು ಎಂದರು. ನ್ಯಾಯ ಕೊಡಿಸುವಲ್ಲಿ ವಿಳಂಬವಾದಲ್ಲಿ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಪ್ರಧಾನ ಕಾರ್ಯದರ್ಶಿ ಬಾಬು ಪಿ. ಬಳ್ಳಾರಿ ಮಾತನಾಡಿದರು. ಮುತ್ತಪ್ಪ ಪಿ. ಮಡಿವಾಳರ, ಶಿವಪ್ಪ ಹುಬ್ಬಳ್ಳಿ, ಪ್ರಭು ಮಡಿವಾಳರ, ಐ.ಡಿ. ಅಗಸರ, ಷಣ್ಮುಖ ಮಡಿವಾಳರ, ಪರಸು ಮಲಕನವರ, ಮಲಕಪ್ಪ ಹುಬ್ಬಳ್ಳಿ, ಶಿವಕುಮಾರ ಪರೀಟ, ಶಿವಪ್ಪ ಎಲ್‌. ಮಡಿವಾಳರ, ಗೀರೀಶ ಅಗಸರ, ಈಶ್ವರ ಎಸ್‌. ಅಗಸರ, ಶ್ರೀಶೈಲ ಅಗಸರ, ವಿರುಪಾಕ್ಷ ಮಡಿವಾಳರ, ಮಡಿವಾಳಪ್ಪ ಅಗಸರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.